ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಜಾತಿ, ಪಂಗಡಗಳ ಒಗ್ಗೂಡಿಸುವ ಮಾರಿಕಾಂಬೆ ದೇವಿ

ತ್ರಿಭುವನೇಶ್ವರಿ ಪೀಠದಿಂದ ಶಿರಸಿಯ ಅಧಿದೇವತೆಯಾದ ಮಾರಿಕಾಂಬೆ
Last Updated 15 ಮಾರ್ಚ್ 2022, 15:53 IST
ಅಕ್ಷರ ಗಾತ್ರ

ಶಿರಸಿ: ರಕ್ತಕೆಂಪಿನ ಬಣ್ಣದ ಪ್ರಶಾಂತ ಮುಖ, ಕಣ್ತುಂಬಿಕೊಂಡರೂ ಮತ್ತಷ್ಟು ಹೊತ್ತು ನೋಡುತ್ತಿರಬೇಕು ಎಂದು ಮನದಲ್ಲಿ ಮೂಡುವ ಭಕ್ತಿ, ಭಾವ. ಭಕ್ತಕೋಟಿಯ ಪಾಲಿನ ತಾಯಿ ಶಿರಸಿಯ ಅಧಿದೇವಿ ಮಾರಿಕಾಂಬೆ ದುರ್ಗಿಯ ಅವತಾರವಾಗಿದ್ದಾಳೆ.

ಏಳುಬೀಳು, ಕಷ್ಟಕಾರ್ಪಣ್ಯದ ನಡುವೆ ಸಾಗುವ ಶಿರಸಿ ಜನರನ್ನು ತಾಯಿ ಮಾರಿಕಾಂಬೆ ಕೈಬಿಡಲಾರಳು ಎಂಬುದೇ ಇಲ್ಲಿನವರ ದೃಢ ನಂಬಿಕೆ. ಕಾವಿಕಲೆಯನ್ನು ಹೊದ್ದ ದೇವಾಲಯದೊಳಗೆ ಕುಳಿತ ದೇವಿ ಇಡೀ ಜಗತ್ತನ್ನು ಕಷ್ಟದಿಂದ ಮೇಲಕ್ಕೆತ್ತುವವಳು ಎಂಬ ವಿಶ್ವಾಸ ಭಕ್ತರ ಪಾಲಿಗಿದೆ.

ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಸರಿಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ತ್ರಿಭುವನೇಶ್ವರಿ ಪೀಠದಿಂದ ಮಾರಿಕಾಂಬೆಯಾಗಿ ದೇವಿ ಶಿರಸಿಗೆ ಬಂದು ನೆಲೆಸಿದ್ದಾಳೆ.

ತ್ರಿಭುವನೇಶ್ವರಿ ಪೀಠದ ಜಾತ್ರೆ ವೇಳೆ ದೇವಿಯ ಮೂರ್ತಿ, ಆಭರಣಗಳನ್ನು ಪೆಟ್ಟಿಗೆಯಲ್ಲಿ ತುಂಬಿ ಇಡಲಾಗಿತ್ತು. ಈ ವೇಳೆ ಕಳ್ಳರು ಪೆಟ್ಟಿಗೆಗಳನ್ನು ಕದ್ದೊಯ್ದಿದ್ದರು. ಅಂದು ಪುಟ್ಟ ಗ್ರಾಮವಾಗಿದ್ದ ಶಿರಸಿಯ ಹೊರವಲಯದ ಕೆರೆಯೊಂದರಲ್ಲಿ ದೇವಿಯ ಮೂರ್ತಿ ಇದ್ದ ಪೆಟ್ಟಿಗೆ ಎಸೆದು ಹೋಗಿದ್ದರು. ಭಕ್ತರೊಬ್ಬರ ಕನಸಿನಲ್ಲಿ ಬಂದ ವ್ಯಕ್ತಿಯೊಬ್ಬರು ಕೆರೆಯಲ್ಲಿರುವ ದೇವಿಯನ್ನು ಪ್ರತಿಷ್ಠಾಪಿಸಿದರೆ ಒಳಿತಾಗುತ್ತದೆ ಎನ್ನುತ್ತಾರೆ. ಕೆರೆಯಲ್ಲಿ ಸಿಕ್ಕ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗುತ್ತದೆ.

1689ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು ದೇವಿಯ ಪ್ರತಿಷ್ಠಾಪನೆ ನಡೆಯುತ್ತದೆ. ಅಂದು ಶಿರಸಿ ಆಳ್ವಿಕೆ ನಡೆಸುತ್ತಿದ್ದ ಸೋದೆಯ ಇಮ್ಮಡಿ ಸದಾಶಿವರಾಯ ಮಾರಿಕಾಂಬೆಯನ್ನು ಗ್ರಾಮದೇವಿಯಾಗಿ ಪ್ರತಿಷ್ಠಾಪಿಸುತ್ತಾರೆ ಎಂಬುದು ಇತಿಹಾಸ.

ಸಾಮಾಜಿಕ ಕ್ರಾಂತಿ ಬರೆದ ದೇವಸ್ಥಾನ: ಧಾರ್ಮಿಕವಾಗಿ ತಾಮಸ, ರಾಜಸ ಮತ್ತು ಸಾತ್ವಿಕ ಎಂಬ ಮೂರು ಪ್ರಕಾರಗಳ ಶಕ್ತಿಯ ಉಲ್ಲೇಖವಿದೆ. ಶಿರಸಿಯ ಮಾರಿಕಾಂಬೆ ಮೂಲತಃ ತಾಮಸ ಶಕ್ತಿಯ ದೇವಿಯಾಗಿದ್ದವಳು. ಉಗ್ರಸ್ವರೂಪದ ದೇವಿಯ ಪೂಜೆ, ಪುನಸ್ಕಾರಗಳು ವಿಭಿನ್ನವಾಗಿದ್ದವು. ಪ್ರಾಣಿ ಬಲಿಯನ್ನು ದೇವಿಗೆ ನೀಡಲಾಗುತ್ತಿತ್ತು. ಆದರೆ ಕಾಲಕ್ರಮೇಣ ರಾಜಸ ಗುಣಕ್ಕೆ ತಿರುಗಿದ ದೇವಿ ಪ್ರಾಣಿಬಲಿಯನ್ನು ನಿಲ್ಲಿಸಿದಳು ಎಂಬ ಪ್ರತೀತಿ ಇದೆ.

‘ಸಾತ್ವಿಕ ಪೂಜಾ ಪದ್ಧತಿ ದೇವಸ್ಥಾನದಲ್ಲಿ ಆರಂಭಗೊಂಡ ಬಳಿಕ ಹಲವು ಬದಲಾವಣೆಗಳು ಕಂಡವು. ಮಾರಿಕಾಂಬೆ ಕೇವಲ ಧಾರ್ಮಿಕ ಶಕ್ತಿಯಾಗಿ ಉಳಿಯದೆ ಶಿರಸಿಯಲ್ಲಿ ಶಿಕ್ಷಣ, ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆದಳು. ಎಂ.ಇ.ಎಸ್. ಶಿಕ್ಷಣ ಸಂಸ್ಥೆ ಸ್ಥಾಪನೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ ನಿರ್ಮಾಣ, ಶಿರಸಿಯ ವಿವಿಧ ಸಾಮಾಜಿಕ ಚಟುವಟಿಕೆಗಳಿಗೆ ಆರ್ಥಿಕ ಸಹಾಯವನ್ನು ದೇವಸ್ಥಾನದ ಅಂದಿನ ಧರ್ಮದರ್ಶಿ ಮಂಡಳಿ ನೀಡಿತು. ಈ ಸಹಾಯದ ಹಿಂದೆ ದೇವಿಯ ಪ್ರೇರಣೆ ಪ್ರಭಾವಯುತವಾಗಿ ಇತ್ತು’ ಎನ್ನುತ್ತಾರೆ ದೇವಸ್ಥಾನದ ಧರ್ಮದರ್ಶಿ ಮಂಡಳದ ಮಾಜಿ ಅಧ್ಯಕ್ಷ ರಾಮಕೃಷ್ಣ ಬಿಳಗೀಕರ್.

ದೇವಸ್ಥಾನ ಈಗಲೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹೆಸರಾಗಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದ ಪ್ರಗತಿಗೆ ತನ್ನ ಸಹಾಯಹಸ್ತ ಚಾಚುತ್ತಿದೆ.

ಜಾತಿ ಪಂಥಗಳ ಭೇದವಿಲ್ಲ: ಶಿರಸಿಯ ಮಾರಿಕಾಂಬೆಯ ಸನ್ನಿಧಾನ ಎಲ್ಲ ಜಾತಿ, ವರ್ಗಗಳ ಪಾಲಿಗೆ ಮುಕ್ತವಾಗಿದೆ. ತಾಯಿಯೊಬ್ಬಳು ತನ್ನ ಮಕ್ಕಳಿಗೆ ಭೇದವೆಣಿಸದೆ ಹೇಗೆ ಸಲಹುವಳೋ ಅಂತೆಯೇ ಮಾರಿಕಾಂಬೆಯೂ ಜಾತಿ, ಧರ್ಮ ನೋಡದೆ ತನ್ನಲ್ಲಿಗೆ ಬಂದವರನ್ನೆಲ್ಲ ಮಕ್ಕಳೆಂದು ಸಲಹುತ್ತಾಳೆ ಎಂಬುದು ಭಕ್ತರ ನಂಬಿಕೆ.

ದೇವಸ್ಥಾನದ ಆಚರಣೆಗಳಲ್ಲಿ ಎಲ್ಲ ಜಾತಿ, ಜನಾಂಗಗಳ ಜನರಿಗೂ ಅವಕಾಶಗಳಿವೆ. ಬ್ರಾಹ್ಮಣರು, ಹಿಂದುಳಿದವರು, ಪರಿಶಿಷ್ಟರು ಎಂಬ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಸಾಗುವಂತೆ ದೇವಿ ಆಶೀರ್ವದಿಸುತ್ತಾಳೆ. ಸಾಮರಸ್ಯದ ವಾತಾವರಣ ಸೃಷ್ಟಿಸಿ ತಾಯಿಪ್ರೀತಿ ತೋರುತ್ತಾಳೆ.

ಹರಿಜನರಿಗೆ ಪ್ರವೇಶ ನೀಡಿದ ಮೊದಲ ದೇವಸ್ಥಾನ

ಹಿಂದಿನ ಕಾಲದಲ್ಲಿ ಪರಿಶಿಷ್ಟ ವರ್ಗದ ಜನರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಇಂತಹ ಅನಿಷ್ಠ ಪದ್ಧತಿಯ ವಿರುದ್ಧ ಮಹಾತ್ಮ ಗಾಂಧಿ ಧ್ವನಿ ಎತ್ತಿದ್ದರು. 1933ರ ಮೇ ತಿಂಗಳಿನಲ್ಲಿ ಯೆರವಡಾ ಜೈಲಿನಿಂದ ಹರಿಜನರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡುವಂತೆ ಗಾಂಧೀಜಿ ಕರೆಕೊಟ್ಟಿದ್ದರು.

ಗಾಂಧೀಜಿ ಕರೆಗೆ ಮೊದಲು ಸ್ಪಂದಿಸಿದ್ದು ಶಿರಸಿಯ ಮಾರಿಕಾಂಬಾ ದೇವಾಲಯ ಎಂಬ ಖ್ಯಾತಿ ಇದೆ. ಅಂದು ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷರಾದ ಎಸ್.ಎನ್.ಕೇಶವೈನ್ ಮತ್ತು ಇತರ ಸದಸ್ಯರು ಹರಿಜನರ ಕುಟುಂಬಗಳನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು. ಇದು ಇಡೀ ದೇಶಕ್ಕೆ ಮಾದರಿಯಾಯಿತು. ಗಾಂಧೀಜಿ ದೇಶದ ಉದ್ದಗಲಕ್ಕೂ ಸಂಚರಿಸಿದ್ದ ವೇಳೆ ಹಲವು ಕಡೆಗಳಲ್ಲಿ ಮಾರಿಕಾಂಬಾ ದೇವಾಲಯದ ಕಾರ್ಯವನ್ನು ಕೊಂಡಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT