ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಉಳ್ವೇಕರ್ ಕೊರಳಿಗೆ ವಿಜಯ ಮಾಲೆ

ವಿಧಾನಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಮೊದಲ ಗೆಲುವು: ಕಾಂಗ್ರೆಸ್‌ನ ಹ್ಯಾಟ್ರಿಕ್ ಕನಸು ಭಗ್ನ
Last Updated 14 ಡಿಸೆಂಬರ್ 2021, 13:35 IST
ಅಕ್ಷರ ಗಾತ್ರ

ಕಾರವಾರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಜಯ ಸಾಧಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಿಗಿಂತ 183 ಹೆಚ್ಚು ಮತಗಳನ್ನು ಪಡೆದರು. ಈ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿ.ಜೆ.ಪಿ ಅಭ್ಯರ್ಥಿ ಆಯ್ಕೆಯಾದರು.

ನಗರದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಕೇಂದ್ರದಲ್ಲಿ ಬೆಳಿಗ್ಗೆ ಮತ ಎಣಿಕೆ ಶುರುವಾಗುತ್ತಿದ್ದಂತೆ ಭೀಮಣ್ಣ ನಾಯ್ಕ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಕೊನೆಯ ಹಂತ ಬರುತ್ತಿದ್ದಂತೆ ಗೆಲುವು ಗಣಪತಿ ಉಳ್ವೇಕರ್ ಕಡೆಗೆ ಒಲಿಯಿತು. ಪ್ರಥಮಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಸಾಧಿಸಿ ಜಿಲ್ಲೆಯ ಮಟ್ಟಿಗೆ ಇತಿಹಾಸ ಬರೆದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಪಕ್ಷಕ್ಕೆ ನಿರಾಸೆ ಮೂಡಿಸಿದರು.

ಕಳೆದ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲೂ ಬಿ.ಜೆ.ಪಿ ಅಭ್ಯರ್ಥಿಯಾಗಿದ್ದ ಗಣಪತಿ ಉಳ್ವೇಕರ್, 1,005 ಮತಗಳನ್ನು ಪಡೆದಿದ್ದರು. ಆದರೆ, ಕಾಂಗ್ರೆಸ್‌ ಪಕ್ಷದ ಎಸ್.ಎಲ್.ಘೋಟ್ನೇಕರ್ ವಿರುದ್ಧ 737 ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಈ ಬಾರಿ ಬಿ.ಜೆ.ಪಿ ಅಭ್ಯರ್ಥಿ ಜಯ ಸಾಧಿಸಿದ ಸುದ್ದಿತಲುಪುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು. ‌ಮಾಲಾದೇವಿ ಮೈದಾನದಲ್ಲಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಕುಣಿದು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಜಯಘೋಷ ಕೂಗಿದರು. ಬಳಿಕ ಗಣಪತಿ ಉಳ್ವೇಕರ್, ರೂಪಾಲಿ ನಾಯ್ಕ ಸೇರಿ
ದಂತೆ ಪಕ್ಷದ ಪ್ರಮುಖರನ್ನು ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮತ ಎಣಿಕೆ ಕಾರ್ಯ ಮುಗಿದ ಬಳಿಕ, ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗಣಪತಿ ಅವರಿಗೆ ಗೆಲುವಿನ ಪ್ರಮಾಣ ಪತ್ರ ನೀಡಿದರು. ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಹಾಜರಿದ್ದರು.

ವಿಧಾನಪರಿಷತ್‌ನಉತ್ತರ ಕನ್ನಡ ಕ್ಷೇತ್ರಕ್ಕೆ ಇದು ಆರನೇ ಚುನಾವಣೆಯಾಗಿದೆ. ಈ ಹಿಂದೆ ಎರಡು ಬಾರಿ ಜನತಾ ಪರಿವಾರ ಹಾಗೂ ಮೂರು ಸಲ ಕಾಂಗ್ರೆಸ್ ಪಕ್ಷ ಗೆಲುವು ಕಂಡಿದ್ದವು.

‘ಸಮಸ್ಯೆಗಳಿಗೆ ಸ್ಪಂದಿಸುವೆ’:

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಣಪತಿ ಉಳ್ವೇಕರ್, ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

‘ಗ್ರಾಮ ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ ನೀಡಿ, ಗೆಲ್ಲಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದಾರೆ. ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತೇನೆ. ಅವುಗಳಿಗ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉಸ್ತುವಾರಿ ಸಚಿವರು, ಪಕ್ಷದ ಎಲ್ಲ ಶಾಸಕರ ಜೊತೆ ಚರ್ಚಿಸುವೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ತರಲು ಶ್ರಮಿಸುತ್ತೇನೆ’ ಎಂದು ಹೇಳಿದರು.

––––

ಯಾರಿಗೆ ಎಷ್ಟು ಮತ?

ಒಟ್ಟು ಮತದಾರರು: 2,915

ಚಲಾವಣೆಯಾದವು: 2,907

ಗಣಪತಿ ಉಳ್ವೇಕರ್: 1,514

ಭೀಮಣ್ಣ ನಾಯ್ಕ: 1,331

‌ತಿರಸ್ಕೃತ: ‌54

ಈಶ್ವರ ಗೌಡ: 4

ದತ್ತಾತ್ರೇಯ ನಾಯ್ಕ: 3

ಸೋಮಶೇಖರ ಗೌಡ: 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT