ಸೋಮವಾರ, ಜೂನ್ 21, 2021
21 °C

ಉತ್ತರ ಕನ್ನಡ: ಪರಿಸರ ಸ್ನೇಹಿ ಗಣೇಶನ ಪೂಜೆ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ‘ಕೆರೆಯಿಂದ ಮಣ್ಣನ್ನು ತಂದು ಅದಕ್ಕೊಂದು ರೂಪ ನೀಡುತ್ತೇವೆ. ಸಂಪ್ರದಾಯದಂತೆ ಪೂಜಿಸಿ ಮರಳಿ ಕೆರೆಗೆ ಬಿಟ್ಟಾಗ, ಮೊದಲಿನ ರೂಪದಲ್ಲಿಯೇ ಮಣ್ಣು ನೀರಿಗೆ ಸೇರುವಂತಿರಬೇಕು. ರಾಸಾಯನಿಕ ಬಳಿದು ವಿಸರ್ಜಿಸಿದರೆ ನೀರು ಕಲುಷಿತಗೊಂಡು, ಪರಿಸರ ಹಾನಿಗೆ ನಮ್ಮ ಕೊಡುಗೆ ನೀಡಿದಂತಾಗುತ್ತದೆ’ ಎನ್ನುತ್ತಾರೆ ಮೂರ್ತಿ ಕಲಾವಿದ ಮೌನೇಶಪ್ಪ ಬಡಿಗೇರ.

ಪಟ್ಟಣದ ಆನಂದ ನಗರ ನಿವಾಸಿಯಾಗಿರುವ ಇವರು, 25 ವರ್ಷಗಳಿಂದ ಕೇವಲ ಮಣ್ಣಿನ ಗಣಪತಿ ಮೂರ್ತಿಗಳನ್ನೇ ತಯಾರು ಮಾಡುತ್ತಿದ್ದಾರೆ. ಪುತ್ರ ಸಂತೋಷ ತಂದೆಯ ಜೊತೆ ಕೈಜೋಡಿಸುತ್ತಾರೆ.

‘ಈ ಹಿಂದೆ, ಬಣ್ಣ ಹಚ್ಚಿದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳಿಗೆ ಭಕ್ತರು ಒಲವು ತೋರುತ್ತಿರುವುದು ಕಂಡುಬಂದಿದೆ. ಬಣ್ಣದ ಮೂರ್ತಿಗಳನ್ನು ಮಾಡಲು ಹಾಗೂ ಮಾರಲು ಅವಕಾಶ ನೀಡಬಾರದು. ಪರಿಸರ ಪೂರಕವಾಗಿ ಹಬ್ಬ ಆಚರಿಸುವುದರಲ್ಲಿಯೇ ಶ್ರೇಷ್ಠತೆ ಇದೆ’ ಎಂದರು.

ಕೊರೊನಾ ಪರಿಣಾಮ

‘ಕೊರೊನಾದಿಂದ ಸಾರ್ವಜನಿಕ ಗಣೇಶ ಮೂರ್ತಿ ತಯಾರಿಕೆ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ. ಪ್ರತಿ ವರ್ಷ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ 10–15 ಮೂರ್ತಿಗಳನ್ನು ತಯಾರು ಮಾಡುತ್ತಿದ್ದೆ. ಆದರೆ, ಈ ವರ್ಷ ಕೇವಲ ಒಂದೆರೆಡು ಬೇಡಿಕೆ ಬಂದಿವೆ. ಮನೆ ಗಣಪತಿಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ 100ಷ್ಟು ತಯಾರು ಮಾಡಲಾಗಿದೆ. ಹಬ್ಬದ ದಿನದವರೆಗೆ ಭಕ್ತರು ಬಂದು ಅವುಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ಆ ನಂತರವೇ ಅವುಗಳ ಬೇಡಿಕೆಯಲ್ಲಿ ಆಗಿರುವ ವ್ಯತ್ಯಾಸ ಗೊತ್ತಾಗಲಿದೆ’ ಎನ್ನುತ್ತಾರೆ ಮೌನೇಶಪ್ಪ.

‘ಗೊಟಗೋಡಿ, ಬೆಂಡಿಗೇರಿಯಿಂದ ಮಣ್ಣು ತಂದು ಮೂರು ತಿಂಗಳು ಮುಂಚೆಯೇ ಕಾಯಕ ಆರಂಭವಾಗುತ್ತದೆ. ನಿರಂತರ ಮಳೆಯಿಂದ ಈ ಸಲ ಮಣ್ಣಿನ ಮೂರ್ತಿಗಳು ಬೇಗ ಒಣಗುತ್ತಿಲ್ಲ. ಹಸಿ ಗಣಪತಿಯೂ ಚೆಂದಗೆ ಕಾಣುತ್ತದೆ. ಈ ವರ್ಷ ಹಬ್ಬದ ಕಳೆ ಸ್ವಲ್ಪ ಕುಂದಿದಂತೆ ಕಾಣುತ್ತಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು