ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಬೇಟೆಯ ಮೊದಲ ದಿನ ನಿರಾಸೆ

ಕಡಲಿಗಿಳಿದ 80 ದೋಣಿಗಳಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದ ಮತ್ಸ್ಯ ಶಿಕಾರಿ
Last Updated 1 ಆಗಸ್ಟ್ 2019, 12:11 IST
ಅಕ್ಷರ ಗಾತ್ರ

ಕಾರವಾರ:ಎರಡು ತಿಂಗಳ ನಿಷೇಧದ ಅವಧಿ ಮುಗಿಸಿ ಗುರುವಾರ ಸಮುದ್ರಕ್ಕೆ ಇಳಿದ ಮೀನುಗಾರರಿಗೆ ಮೊದಲ ದಿನತುಸು ನಿರಾಸೆಯುಂಟಾಯಿತು. ಡೀಸೆಲ್, ಕಾರ್ಮಿಕರಿಗೆ ನೀಡುವ ವೇತನದಆದಾಯಕ್ಕೆ ಸರಿದೂಗಿಸುವಷ್ಟೂ ಮೀನು ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದಾರೆ.

ಬೈತಖೋಲ್ ಮತ್ತು ಮುದಗಾ ಮೀನುಗಾರಿಕಾ ಬಂದರುಗಳಿಂದ 80 ಯಾಂತ್ರೀಕೃತ ದೋಣಿಗಳು ಮತ್ಸ್ಯಶಿಕಾರಿಗೆ ತೆರಳಿದ್ದವು. ಈ ಬಾರಿಯೂ ನಿರೀಕ್ಷಿತ ಮಟ್ಟದಲ್ಲಿ ಮೀನುಗಳು ಬಲೆಗೆ ಬೀಳಬಹುದು ಎಂದು ಮೀನುಗಾರರು ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಸಲುವಾಗಿ ಒಂದು ವಾರದಿಂದ ಬಲೆಗಳನ್ನು, ದೋಣಿಗಳನ್ನುಸಿದ್ಧಪಡಿಸಿಕೊಂಡಿದ್ದರು. ಜೊತೆಗೇ ದೋಣಿಯಲ್ಲಿ ಸಾಗುವ ಕಾರ್ಮಿಕರಿಗೆ ಬೇಕಾದ ಪಡಿತರವನ್ನೂ ಸಂಗ್ರಹಿಸಿಕೊಂಡಿದ್ದರು. ಆದರೆ, ಮೊದಲ ದಿನದ ಬೇಟೆ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ.

‘80 ದೋಣಿಗಳು ಆಳಸಮುದ್ರಕ್ಕೆ ಹೋದರೂ 80 ಕೆ.ಜಿಗಳಷ್ಟು ಸೆಟ್ಲೆ ಮೀನು ಬಲೆಗೆ ಬಿದ್ದಿಲ್ಲ. ಮೊದಲ ದಿನದೋಣಿಯಲ್ಲಿದ್ದ ಮೀನುಗಾರರಿಗೆ ಊಟಕ್ಕೂ ಸರಿಯಾಗಿ ಮೀನು ಸಿಗದಷ್ಟು ಕೊರತೆ ಕಂಡುಬಂತು. ಕಳೆದ ವರ್ಷ ಆ.1ರಂದುಪ್ರತಿ ದೋಣಿಗೆ ಸರಾಸರಿ 200 ಕೆ.ಜಿ.ಗಳಷ್ಟು ಮೀನು ಸಿಕ್ಕಿತ್ತು’ ಎಂದು ಬೈತಖೋಲ್‌ನ ಮೀನುಗಾರ ವಿನಾಯಕ ಹರಿಕಂತ್ರ ನೆನಪಿಸಿಕೊಂಡರು.

‘ಹವಾಮಾನ ವೈಪರೀತ್ಯ, ಸಮುದ್ರದ ನೀರನ್ನು ಮಿತಿಮೀರಿ ಮಲಿನಗೊಳಿಸಿದ್ದರಿಂದ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಇದರಪರಿಣಾಮವೇ ಮೊದಲ ದಿನ ಕಂಡಂತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಮಿಕರಿಗೂ ನಷ್ಟ:‘ಮೀನುಗಾರಿಕಾ ದೋಣಿಗಳಿಗೆ ದಿನವೊಂದಕ್ಕೆ ₹ 5 ಸಾವಿರದಿಂದ ₹ 7 ಸಾವಿರದವರೆಗೆ ಡೀಸೆಲ್‌ಗೆ ವ್ಯಯಿಸಬೇಕಾಗುತ್ತದೆ. ಇದರೊಂದಿಗೆ ಕಾರ್ಮಿಕರಿಗೆ ರೇಷನ್ ಬೋನಸ್ ₹ 600 ಕೊಡಬೇಕು. ಮೊದಲ ದಿನ ಮೀನು ಕಡಿಮೆ ಸಿಕ್ಕಿರುವ ಕಾರಣ ಮೀನುಗಾರರಿಗೆ ಮಾತ್ರವಲ್ಲ, ಕಾರ್ಮಿಕರಿಗೂ ನಷ್ಟವಾಗಿದೆ. ಹೆಚ್ಚು ಮೀನು ಸಿಕ್ಕಿದರೆ ಅವರಿಗೆ ಹೆಚ್ಚು ಕಮಿಷನ್ ಪಡೆಯಲು ಅವಕಾಶವಿರುತ್ತದೆ. ಸದ್ಯ ₹ 1,000ಗೆ ₹ 300ರಂತೆ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಉತ್ತಮವಾಗುವ ಆಶಾಭಾವ’:‘ಗುರುವಾರ ಅಮಾವಾಸ್ಯೆಯಾದ ಕಾರಣ ಹಲವು ದೋಣಿಗಳು ಸಮುದಕ್ಕೆ ಇಳಿಯಲಿಲ್ಲ. ಕಾರ್ಮಿಕರ ಕೊರತೆಯೂ ಇದೆ.ಇನ್ನೆರಡು ದಿನಗಳಲ್ಲಿ ಎಲ್ಲ ದೋಣಿಗಳೂ ಮೀನುಗಾರಿಕೆಗೆ ತೆರಳಬಹುದು. ಈ ಬಾರಿ ಮೊದಲ ದಿನ ಕಡಿಮೆ ಮೀನು ಸಿಕ್ಕಿದೆ. ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಉತ್ತಮವಾಗಬಹುದು ಎಂಬ ಆಶಾಭಾವಇದೆ’ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದರು.

‘ಕೆಲವು ದೋಣಿಗಳು ಖಾಲಿ ಬಂದಿವೆ. ಮತ್ತೆ ಕೆಲವುಗಳಲ್ಲಿ 15 ಕೆ.ಜಿಯಷ್ಟೇ ಮೀನು ಇದ್ದವು. ಮೊದಲ ದಿನದ ಶಿಕಾರಿಯನ್ನು ನೋಡಿಮೀನುಗಾರಿಕಾ ಋತುವನ್ನು ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಒಂದು ವಾರದ ಬಳಿಕ ಸ್ಪಷ್ಟವಾಗಿ ತಿಳಿಯಬಹುದು. ಮಳೆ ಏರುಪೇರಾಗಿದ್ದೂ ಈ ರೀತಿ ಆಗಲು ಕಾರಣವಿರಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT