ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಯೂರಿಯಾಕ್ಕಾಗಿ ರೈತರಿಂದ ಊರೂರು ಅಲೆದಾಟ

ಮಹಿಳೆಯರು, ಮಕ್ಕಳಿಂದ ಸರದಿಯಲ್ಲಿ ನಿಂತು ಗೊಬ್ಬರ ಖರೀದಿ
Last Updated 23 ಜೂನ್ 2021, 14:55 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನಲ್ಲಿ ಶೇ 80ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಬೆಳೆಗೆ ರಸಗೊಬ್ಬರ ಹಾಕಿ, ಇಳುವರಿ ಹೆಚ್ಚಿಸಲು ರೈತ ಮುಂದಾಗಿದ್ದಾರೆ. ಆದರೆ, ಸಹಕಾರ ಸಂಘಗಳಲ್ಲಿ ಯೂರಿಯಾ ಗೊಬ್ಬರದ ಕೊರತೆ, ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.

ಊರಿಂದ ಊರಿಗೆ ರೈತರು ಅಲೆದಾಡುತ್ತ, ಒಂದೋ ಎರಡು ಚೀಲಗಳನ್ನು ತಂದು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇತ್ತ ಸಹಕಾರ ಸಂಘಗಳ ಪ್ರಮುಖರು, ‘ಗೊಬ್ಬರಕ್ಕಾಗಿ ಒಂದು ತಿಂಗಳ ಹಿಂದೆ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದೇವೆ. ಇನ್ನೂ ಬಂದಿಲ್ಲ’ ಎಂದು ರೈತರಿಗೆ ಸಮಾಧಾನಪಡಿಸಲು ಹೆಣಗಾಡುತ್ತಿದ್ದಾರೆ.

ತಾಲ್ಲೂಕಿನ ಎಲ್ಲ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ, ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ (ಟಿ.ಎ.ಪಿ.ಸಿ.ಎಂ.ಎಸ್) ರಸಗೊಬ್ಬರ ಪೂರೈಕೆಯಾಗುತ್ತಿತ್ತು. ಆದರೆ, ಈ ವರ್ಷ ಒಂದೆರೆಡು ಸೊಸೈಟಿಗಳಿಗೆ ಬಿಟ್ಟರೇ ಉಳಿದ ಗ್ರಾಮಗಳ ಸೊಸೈಟಿಗಳಿಗೆ ತಲುಪಿಲ್ಲ. ಇದರಿಂದ ರೈತರು ರಸಗೊಬ್ಬರಕ್ಕಾಗಿ ಪಟ್ಟಣಕ್ಕೆ ನಿತ್ಯ ಅಲೆದಾಡುತ್ತಿದ್ದಾರೆ.

‘ಸರ್ಕಾರದ ನಿರ್ದೇಶನದಂತೆ ಯೂರಿಯಾ ಗೊಬ್ಬರದ ಜೊತೆಗೆ, ಜಿಂಕ್, ಬೋರಾನ್ ಸೇರಿದಂತೆ ಇತರ ಗೊಬ್ಬರಗಳನ್ನು ಲಿಂಕೇಜ್ ಆಗಿ ಖರೀದಿಸಬೇಕು. ಖಾಸಗಿ ಅಂಗಡಿಯವರು ಲಿಂಕೇಜ್ ಗೊಬ್ಬರವನ್ನೂ ಖರೀದಿಸುತ್ತಾರೆ. ಅವರಿಗೆ ಯೂರಿಯಾ ಗೊಬ್ಬರದ ಕೊರತೆ ಆಗುವುದಿಲ್ಲ. ಆದರೆ, ವ್ಯವಸಾಯ ಸಹಕಾರ ಸಂಘಗಳು ಕೇವಲ ಯೂರಿಯಾ ಬೇಕು ಎಂದು ಬೇಡಿಕೆ ಸಲ್ಲಿಸಿವೆ. ಅಲ್ಲಿಯೂ ಪೂರೈಕೆಯಾಗುತ್ತಿಲ್ಲ. ಇದರಿಂದ ಸಮಸ್ಯೆ ಉದ್ಭವವಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ವಿವರಿಸುತ್ತಾರೆ.

‘ಹಾವೇರಿ, ದಾವಣಗೆರೆ, ರಾಣೆಬೆನ್ನೂರು ಸೇರಿದಂತೆ ಎಲ್ಲಿ ಗೊಬ್ಬರ ಸಿಗುತ್ತದೆಯೋ ಅಲ್ಲಿಂದ ತರಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಆದರೆ, ಲಿಂಕೇಜ್ ಗೊಬ್ಬರ ಖರೀದಿ ಮಾಡದ ಹೊರತು ಯೂರಿಯಾ ಸರಬರಾಜು ಮಾಡಲು ಪೂರೈಕೆದಾರರು ಒಪ್ಪುತ್ತಿಲ್ಲ. ಸುತ್ತಲಿನ ಎಲ್ಲ ತಾಲ್ಲೂಕುಗಳಲ್ಲೂ ಯೂರಿಯಾದ ಕೊರತೆ ಇದೆ’ ಎಂದು ಟಿ.ಎ.ಪಿ.ಸಿ.ಎಂ.ಎಸ್ ವ್ಯವಸ್ಥಾಪಕ ಮಂಜುನಾಥ ಹೇಳುತ್ತಾರೆ.

ಖಾಸಗಿ ಅಂಗಡಿಗಳಲ್ಲಿ ಲಭ್ಯ:

‘ತಾಲ್ಲೂಕಿನ ವ್ಯವಸಾಯ ಸಹಕಾರ ಸಂಘಗಳಲ್ಲಿ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಆದರೆ ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಸಿಗುತ್ತದೆ. ಅದಕ್ಕೆ ದರ ಹೆಚ್ಚಿಗೆ ಕೊಡಬೇಕು. ಖಾಸಗಿ ಅಂಗಡಿಯವರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ರೈತರು ಅನಿವಾರ್ಯವಾಗಿ ಹೆಚ್ಚಿನ ದರ ಕೊಟ್ಟು ಖರೀದಿಸಬೇಕಾಗಿದೆ’ ಎಂದು ರೈತರಾದ ಪರಶುರಾಮ ಬಂಕಾಪುರ, ಫಕ್ಕೀರೇಶ ಅಂತೋಜಿ, ಮಹೇಶ ಲಮಾಣಿ ಸೇರಿದಂತೆ ಹಲವು ರೈತರು ದೂರುತ್ತಾರೆ.

‘ಒಂದೊಂದು ಕುಟುಂಬದಲ್ಲಿ ಐದಾರು ಆಧಾರ್ ಕಾರ್ಡ್‌ಗಳಿರುತ್ತವೆ. ಅದರ ಆಧಾರದಲ್ಲಿ ಗೊಬ್ಬರ ವಿತರಿಸಿದರೆ ಒಂದೇ ಕುಟುಂಬಕ್ಕೆ ಹೆಚ್ಚಿನ ಗೊಬ್ಬರ ವಿತರಿಸಿದಂತಾಗುತ್ತದೆ. ಇದರ ಬದಲು, ಉತಾರ ನೋಡಿ ಗೊಬ್ಬರ ವಿತರಿಸಿದರೆ ಎಲ್ಲರಿಗೂ ಸಿಗುತ್ತದೆ’ ಎನ್ನುತ್ತಾರೆ ರೈತ ಸಂತೋಷ ಶಿಂಧೆ.

ಅಂಕಿ ಅಂಶ

5,500 ಚೀಲ

ವಿತರಣೆಯಾದ ಯೂರಿಯಾ

₹265

ಪ್ರತಿ ಚೀಲ ಯೂರಿಯಾ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT