‘ಅಡಿಕೆ, ಕಾಳುಮೆಣಸು ಕೊಳೆರೋಗಕ್ಕೆ ಪರಿಹಾರ ನೀಡಿ’

7
ಆಸಾಮಿ ಸಾಲವನ್ನು 'ಕೃಷಿಸಾಲ' ವೆಂದು ಪರಿಗಣಿಸಲು ರೈತರ ಒಕ್ಕೊರಲ ಒತ್ತಾಯ

‘ಅಡಿಕೆ, ಕಾಳುಮೆಣಸು ಕೊಳೆರೋಗಕ್ಕೆ ಪರಿಹಾರ ನೀಡಿ’

Published:
Updated:
Deccan Herald

ಶಿರಸಿ: ಅತಿವೃಷ್ಟಿ ಕಾರಣದಿಂದ ಅಡಿಕೆ ಮತ್ತು ಕಾಳುಮೆಣಸಿಗೆ ಕೊಳೆರೋಗ ತಗುಲಿ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ನಾಶವಾದ ಬೆಳೆಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ, ಸಾವಿರಕ್ಕೂ ಅಧಿಕ ರೈತರು ಶನಿವಾರ ಇಲ್ಲಿ ಬೃಹತ್ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ರಾಜು ಮೊಗವೀರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಉತ್ತರ ಕನ್ನಡ ಜಿಲ್ಲಾ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ತೋಟಗಾರರ ಕಲ್ಯಾಣ ಮಂಟಪದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳ ಅಡಿಕೆ ಬೆಳೆಗಾರು, ರಾಜಕೀಯ ಪಕ್ಷಗಳ ಮುಖಂಡರು, ಸಂಘ–ಸಂಸ್ಥೆಗಳ ಪ್ರಮುಖರು, ಕೃಷಿ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

‘ಜಿಲ್ಲೆಯ ಹೆಚ್ಚಿನ ಭಾಗಗಳು ಭೌಗೋಳಿಕವಾಗಿ ಮಲೆನಾಡು ಪ್ರದೇಶವನ್ನು ಹೊಂದಿದ್ದು, ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಳುಮೆಣಸು, ಬಾಳೆ ಇವುಗಳ ಜೊತೆಗೆ ಭತ್ತ ಹಾಗೂ ಕಬ್ಬು ಬೆಳೆಯಲಾಗುತ್ತದೆ. ಬಹುಪಾಲು ಜನರು ಅಡಿಕೆ ಹಾಗೂ ಕಾಳುಮೆಣಸು ಬೆಳೆಯುತ್ತಿದ್ದಾರೆ. ಅತಿವೃಷ್ಟಿ ಕಾರಣ ಈ ಬೆಳೆಗೆ ವ್ಯಾಪಕವಾಗಿ ಕೊಳೆರೋಗ ಹರಡಿದೆ.ಶೇ 40ರಿಂದ 60ರಷ್ಟು ಬೆಳೆ ರೋಗಕ್ಕೆ ತುತ್ತಾಗಿದೆ. ಕಾಳುಮೆಣಸಿನ ಬಳ್ಳಿಗಳು ನಾಶವಾಗಿದ್ದು, ಪುನಃ ಬಳ್ಳಿಗಳನ್ನು ಬೆಳೆಸಿ, ಫಲ ಪಡೆಯಲು ನಾಲ್ಕೈದು ವರ್ಷಗಳು ಬೇಕಾಗುತ್ತವೆ. ಮಳೆ ಹೆಚ್ಚಿರುವುದರಿಂದ ರೋಗ ಉಲ್ಬಣಿಸುವ ಸಾಧ್ಯತೆಯಿದೆ. ಇರುವ ಬೆಳೆ ಉಳಿಸಿಕೊಳ್ಳಲು ಜಿಂಕ್, ಬೋರಾನ್, ಬೇವಿನಹಿಂಡಿ, ಕೃಷಿ ಸುಣ್ಣ ಮೊದಲಾದ ಪೋಷಕಾಂಶಗಳನ್ನು ಉಚಿತವಾಗಿ ನೀಡಬೇಕು. ಕೃಷಿಗಾಗಿ ರೈತರು ಮಾಡಿರುವ ಆಸಾಮಿ ಸಾಲವನ್ನು ಕೃಷಿ ಸಾಲವನ್ನಾಗಿ ಪರಿವರ್ತಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಆಸಾಮಿ ಸಾಲ ಕೃಷಿ ಸಾಲವಾದಾಗ ಮಾತ್ರ ಸರ್ಕಾರ ಘೋಷಿಸುವ ಸಾಲ ಮನ್ನಾ ಬಡ್ಡಿ ರಿಯಾಯಿತಿಯಂತಹ ಯೋಜನೆ ರೈತರಿಗೆ ಸಿಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮೆರವಣಿಗೆಯ ಪೂರ್ವದಲ್ಲಿ ತೋಟಗಾರರ ಕಲ್ಯಾಣ ಮಂಟಪದಲ್ಲಿ ರೈತರ ಸಭೆ ನಡೆಯಿತು. ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಪ್ರಮುಖರಾದ ರಾಮಕೃಷ್ಣ ಹೆಗಡೆ ಕಡವೆ, ಜಿ.ವಿ.ಜೋಶಿ ಕಾಗೇರಿ, ಎಂ.ಜಿ.ಹೆಗಡೆ ಗೆಜ್ಜೆ, ಭೀಮಣ್ಣ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ, ಉಷಾ ಹೆಗಡೆ, ಬಸವರಾಜ ದೊಡ್ಮನಿ ಇದ್ದರು. ಎನ್.ಬಿ.ಹೆಗಡೆ ನಿರೂಪಿಸಿದರು. ಗೋಪಾಲಕೃಷ್ಣ ವೈದ್ಯ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !