ಶುಕ್ರವಾರ, ಮೇ 27, 2022
29 °C
ಭಗವದ್ಗೀತೆಯೇ ಪಕ್ಷದ ಚಿಹ್ನೆ: ಭಟ್ಕಳದಿಂದ ಪ್ರಾಯೋಗಿಕವಾಗಿ ಸ್ಪರ್ಧೆ

50 ಸನ್ಯಾಸಿಗಳು ಚುನಾವಣಾ ಅಖಾಡಕ್ಕೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ (ಉತ್ತರ ಕನ್ನಡ): ‘ಶಾಸಕಾಂಗದ ಸಮಗ್ರ ಬದಲಾವಣೆಗಾಗಿ, ರಾಜ್ಯದಲ್ಲಿ 50 ಸನ್ಯಾಸಿಗಳು ಮುಂದಿನ ವಿಧಾನಸಭಾ  ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಪ್ರೇರಣೆ ಪಡೆದಿದ್ದೇವೆ’ ಎಂದು ಉಜಿರೆ ಶ್ರೀರಾಮಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಸಮೀಪದ ಸಾರದ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಸೋಮವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದು ರಾಜ್ಯಾಂಗದ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ. ಇದರ ಪರಿಕಲ್ಪನೆಯೇ ಇಲ್ಲದೆ ಶಾಸಕರು ವಿಧಾನಸಭೆಯಲ್ಲಿ ಅಶಿಸ್ತಿನ ವರ್ತನೆ ತೋರುತ್ತಿದ್ದಾರೆ. ಇಂದಿನ ಕಾಲದಲ್ಲಿ ರಾಜಕೀಯಕ್ಕೆ ಬರುವುದೇ ಪ್ರಚಾರಕ್ಕಾಗಿ, ಹಣಕ್ಕಾಗಿ, ಸುಖಭೋಗಕ್ಕಾಗಿ ಎಂದು ತಿಳಿದಿದ್ದಾರೆ. ವಿದ್ಯಾವಂತರಲ್ಲದ ರಾಜಕಾರಣಿಗಳು ಇಂದು ತಮ್ಮ ಸಾಮರ್ಥ್ಯ ನಿಭಾಯಿಸುವಲ್ಲಿ ಅಸಮರ್ಥರಾಗುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಉತ್ತರಾಖಂಡದ ನಾಗಾ ಸಾಧುಗಳ ಜೂನಾ ಅಖಾಡದಲ್ಲಿ ನಾನೂ ಒಬ್ಬ ಪಂಥನಿದ್ದೇನೆ. ಈಗಾಗಲೇ ಈ ಬಗ್ಗೆ ನಮ್ಮಲ್ಲಿ ಹಲವು ಚರ್ಚೆಗಳು ನಡೆದಿವೆ. ಸನಾತನ ಹಿಂದೂ ಧರ್ಮವನ್ನು ತಿದ್ದಬೇಕು. ಹಾಗಾಗಿ ರಾಮರಾಜ್ಯ ಕಲ್ಪನೆಯಲ್ಲಿ ಭಗವದ್ಗೀತೆಯನ್ನು ಪಕ್ಷದ ಚಿಹ್ನೆಯನ್ನಾಗಿ ಇಟ್ಟುಕೊಂಡು ಭಟ್ಕಳದಿಂದ ಪ್ರಾಯೋಗಿಕವಾಗಿ ನಾನು ಸ್ಪರ್ಧಿಸುವ ಯೋಚನೆಯಲ್ಲಿದ್ದೇನೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಶಾಸಕಾಂಗ, ನ್ಯಾಯಾಂಗ ಹಾಗೂ ರಾಜ್ಯಾಂಗದ ವಿಕೇಂದ್ರಿಕರಣ ಆಗಬೇಕು. ಆದರೆ, ಕೇಂದ್ರೀಕರಣ ಆಗುತ್ತೀರುವುದು ವಿಷಾದನೀಯ. ಧರ್ಮ ಹಾಗೂ ರಾಜಕೀಯ ಒಟ್ಟಿಗೆ ಹೋಗಬೇಕು. ರಾಜ್ಯದಲ್ಲಿ ತ್ಯಾಗಿ ರಾಜಕಾರಣಿ ಮುಂದೆ ಬರಬೇಕು. ಹಾಗಾದಲ್ಲಿ ರಾಜ್ಯದಲ್ಲಿ ಸಮಾನತೆ ತರಲು ಸಾಧ್ಯ’ ಎಂದು ಪ್ರತಿಪಾದಿಸಿದರು.

‘ಈ ಹಿಂದೆ ಕೃಷ್ಣ, ರಾಮರ ಕಾಲದಲ್ಲಿ ರಾಜ್ಯಾಂಗ ಹಾದಿ ತಪ್ಪಿದಾಗ ಋಷಿಮುನಿಗಳು ಮಧ್ಯಪ್ರವೇಶಿಸುತ್ತಿದ್ದರು. ಈಗಿನ ಸಮಯದಲ್ಲಿ ರಾಜ್ಯಾಂಗ ಹಾದಿ ತಪ್ಪಿದಾಗ ನಾವು ತಿದ್ದಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತಿಗೆ ಪ್ರತಿಕ್ರಿಯಿಸಿದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸ್ವಾಮೀಜಿ ಅವರ ಮಾತಿನಲ್ಲಿ ಬಲವಾದ ಎಚ್ಚರಿಕೆಯ ಸಂದೇಶವಿದೆ. ಅವರು ಪ್ರಸ್ತುತ ರಾಜಕೀಯ ಸ್ಥಿತಿಗತಿ ನೋಡಿ ಮನದಾಳದ ನೋವಿನ ಮಾತನಾಡಿದ್ದಾರೆ. ಒಳ್ಳೆಯ ಆಡಳಿತ ನೀಡಿ ಎನ್ನುವುದು ಅವರ ಸಂದೇಶವಾಗಿದೆ. ಅದನ್ನು ನಾವು ಮುಂದಿನ ದಿನದಲ್ಲಿ ಪಾಲಿಸುತ್ತೇವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು