ಸೋಮವಾರ, ಜುಲೈ 4, 2022
24 °C
Falling poching Suppression Camp Force No Security for Tiger Rescuers

ಕುಸಿದ ಕಳ್ಳಬೇಟೆ ನಿಗ್ರಹ ಶಿಬಿರ ಶಕ್ತಿ: ಹುಲಿ ರಕ್ಷಕರಿಗೆ ಇಲ್ಲ ಭದ್ರತೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ (ಕೆ.ಟಿ.ಆರ್) ಕಳ್ಳಬೇಟೆ ನಿಗ್ರಹಿಸಲು ಸ್ಥಾಪಿಸಲಾಗಿದ್ದ ಶಿಬಿರಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಂಖ್ಯೆ ಈಚೆಗೆ ಅರ್ಧದಷ್ಟು ಇಳಿಕೆಯಾಗಿದೆ. ಸೀಮಿತ ಸಂಖ್ಯೆಯಲ್ಲಿರುವ ಸಿಬ್ಬಂದಿ ಒತ್ತಡ, ಭಯದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿ ಸಂರಕ್ಷಿತಾರಣ್ಯಗಳ ನಿರ್ವಹಣೆಗೆ ಒದಗಿಸುತ್ತಿರುವ ಅನುದಾನ ಅರ್ಧಕ್ಕಿಂತ ಕಡಿಮೆಯಾಗಿದೆ. ಸರಾಸರಿ ₹8 ಕೋಟಿಯಷ್ಟಿದ್ದ ಅನುದಾನ ₹3.5 ಕೋಟಿಗೆ ಇಳಿಕೆಯಾಗಿದೆ ಎನ್ನುತ್ತಿವೆ ಅರಣ್ಯ ಇಲಾಖೆ ಮೂಲಗಳು.

ದಾಂಡೇಲಿ ವನ್ಯಜೀವಿ ಅಭಯಾರಣ್ಯದ 475 ಚದರ್ ಕಿ.ಮೀ ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನದ 339.86 ಚದರ ಕಿ.ಮೀ ವ್ಯಾಪ್ತಿಯನ್ನು ಒಳಗೊಂಡ ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಪ್ರಾಣಿ ಬೇಟೆ ತಡೆಗೆ ಅಲ್ಲಲ್ಲಿ ಕಳ್ಳಬೇಟೆ ನಿಗ್ರಹ ಶಿಬಿರ (ಆ‍್ಯಂಟಿ ಪೋಚಿಂಗ್ ಕ್ಯಾಂಪ್) ಸ್ಥಾಪಿಸಲಾಗಿದೆ.

ಪ್ರತಿ ಶಿಬಿರದಲ್ಲಿ ಈ ಮೊದಲು ನಾಲ್ಕು ಮಂದಿ ಸಿಬ್ಬಂದಿ ಇದ್ದರು. ಆರು ತಿಂಗಳಿನಿಂದ ಈ ಸಂಖ್ಯೆ 2ಕ್ಕೆ ಇಳಿಕೆಯಾಗಿದೆ. ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ 44 ಶಿಬಿರಗಳ ಪೈಕಿ ಹಲವು ಸ್ಥಗಿತಗೊಂಡಿವೆ.

‘ಜನವಸತಿ ಸ್ಥಳದಿಂದ ಬಹುದೂರದಲ್ಲಿರುವ ಶಿಬಿರಗಳಲ್ಲಿ ಇಬ್ಬರೇ ವಾಸವಿರುತ್ತೇವೆ. ರಕ್ಷಣೆಗೆ ಆಯುಧ ಇಲ್ಲ. ಹೆಚ್ಚಿನ ಜನರಿಲ್ಲದ ಕಾರಣ ವನ್ಯಜೀವಿ ದಾಳಿ ನಡೆಸುವ ಆತಂಕ ಕಾಡುತ್ತಿದೆ’ ಎಂದು ಶಿಬಿರದ ಸಿಬ್ಬಂದಿಯೊಬ್ಬರು ಸಮಸ್ಯೆ ವಿವರಿಸಿದರು.

‘ನಾಲ್ಕು ಮಂದಿ ಕೆಲಸವನ್ನು ಇಬ್ಬರೇ ಮಾಡಬೇಕಿರುವುದರಿಂದ ರಜೆಯೂ ಸಿಗುತ್ತಿಲ್ಲ. ಕೆಲಸದ ಒತ್ತಡವೂ ಹೆಚ್ಚಿದೆ. ಯಾವುದೇ ಸೂಚನೆ ನೀಡದೆ ಈ ಹಿಂದೆ ಹಲವರನ್ನು ಕೆಲಸದಿಂದ ತೆಗೆಯಲಾಗಿದೆ. ಇದರಿಂದ ನಮಗೂ ಉದ್ಯೋಗದ ಅಭದ್ರತೆ ಕಾಡುತ್ತಿದೆ’ ಎಂದು ದೂರಿದರು.

‘ಕಳ್ಳಬೇಟೆ ನಿಗ್ರಹ ಶಿಬಿರಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಜತೆಗೆ ರಕ್ಷಣೆ ಸಲುವಾಗಿ ಅರಣ್ಯ ರಕ್ಷಕರೊಬ್ಬರನ್ನು ನಿಯೋಜಿಸಿದ್ದೇವೆ’ ಎಂದು ಕುಂಬಾರವಾಡಾ ಎಸಿಎಫ್ ಶಿವಾನಂದ ತೋಡ್ಕರ್ ಹೇಳಿದರು.

‘ಶಿಬಿರಗಳಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿರುವ ಪರಿಣಾಮ ಬೇಟೆ ಹೆಚ್ಚಳವಾಗುವ ಆತಂಕವಿದೆ. ಇದರಿಂದ ಹುಲಿಗಳಿಗೆ ಆಹಾರ ಕೊರತೆಯೂ ಉಂಟಾಗಬಹುದು’ ಎಂದು ವನ್ಯಜೀವಿ ಕಾರ್ಯಕರ್ತ ಪಿ.ಗಿರೀಶ್ ಆತಂಕ ವ್ಯಕ್ತಪಡಿಸಿದರು.

---------

ಸೀಮಿತ ಅನುದಾನದಲ್ಲಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಉಂಟಾದ್ದರಿಂದ ಕೆಲವೇ ಸಿಬ್ಬಂದಿಯಿಂದ ಶಿಬಿರ ನಡೆಸಬೇಕಾಗಿದೆ.

ಕೆ.ವಿ.ವಸಂತ ರೆಡ್ಡಿ, ಸಿಸಿಎಫ್, ಕೆನರಾ ಅರಣ್ಯ ವೃತ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು