ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸ್ಪೀಕರ್‌ಗೆ ನಾಗರಿಕ ಸನ್ಮಾನ 6ಕ್ಕೆ

ಜಿಲ್ಲೆಗೆ ಮೊದಲ ಬಾರಿಗೆ ದೊರೆತಿರುವ ಸ್ಥಾನಮಾನ
Last Updated 2 ಆಗಸ್ಟ್ 2019, 11:11 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಯೊಬ್ಬರಿಗೆ ಇದೇ ಮೊದಲ ಬಾರಿಗೆ ವಿಧಾನಸಭೆ ಸ್ಪೀಕರ್ ಹುದ್ದೆ ದೊರೆತಿದೆ. ಈ ಹೊಣೆಗಾರಿಕೆ ವಹಿಸಿಕೊಂಡಿರುವ ಶಿರಸಿ–ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆ.6ರ ಮಧ್ಯಾಹ್ನ 3.30ಕ್ಕೆ ತೋಟಗಾರರ ಕಲ್ಯಾಣ ಮಂಟಪದಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿಯಾದ ಕಾಗೇರಿಯವರಿಗೆ ವಿಶೇಷ ರಾಜಕೀಯ ಸ್ಥಾನಮಾನ ಲಭಿಸಿದೆ. ಸ್ಪೀಕರ್ ಆಗುವ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ. ಪಕ್ಷಾತೀತವಾಗಿ ಅವರಿಗೆ ನಾಗರಿಕ ಸನ್ಮಾನ ಸಲ್ಲಿಸಲಾಗುವುದು’ ಎಂದರು.

ಪ್ರಸ್ತುತ ರಾಜಕೀಯ ವಿದ್ಯಮಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಲ್ಲಾಪುರದ ಶಿವರಾಮ ಹೆಬ್ಬಾರ್ ಅವರು ಈ ಹಿಂದೆ ಎರಡು ಅವಧಿಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ವರಿಷ್ಠರು ಸೂಚಿಸಿದರೆ, ಸೇರಸಿಕೊಳ್ಳಲಾಗುತ್ತದೆ. ಯಲ್ಲಾಪುರ ಕ್ಷೇತ್ರದ ಉಪಚುನಾವಣೆಗೆ ಹೈಕಮಾಂಡ್ ಆಯ್ಕೆ ಮಾಡುವ ಅಭ್ಯರ್ಥಿಪರ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಾರೆ’ ಎಂದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲರ ವಿರುದ್ಧ ಕೆಲಸ ಮಾಡಿದವರ ಮೇಲೆ ಕ್ರಮವಹಿಸುವಂತೆ ರಾಜ್ಯ ನಾಯಕರಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಗಳನ್ನು ಅಂತ್ಯಗೊಳಿಸುವಂತೆ ಸರ್ಕಾರವನ್ನು ವಿನಂತಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರಮುಖರಾದ ಆರ್.ಡಿ.ಹೆಗಡೆ, ಆರ್.ವಿ.ಹೆಗಡೆ, ಗಣಪತಿ ನಾಯ್ಕ, ನಾಗರಾಜ ನಾಯ್ಕ, ಜಿ.ಕೆ.ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT