ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ರಾಜ್ಯದ ಕಾಂಡ್ಲಾ’ ಘೋಷಣೆಗೆ ಒತ್ತಾಯ

ರಾಜ್ಯದಲ್ಲಿರುವ ಸುಮಾರು 16 ಪ್ರಭೇದಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನಿರೀಕ್ಷೆ
Last Updated 16 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದ ಕಾಂಡ್ಲಾ ಸಸಿಗಳ ಸಂರಕ್ಷಣೆ ಮತ್ತು ಅವುಗಳನ್ನು ವಿಶೇಷವಾಗಿ ಗುರುತಿಸಲು ‘ರಾಜ್ಯದ ಕಾಂಡ್ಲಾ ಪ್ರಭೇದ’ವನ್ನು ಸರ್ಕಾರವು ಘೋಷಿಸಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

ರಾಜ್ಯದ ಕರಾವಳಿಯಲ್ಲಿ ಕಾಂಡ್ಲಾದ ಸುಮಾರು 16 ಪ್ರಭೇದಗಳಿವೆ. ಅವುಗಳಲ್ಲಿ ಗುಲಾಬಿ ಬಣ್ಣದ ಹೂ ಬಿಡುವ ‘ಸೊನಾರೇಶಿಯಾ ಫಿಸಲರೀಸ್’, ಉಪಯೋಗಕಾರಿಯಾಗಿರುವ ‘ಅವಿಸಿನ್ನಿಯಾ’, ‘ರೈಸೋಫೋರಾ’ ಸೇರಿದಂತೆ ಯಾವುದಾದರೂ ತಳಿಯನ್ನು ಪರಿಗಣಿಸಬೇಕು ಎಂಬ ಅಭಿಪ್ರಾಯ ಹಲವರದ್ದಾಗಿದೆ.

ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ ಅನ್ನು ಅಪಾರ ಪ್ರಮಾಣದಲ್ಲಿ ಹೀರಿಕೊಳ್ಳುವ ಗುಣ ಕಾಂಡ್ಲಾ ಗಿಡಗಳಿಗಿದೆ. ತಜ್ಞರು ಹೇಳುವ ಪ್ರಕಾರ ಐದು ಮೀಟರ್ ಉದ್ದ ಬೆಳೆದಿರುವ ಒಂದು ಕಾಂಡ್ಲಾ ಗಿಡವು, ದೊಡ್ಡದಾಗಿ ಬೆಳೆದಿರುವ ಒಂದು ಮರಕ್ಕೆ ಸಮಾನವಾಗಿದೆ. ಅವುಗಳನ್ನು ಬೆಳೆಸುವ ಮೂಲಕ ನದಿ ದಂಡೆ, ನಡುಗಡ್ಡೆಗಳಲ್ಲಿ ಭೂ ಸವಕಳಿ ತಡೆಯಲು ಸಾಧ್ಯವಿದೆ.

‘ಕಾಂಡ್ಲಾ ಸಸಿಗಳು ಇರುವ ಜಾಗದಲ್ಲಿ ಒಂದು ಮೀಟರ್‌ ಆಳದವರೆಗೂ ಕಪ್ಪು ಮಣ್ಣು ಇರುತ್ತದೆ. ಇಡೀ ಪ್ರಪಂಚದಲ್ಲಿ ಒಟ್ಟು ಕಾಡಿನ ಕೇವಲ ಒಂದು ಶೇಕಡಾದಷ್ಟು ಮಾತ್ರ ಕಾಂಡ್ಲಾ ಇದೆ. ಆದರೆ, ಅದು ವಾತಾವರಣದಲ್ಲಿರುವ ಶೇ 19ರಷ್ಟು ಇಂಗಾಲವನ್ನು ಹೀರಿಕೊಳ್ಳುತ್ತದೆ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಅಧ್ಯಯನ ಕೇಂದ್ರದ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.

ಏನು ಪ್ರಯೋಜನ?:

ನಿರ್ದಿಷ್ಟವಾದ ಪ್ರಭೇದವನ್ನು ‘ರಾಜ್ಯದ ಕಾಂಡ್ಲಾ ಗಿಡ’ ಎಂದು ಗುರುತಿಸುವುದು ಇದರ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಇರುವ ಆಸಕ್ತಿಯನ್ನು ತೋರಿಸುತ್ತದೆ. ವಾತಾವರಣದಲ್ಲಿ ಇರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯ, ದೇಶ ಕೈಗೊಂಡಿರುವ ಕ್ರಮವನ್ನು ಜಗತ್ತಿಗೆ ತಿಳಿಸಲು ಅನುಕೂಲವಾಗಲಿದೆ ಎನ್ನುತ್ತಾರೆ ಅವರು.

ನದಿಗಳ ನಡುಗಡ್ಡೆಗಳಲ್ಲಿ ಕಾಂಡ್ಲಾ ಕಾಡು ಬೆಳೆಸುವ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೂ ಅವಕಾಶವಿದೆ. ಹೊನ್ನಾವರದಲ್ಲಿ ಮಾಡಿರುವ ‘ಕಾಂಡ್ಲಾ ವಾಕ್’ ಮಾದರಿಯ ಚಟುವಟಿಕೆಗಳಿಗೆ ಇತರೆಡೆಯೂ ಅವಕಾಶ ಸಿಗಲಿದೆ ಎಂದು ಅವರು ಹೇಳುತ್ತಾರೆ.

ಮಹಾರಾಷ್ಟ್ರದಲ್ಲಿ ವಿಶೇಷ ಗುರುತು:

ಮಹಾರಾಷ್ಟ್ರದಲ್ಲಿ ಅಲ್ಲಿನ ವನ್ಯಜೀವಿ ಮಂಡಳಿಯು ‘ಸೊನರೇಶಿಯಾ ಆಲ್ಬಾ’ ಎಂಬ ಕಾಂಡ್ಲಾ ತಳಿಯನ್ನು ‘ರಾಜ್ಯದ ಕಾಂಡ್ಲಾ ಗಿಡ’ ಎಂದು ಆ.8ರಂದು ಘೋಷಿಸಿದೆ. ಬಿಳಿ ಹೂವು ಬಿಡುವ ಈ ಪ್ರಭೇದವನ್ನು ಅಲ್ಲಿ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಪಡಿಸಲಾಗುತ್ತದೆ. ಕಾಂಡ್ಲಾ ಪ್ರದೇಶವನ್ನು ‘ಸಂರಕ್ಷಿತ ಅರಣ್ಯ’ ಎಂದು ಘೋಷಿಸಲು ಅಲ್ಲಿನ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ 2015ರಲ್ಲಿ ನಿರ್ದೇಶನ ನೀಡಿತ್ತು.

‘ಪ್ರಕ್ರಿಯೆಗೆ ಮರು ಚಾಲನೆ’:

‘ರಾಜ್ಯದಲ್ಲಿ ಕಾಂಡ್ಲಾ ಹಾಗೂ ಸಮುದ್ರ ತೀರದಲ್ಲಿರುವ ಇತರ ಸಸ್ಯ ಪ್ರಭೇದಗಳ ಸಂರಕ್ಷಣೆಗೆ ‘ಕರಾವಳಿ ಹಸಿರು ಕವಚ’ ಯೋಜನೆಯನ್ನು 2010ರಲ್ಲಿ ರೂಪಿಸಲಾಗಿತ್ತು. ಅದರಲ್ಲಿ ಕಾಂಡ್ಲಾ ಸಂರಕ್ಷಣೆಯ ಬಗ್ಗೆ ವಿಶೇಷ ಗಮನ ಹರಿಸಿ ಹಣಕಾಸು ನೆರವು ನೀಡಲಾಗಿದೆ’ ಎನ್ನುತ್ತಾರೆ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

‘ಅಘನಾಶಿನಿ ಮತ್ತು ಕಾಳಿ ನದಿಯಲ್ಲಿ ಕಾಂಡ್ಲಾ ಸಸಿಗಳಿರುವ ಎರಡು ಪ್ರದೇಶಗಳನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಘೋಷಿಸಲು ಜೀವ ವೈವಿಧ್ಯ ಮಂಡಳಿಗೆ 10 ವರ್ಷಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಕಾರಣಾಂತರಗಳಿಂದ ಅದು ಬಾಕಿಯಾಗಿತ್ತು. ಈ ಪ್ರಕ್ರಿಯೆಗೆ ಮತ್ತೆ ಚಾಲನೆ ಕೊಡಲಾಗುವುದು’ ಎಂದೂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT