ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರ ಸಮುದಾಯದ ಮಕ್ಕಳ ಆಶಾಕಿರಣ

ಭಟ್ಕಳದ ಬಂದರು ಮಾವಿನಕುರ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಭಟ್ಕಳ: ಇಲ್ಲಿ ಸರ್ಕಾರಿ ಶಾಲೆಯು ಬಡ ಮೀನುಗಾರ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸ್ಥಾಪನೆಯಾಯಿತು. ತನ್ನ ಮೂಲ ಉದ್ದೇಶವನ್ನು ಇಂದಿಗೂ ಸಮರ್ಥವಾಗಿ ಈಡೇರಿಸುತ್ತಿದೆ.

ಬಂದರುಪ್ರದೇಶದಲ್ಲಿ, ಇಂದಿನ ಮಾವಿನಕುರ್ವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಈ ಹಿರಿಯ ಪ್ರಾಥಮಿಕ ಶಾಲೆಯು 1932ರಲ್ಲಿ ಆರಂಭವಾಯಿತು.ಐತಿಹಾಸಿನ ಹಿನ್ನೆಲೆಯಿರುವ ಇಲ್ಲಿ ಸುತ್ತಲೂ ಗುಡ್ಡ, ಹಸಿರಿನ ರಾಶಿ, ಕಣ್ಣಳತೆಯಲ್ಲೇ ಕಾಣುವ ಸಮುದ್ರವಿದೆ. ಅದರಸನಿಹದಲ್ಲೇ ಇರುವ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆದು ಇಂದು ಉನ್ನತ ಹುದ್ದೆಯಲ್ಲಿದ್ದಾರೆ.

ಆರಂಭದಲ್ಲಿ ಕೇವಲ 10ರಿಂದ 15 ಮಕ್ಕಳೊಂದಿಗೆ ಆರಂಭವಾಯಿತು. ಈಗ ಶಾಲೆಯಲ್ಲಿ 61 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಖ್ಯಶಿಕ್ಷಕರೂ ಸೇರಿದಂತೆ ಮೂವರು ಶಿಕ್ಷಕಿಯರು, ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರತಿವರ್ಷ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳಲ್ಲದೇ ಶ್ರಮದಾನ, ವಿವಿಧ ಕ್ರೀಡಾಕೂಟಗಳು, ಸಾಂಸ್ಕೃತಿಕ ಸ್ಪರ್ಧೆ, ಪ್ರಬಂಧ, ರಸಪ್ರಶ್ನೆಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ಮಮತಾ ವಾರಿಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣಕ್ಕೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳು, ಶೌಚಾಲಯ, ಕೋಣೆ ಎಲ್ಲ ಇದ್ದರೂ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಶಾಲೆಗೆ ಕುಡಿಯುವ ನೀರಿನ ಬಾವಿಯ ಅಗತ್ಯವಿದೆ. ಈಗ ಸ್ಥಳೀಯ ಗ್ರಾಮ ಪಂಚಾಯ್ತಿ ನೀರು ಪೂರೈಸುತ್ತಿದ್ದರೂ ಅದನ್ನು ಕುಡಿಯಲು ಸಾಧ್ಯವಿಲ್ಲ. ಶಾಲೆಯು ಗುಡ್ಡದ ಮೇಲೆ ಇರುವುದರಿಂದ ಕೆಳಗೆ ಇರುವ ಬಾವಿಯಿಂದ ನೀರನ್ನು ಎತ್ತಬೇಕು. 2007ರಲ್ಲಿ ಕೊಂಕಣ ಖಾರ್ವಿ ಸಮಾಜದವರು ನೀರೆತ್ತುವ ದೊಡ್ಡ ಪಂಪ್ (ಅಂದಿನ ಬೆಲೆ ₹19 ಸಾವಿರ) ಶಾಲೆಗೆ ದೇಣಿಗೆಯಾಗಿ ನೀಡಿದ್ದರು. ಅದರಿಂದ ನೀರನ್ನು ಎತ್ತಿಕೊಳ್ಳಲಾಗುತ್ತಿದೆ ಎಂದು ಮುಖ್ಯಶಿಕ್ಷಕಿ ಮಮತಾ ಅವರು ಹೇಳಿದರು.

ಶಾಲೆಯ ಕಟ್ಟಡ ಹಳೆಯದಾಗಿದ್ದು, ಹೊಸ ಕಟ್ಟಡದ ಅಗತ್ಯವಿದೆ. ಸರಿಯಾದ ಮೈದಾನವೂ ಇಲ್ಲ. ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಕೊರತೆಯಿದೆ.ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಯೋಚಿಸಲಾಗಿದೆ. ಸ್ಥಳೀಯ ಯುವಕ ಸಂಘದವರು ಒಂದು ಕಂಪ್ಯೂಟರನ್ನು ದೇಣಿಗೆಯಾಗಿ ನೀಡಿದ್ದಾರೆ.ಮತ್ತಷ್ಟು ಕಂಪ್ಯೂಟರ್‌ಗಳಅಗತ್ಯವಿದೆ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಕೃಷ್ಣ ಮೊಗೇರ್ಮಾಹಿತಿ ನೀಡಿದರು.

ಕ್ರೀಡೆಯಲ್ಲೂ ಮುಂದೆ: ಕ್ರೀಡೆಯಲ್ಲಿ ಸ್ವಲ್ಪ ಮುಂದೆಯೇ ಇರುವ ಈ ಶಾಲೆಯ ವಿದ್ಯಾರ್ಥಿಗಳು,2012–13ಸಾಲಿನಲ್ಲಿ 400ಮೀಟರ್ ರಿಲೇ, ಹೈಜಂಪ್ಹಾಗೂ ಲಾಂಗ್‌ ಜಂಪ್ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ ಗೆದ್ದುಕೊಂಡಿದ್ದಾರೆ. ಅಲ್ಲದೇ 2013ರಿಂದ 19ರವರೆಗೆ ಸತತವಾಗಿಏಳುಬಾರಿ ಖೋಖೋಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ ಬಹುಮಾನಜಯಿಸಿದ್ದಾರೆ.

ಶೈಕ್ಷಣಿವಾಗಿಯೂ ಮುಂದಿರುವ ಶಾಲೆ ಪ್ರತಿ ವರ್ಷ ಶೇ100 ಫಲಿತಾಂಶ ದಾಖಲಿಸುತ್ತಿದೆ ಎಂದು ಶಾಲೆಯ ಹಿರಿಯ ಶಿಕ್ಷಕರಾದ ಪಾಂಡು ನಾರಾಯಣ ನಾಯ್ಕ ಹೆಮ್ಮೆಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT