ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಡಾಟಾ ಎಂಟ್ರಿ ಆಪರೇಟರ್ ನೌಕರಿ ಆಮಿಷಕ್ಕೆ ಯುವಕರೇ ಗುರಿ

Last Updated 18 ಜನವರಿ 2022, 19:30 IST
ಅಕ್ಷರ ಗಾತ್ರ

ಅಂಕೋಲಾ: ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ.

ಅಂಕೋಲಾ, ಹೊನ್ನಾವರ, ಜೊಯಿಡಾ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳು ಖಾಲಿ ಇವೆ. ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸಂದೇಶದಲ್ಲಿ ಬರೆಯಲಾಗಿದೆ. ಕೆಲಸದ ನಿರೀಕ್ಷೆಯಲ್ಲಿರುವವರು, ಸಂದೇಶದ ಕೆಳಗೆ ನೀಡಿರುವ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಿದರೆ ಅಸ್ಪಷ್ಟ ಮಾಹಿತಿ ನೀಡಲಾಗುತ್ತಿದೆ.

ಅಂಕೋಲಾದ ಹೊನ್ನೇಕೇರಿಯ ಯುವಕ ಸುಭಾಷ ನಾಯ್ಕ ಜಾಹಿರಾತಿನಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿದ್ದರು. ಇದೊಂದು ಹೈದರಾಬಾದ್ ಮೂಲದ ಕಂಪನಿಯಾಗಿದ್ದು, ಕೆಲಸ ಖಾಲಿ ಇರುವುದಾಗಿ ಅವರಿಗೆ ಕರೆ ಸ್ವೀಕರಿಸಿದವರು ತಿಳಿಸಿದ್ದಾರೆ. ಕಚೇರಿಯ ವಿಳಾಸ ನೀಡುವಂತೆ ಕೇಳಿದಾಗ, ಸದ್ಯದಲ್ಲಿಯೇ ಹೊಸ ಕಚೇರಿ ತೆರೆಯುವುದಾಗಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನ ಮಾಹಿತಿ ಕೇಳಿದಾಗ ಕರೆ ಕಡಿತಗೊಂಡಿದೆ.

‘ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ವಿಚಾರಿಸಿದಾಗ ಅಧಿಕಾರಿಗಳು, ಇದು ನಕಲಿ ಸಂದೇಶ ಎಂದು ತಿಳಿಸಿದ್ದಾರೆ. ಈ ಸಂದೇಶವು ಜಿಲ್ಲೆಯ ಹಲವು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಹರಿದಾಡುತ್ತಿದೆ. ಸ್ಪಷ್ಟ ಮಾಹಿತಿ ಮತ್ತು ಸರಿಯಾದ ವಿಳಾಸ ನೀಡದೇ ಯುವಕರಿಗೆ ವಂಚಿಸಲು ಹುನ್ನಾರ ಕಾಣುತ್ತಿದೆ. ಈ ಜಾಹೀರಾತಿನ ಮೂಲ ಹುಡುಕಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕು’ ಎಂದು ಎಂದು ಹಟ್ಟಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಶಾಂತೇಶ ನಾಯ್ಕ ಆಗ್ರಹಿಸಿದ್ದಾರೆ.

‘ದೂರು ನೀಡಿದರೆ ಕ್ರಮ’:

‘ಜಿಲ್ಲೆಯ ಸಾರ್ವಜನಿಕರು ಕೇವಲ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸಂದೇಶಗಳನ್ನು ಪರಿಶೀಲಿಸದೇ ಸತ್ಯಾಸತ್ಯತೆಯನ್ನು ಅರಿಯದೇ ಆಮಿಷಕ್ಕೆ ಒಳಗಾಗಬಾರದು. ವಾಟ್ಸ್‌ಆ್ಯಪ್ ಮೂಲಕ ಬಂದಿರುವ ಸಂದೇಶವನ್ನು ನಂಬಿ ವಂಚನೆಗೆ ಒಳಗಾದಲ್ಲಿ, ಸಾರ್ವಜನಿಕರು ದೂರು ನೀಡಬೇಕು. ಅದನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿ.ಪಿ.ಐ ಸಂತೋಷ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT