ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲ ಸೇತುವೆ ಮೇಲೆ ಆತಂಕದ ಸವಾರಿ

ಅತಿವೃಷ್ಟಿಯಿಂದ ಹೆಚ್ಚಿದ ಹಾನಿ; ದುರಸ್ಥಿಗೆ ಕಡಿಮೆ ಅನುದಾನ
Last Updated 17 ಫೆಬ್ರುವರಿ 2022, 5:07 IST
ಅಕ್ಷರ ಗಾತ್ರ

ಶಿರಸಿ: ಕಳೆದ ಮುಂಗಾರು ಅವಧಿಯಲ್ಲಿ ಸುರಿದ ಅತಿವೃಷ್ಟಿಯ ಪರಿಣಾಮ ನದಿಗಳು ಉಕ್ಕೇರಿ ಜಿಲ್ಲೆಯ ಘಟ್ಟದ ಮೇಲಿನ ನೂರಾರು ಸೇತುವೆಗಳಿಗೆ ಹಾನಿ ಉಂಟುಮಾಡಿವೆ. ಶಿಥಿಲಗೊಂಡಿರುವ ಸೇತುವೆಗಳ ಮೇಲೆ ಸಂಚರಿಸಲು ಜನ ಭಯಬೀಳುವಂತಾಗಿದೆ.

ಆರೇಳು ದಶಕಗಳಿಗೂ ಹಳೆಯ ಸೇತುವೆಗಳು ಸಾಕಷ್ಟಿವೆ. ಇಲ್ಲಿನ ಕೆಂಗ್ರೆ ಸೇತುವೆ, ಪಟ್ಟಣಹೊಳೆ ಸೇತುವೆ ಸೇರಿದಂತೆ ಹಲವು ಪ್ರಮುಖ ಸೇತುವೆಗಳು ನದಿ ಉಕ್ಕೇರಿದ್ದ ವೇಳೆ ಮರದ ದಿಮ್ಮಿಗಳ ಹೊಡೆತಕ್ಕೆ ಸಿಲುಕಿದ್ದವು. ಯಲ್ಲಾಪುರ, ಮುಂಡಗೋಡ, ಜೋಯಿಡಾ ಭಾಗದಲ್ಲಿಯೂ ಸೇತುವೆಗಳಿಗೆ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.

ಈಚಿನ ವರ್ಷದಲ್ಲಿ ನಿರ್ಮಾಣವಾದ ಕೆಲವು ಸೇತುವೆಗಳನ್ನು ಹೊರತುಪಡಿಸಿದರೆ ಹಳೆಯ ಸೇತುವೆಗಳ ಎರಡೂ ಬದಿಯಲ್ಲಿರುವ ಸುರಕ್ಷಾ ಗೋಡೆ (ರೇಲಿಂಗ್ಸ್) ನದಿ ಪಾಲಾಗಿದೆ. ಕಂಬಗಳಿಗೆ ಧಕ್ಕೆ ಉಂಟಾಗಿದೆ.

‘ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಳೆ ಬೀಳುತ್ತಿರುವ ಪರಿಣಾಮ ನದಿ ಉಕ್ಕೇರಿ ಸೇತುವೆಗಳಿಗೆ ನಿರಂತರ ಹಾನಿಯಾಗಿದೆ. ಬಿರುಕು ಬಿಟ್ಟ ಜಾಗಕ್ಕೆ ತೇಪೆ ಹಚ್ಚುವ ಕೆಲಸ ಮಾತ್ರ ನಡೆದಿದೆಯೆ ಹೊರತು ಅವುಗಳನ್ನು ಸರಿಯಾಗಿ ದುರಸ್ಥಿಪಡಿಸಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಎನ್.ಹೆಗಡೆ.

‘ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುವ ಕಾರಣ ನದಿಯ ರಭಸದ ಹರಿವು, ಮರದ ದಿಮ್ಮಿಗಳ ಡಿಕ್ಕಿ ಮುಂತಾದ ಕಾರಣಕ್ಕೆ ಸೇತುವೆ ಕಂಬಗಳಿಗೆ ಹಾನಿ ಹೆಚ್ಚಿರುತ್ತದೆ. ಹೀಗಾಗಿ ಹಳೆಯ ಸೇತುವೆಗಳ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಪ್ರತಿ ವರ್ಷ ತಜ್ಞರಿಂದ ಪರಿಶೀಲನೆ ನಡೆಸಬೇಕು. ಆದರೆ ಈ ಕೆಲಸಗಳು ನಡೆದಿಲ್ಲ. ಸೇತುವೆಗಳ ಸಾಮರ್ಥ್ಯದ ಬಗ್ಗೆ ಆತಂಕವೂ ಇದೆ’ ಎಂದು ಹೇಳಿದರು.

167 ಸೇತುವೆಗಳಿಗೆ ಹಾನಿ:

ಶಿರಸಿ ವಿಭಾಗದ ಎಂಟು ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ 167 ಸೇತುವೆಗಳಿಗೆ ಹಾನಿ ಉಂಟಾಗಿದೆ ಎಂದು ಪಿಡಬ್ಲ್ಯೂಡಿ ಅಂದಾಜಿಸಿದೆ. ಈ ಪೈಕಿ ರಾಜ್ಯ ಹೆದ್ದಾರಿಯಲ್ಲಿರುವ 51 ಪ್ರಮುಖ ಸೇತುವೆಗಳಿದ್ದರೆ, ಜಿಲ್ಲಾ ಮುಖ್ಯರಸ್ತೆಯಲ್ಲಿ 116 ಸೇತುವೆಗಳಿವೆ. ಈ ಪಟ್ಟಿಯಲ್ಲಿ ದೊಡ್ಡದಾದ ಕಲ್ವರ್ಟ್‌ಗಳು ಸೇರಿವೆ ಎಂಬುದು ಇಲಾಖೆ ನೀಡಿರುವ ಮಾಹಿತಿ.

‘ಅತಿವೃಷ್ಟಿಯಿಂದ ಹಾನಿಗೊಳಗಾದ ಸೇತುವೆಗಳ ದುರಸ್ಥಿಗೆ ಅನುದಾನ ಬಿಡುಗಡೆಯಾಗಿದ್ದು ಆದಗಯತೆ ಮೇಲೆ ಕೆಲಸವನ್ನೂ ಆರಂಭಿಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲಿ ದುರಸ್ಥಿ ಕಾರ್ಯಗಳನ್ನು ನಡೆಸಲಾಗುವುದು’ ಎಂದು ಪಿಡಬ್ಲ್ಯೂಡಿ ಪ್ರಭಾರ ತಾಂತ್ರಿಕ ಸಲಹಾಧಿಕಾರಿ ಭಾನುಪ್ರಕಾಶ್ ಪ್ರತಿಕ್ರಿಯಿಸಿದರು.

ಅರ್ಧಕ್ಕಿಂತ ಅಲ್ಪ ಅನುದಾನ:

‘ಅತಿವೃಷ್ಟಿ ಕಾರಣಕ್ಕೆ ಶಿರಸಿ ವಿಭಾಗದಲ್ಲಿ ಸೇತುವೆ, ರಸ್ತೆಗಳಿಗೆ ಭಾರಿ ಪ್ರಮಾಣದ ಹಾನಿ ಉಂಟಾಗಿತ್ತು. ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಭಾಗದಲ್ಲಿ ಹಾನಿ ಪ್ರಮಾಣ ಹೆಚ್ಚಿದ್ದವು. 167 ಸೇತುವೆಗಳ ದುರಸ್ಥಿಗೆ ₹46 ಕೋಟಿಗಿಂತ ಹೆಚ್ಚು ಅನುದಾನಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ಬಿಡುಗಡೆಯಾಗಿದ್ದು ಕೇವಲ ₹19.26ಕೋಟಿ ಮಾತ್ರ. ಹೀಗಾಗಿ ತುರ್ತು ನಿರ್ವಹಣೆ ಮಾಡಬೇಕಾದ ಸೇತುವೆಗಳಿಗೆ ಮಾತ್ರ ಆದ್ಯತೆ ನೀಡಲು ಸಾಧ್ಯವಿದೆ’ ಎಂದು ಪಿಡಬ್ಲ್ಯೂಡಿ ಹಿರಿಯ ಅಧಿಕಾರಿಯೊಬ್ಬರು ಸಮಸ್ಯೆ ವಿವರಿಸಿದರು.

ಅಂಕಿ–ಅಂಶ

167 ಹಾನಿಗೊಳಗಾದ ಸೇತುವೆಗಳು

77 ಸದ್ಯ ದುರಸ್ಥಿಯಾಗಲಿರುವ ಸೇತುವೆಗಳು

₹46.26 ಕೋಟಿ ದುರಸ್ಥಿಗೆ ಅಗತ್ಯವಿದ್ದ ಅನುದಾನ

₹19.54 ಕೋಟಿ ಬಿಡುಗಡೆಯಾದ ಅನುದಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT