ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ಶಿಲಾನ್ಯಾಸ

ಕಾರವಾರ: ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ (ವಿ.ವಿ.ವಿ) ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಕಲಬುರ್ಗಿ ಜಿಲ್ಲೆ ಗವ್ಹಾಂರ ಮಠದ ತ್ರಿವಿಕ್ರಮಾನಂದ ಮಹಾರಾಜ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ₹1.4 ಕೋಟಿ ಅಂದಾಜು ವೆಚ್ಚದ ಮೊದಲ ಹಂತದ ಕಾಮಗಾರಿ ಆರಂಭವಾಗಿದ್ದು, ಎಂಟು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಗವ್ಹಾಂರ ಮಠದ ಪಾಂಡುರಂಗ ಮಹಾರಾಜ್, ವಿ.ವಿ.ವಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಿ.ಡಿ.ಶರ್ಮಾ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಸಂಶೋಧನಾ ಖಂಡದ ಶ್ರೀಸಂಯೋಜಕ ಡಾ.ಗುರುರಾಜ ಪಡೀಲ್, ಡಾ.ರವಿ ಪಾಂಡವಪುರ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಗಣಪತಿ ಭಟ್, ಡಾ.ವರ್ಮುಡಿ ಕುಮಾರಸ್ವಾಮಿ, ವ್ಯವಸ್ಥಾ ಪರಿಷತ್ತು ಪ್ರಮುಖರಾದ ಮಹೇಶ್ ಚಟ್ನಳ್ಳಿ, ಶಾಂತಾರಾಮ ಹೆಗಡೆ, ಜಿ.ಕೆ.ಹೆಗಡೆ, ಗಣೇಶ ಜಿಡ್ಡಿನಮನೆ, ಸಂತೋಷ್ ಹೆಗಡೆ ಇದ್ದರು.
ಭಾರತದ ಪ್ರಾಚೀನ ಸಂಸ್ಕೃತಿ, ಆಚರಣೆ, ವಿಚಾರಧಾರೆ ಬಗೆಗಿನ ಸಂಶೋಧನೆಗಾಗಿಯೇ ಈ ಕೇಂದ್ರ ಮೀಸಲಾಗಿರಲಿದೆ. ಜನಸಾಮಾನ್ಯರಿಗೆ ಭಾರತೀಯ ಸಂಸ್ಕೃತಿಯ ಶಿಕ್ಷಣ ಮತ್ತು ತರಬೇತಿ ನೀಡುವ ವಿಭಾಗಗಳು ಕಾರ್ಯನಿರ್ವಹಿಸಲಿವೆ.
ಡಾ.ಗುರುರಾಜ್ ಪಡೀಲ್ ಮಾಹಿತಿ ನೀಡಿ, ‘ಪ್ರಾಚೀನ ಗ್ರಂಥಗಳ, ಹಸ್ತಪ್ರತಿಗಳ ಸಂಗ್ರಹ, ವಿಶ್ಲೇಷಣೆ ಮತ್ತು ಸಂರಕ್ಷಣೆ ಕಾರ್ಯಗಳು ಗ್ರಂಥಾವಲೋಕನ ವಿಭಾಗದಡಿ ನಡೆಯಲಿವೆ. ಪ್ರಾಚೀನ ಆಚರಣೆ, ಜೀವ ವಿಧಾನಗಳ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸಮರ್ಥನೆಗಳ ಮಾಹಿತಿ ವಿನಿಮಯ ಆಗಲಿದೆ. ಅಳಿವಿನಂಚಿಲ್ಲಿರುವ ಹಲವು ಆಚಾರ ವಿಚಾರಗಳನ್ನು ಮತ್ತೆ ಪ್ರಚಲಿತಕ್ಕೆ ತರುವ ಕಾರ್ಯಗಳು ‘ಶೋಧ ಪ್ರಯೋಗ’ ವಿಭಾಗದ ಮೂಲಕ ನಡೆಯಲಿವೆ’ ಎಂದು ತಿಳಿಸಿದರು.
‘ಪುರಾಲೇಖ’ ವಿಭಾಗದಲ್ಲಿ ಹಸ್ತಪ್ರತಿಗಳು ಮತ್ತು ತಾಳೆಗರಿಯಂಥ ಅಪೂರ್ವ ಹಾಗೂ ಅಮೂಲ್ಯ ಪ್ರಾಚೀನ ಗ್ರಂಥಗಳ ಸಂಗ್ರಹ, ಸಂರಕ್ಷಣೆ ಹಾಗೂ ಇವುಗಳ ಡಿಜಿಟಲೀಕರಣ ಆಗಲಿದೆ ಎಂದು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.