ಭಾನುವಾರ, ಅಕ್ಟೋಬರ್ 25, 2020
28 °C
ತಾಲ್ಲೂಕಿನ ಅತಿದೊಡ್ಡ ಶಾಸನವೂ ಬೆಳಕಿಗೆ

ಅಂಕೋಲೆಯಲ್ಲಿ ಐದು ಶಾಸನಗಳ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ತಾಲ್ಲೂಕಿನ ಇತಿಹಾಸ ಮತ್ತು ಶಾಸನಗಳ ಶೋಧನೆಯಲ್ಲಿ ತೊಡಗಿಕೊಂಡಿರುವ ಸಂಶೋಧಕ ಶ್ಯಾಮಸುಂದರ ಗೌಡ ಅಪ್ರಕಟಿತ ಐದು ಶಿಲಾಲೇಖಗಳನ್ನು ಪತ್ತೆ ಮಾಡಿದ್ದಾರೆ. ಅವುಗಳಲ್ಲಿ ಅಂಕೋಲಾ ನಗರ, ಲಕ್ಷ್ಮೇಶ್ವರ, ಬೊಬ್ರುವಾಡ, ಹಿಚಕಡ, ಹೆಗ್ಗರಣಿ ಗ್ರಾಮಗಳಲ್ಲಿ ತಲಾ ಒಂದು ಸೇರಿವೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತಾಲ್ಲೂಕಿನ ಡೋಂಗ್ರಿ ಸಮೀಪದ ಹೆಗ್ಗರಣಿಯ ಮೂಲೆಗದ್ದೆಯಲ್ಲಿ ಪತ್ತೆಯಾದ ಶಾಸನವು ಏಳು ಅಡಿ ಏಳು ಅಂಗುಲ ಎತ್ತರವಿದೆ. 82 ಸಾಲುಗಳಲ್ಲಿ ಶಾಸನವನ್ನು ಬರೆಯಲಾಗಿದೆ. ಈ ತನಕ ತಾಲ್ಲೂಕಿನಲ್ಲಿ ಪತ್ತೆಯಾದ ಅತಿ ದೊಡ್ಡ ಶಾಸನ ಇದಾಗಿದೆ’ ಎಂದು ವಿವರಿಸಿದರು.

ಬೊಬ್ರುವಾಡ ಗ್ರಾಮದ ಪಿ.ಎಂ. ಹೈಸ್ಕೂಲ್ ಆವರಣದಲ್ಲಿ ಒಂದು ನಿಷಧಿ ಶಿಲ್ಪವಿದೆ. ಇದರಲ್ಲಿ ಮೂರು ಸಾಲಿನ ಶಾಸನ ಇರುವುದನ್ನು ಅವರು ಗುರುತಿಸಿದ್ದಾರೆ. ಲಿಪಿಯ ದೃಷ್ಟಿಯಿಂದ ಪರಿಶೀಲಿಸಿದಾಗ ಇದು 12ನೇ ಶತಮಾನಕ್ಕೆ ಸೇರಿದ ಒಂದು ಜೈನ ನಿಷಧಿ ಶಾಸನವಾಗಿದೆ ಎಂದು ತಿಳಿಸಿದರು.

ಲಕ್ಷ್ಮೇಶ್ವರದ ಡಿ.ಎನ್.ನಾಯಕ ಅವರ ಮನೆಯ ಅಂಗಳದಲ್ಲಿ ಒಂದು ಅಷ್ಟಭುಜಾಕೃತಿಯ ಶಿಲ್ಪವಿದೆ. ಇದನ್ನೂ ಲಿಪಿ ಆಧಾರದಿಂದ ಗಮನಿಸಿದಾಗ 10 11ನೇ ಶತಮಾನದ್ದು ಆಗಿರಬಹುದೆಂದು ಊಹಿಸಲಾಗಿದೆ. ಇದು ವೈಷ್ಣವ ಕಟ್ಟಡವೊಂದರ ಗೋಡೆಯ ಶಾಸನೋಕ್ತ ಕಲ್ಲಾಗಿದೆ ಎಂದು ತಿಳಿಸಿದರು.

ಹಿಚಕಡ ಗ್ರಾಮದ ಆಟದ ಮೈದಾನದ ಪಕ್ಕದಲ್ಲಿ ಗೊಂಬಳೆ ಮರದ ಕೆಳಗಡೆ ಒಂದು ವೀರಮಾಸ್ತಿಗಲ್ಲು ಇದೆ. ಇದು ವಿಜಯನಗರೋತ್ತರ ಕಾಲದ ಶಿಲ್ಪವಾಗಿದೆ ಎಂದು ಮಾಹಿತಿ ನೀಡಿದರು.

ನಗರದ ಗೋಪಿನಾಥ ವಿನಾಯಕ ಅರಸ ಅವರ ಮನೆಯಲ್ಲಿ ದೊರೆತ ಹಳೆಯ ತುಂಡು ಕಲ್ಲಿನ ಮೇಲೆ ಬರವಣಿಗೆ ಇರುವುದನ್ನು ಅವರು ಗಮನಿಸಿ, ಶಾಸನೋಕ್ತ ಶಿಲೆ ಎನ್ನುವುದನ್ನು ಖಚಿತಪಡಿಸಿದ್ದಾರೆ. ಶಾಸನದಲ್ಲಿ ಬಳಸಲಾದ ಲಿಪಿಯನ್ನು ಅಧ್ಯಯನ ಮಾಡಿದಾಗ ಇದು 17ನೇ ಶತಮಾನದ್ದು ಎಂದು ಗುರುತಿಸಲು ಸಾಧ್ಯ ಎಂದು ಹೇಳಿದರು.

ಶ್ಯಾಮಸುಂದರ ಗೌಡ ಅವರು, ಪ್ರಾಚೀನ ಇತಿಹಾಸ ಮತ್ತು ಲಿಪಿಶಾಸ್ತ್ರದ ಕುರಿತು ಜ್ಞಾನವನ್ನು ಹೊಂದಿರುವ ಜಿಲ್ಲೆಯ ಕೆಲವೇ ಸಂಶೋಧಕರಲ್ಲಿ ಒಬ್ಬರು. ಈವರೆಗೆ 38 ಶಾಸನಗಳನ್ನು ಶೋಧಿಸಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿದ್ದು, ಮೂರು ಬಾರಿ ರಾಷ್ಟ್ರೀಯ ಇತಿಹಾಸ ವಿಚಾರಗೋಷ್ಠಿಯಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.