ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ: ಸಂಭ್ರಮದ ಬಂಡಿಹಬ್ಬ

2 ವರ್ಷದ ನಂತರ ಹಬ್ಬ: ಹರಿದು ಬಂದ ಜನಸಾಗರ
Last Updated 11 ಮೇ 2022, 2:59 IST
ಅಕ್ಷರ ಗಾತ್ರ

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಭದ್ರಕಾಳಿ ಮತ್ತು ಪರಿವಾರ ದೇವರ ಬಂಡಿಹಬ್ಬ ಮಂಗಳವಾರ ಸಂಜೆ ಅತ್ಯಂತ ಸಂಭ್ರಮದಿಂದ ನಡೆಯಿತು. 2 ವರ್ಷದ ನಂತರ ನಡೆದ ಹಬ್ಬಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಬಂಡಿಹಬ್ಬದ ಉತ್ಸವದಲ್ಲಿ ಮುಖ್ಯ ಗುನಗರು ದೇವಿಯ ಕಳಸವನ್ನು ಹೊತ್ತು, ಮಹಾಬಲೇಶ್ವರ ದೇವರ ಒಂದು ಸುತ್ತು ಹಾಕಿ ಅಪ್ಪಣೆ ಕೊಟ್ಟ ನಂತರ ಬಂಡಿ ಎಳೆಯಲಾಯಿತು. ಬಂಡಿಯು ರಥಬೀದಿಯಲ್ಲಿರುವ ಕಳಸದ ಮನೆಯಿಂದ ಪ್ರಾರಂಭವಾಗಿ ಮುಖ್ಯ ರಸ್ತೆಯಲ್ಲಿ ಸಾಗಿ ಭದ್ರಕಾಳಿ ದೇವಸ್ಥಾನದವರೆಗೆ ಎಳೆಯಲಾಯಿತು. ಬಂಡಿಯನ್ನು ಹರಕೆದಾರರ ಬಾಳೆಕೊನೆಗಳು, ಹಲಸಿನ ಹಣ್ಣು ಮತ್ತು ತೆಂಗಿನ ಕಾಯಿಗಳಿಂದ ಸಿಂಗರಿಸಲಾಗಿತ್ತು. ಬಂಡಿಯ ಹಿಂದುಗಡೆ ದೇವಿಯ ಆಕರ್ಷಣೆಯಾದ ದೇವಿಯ ಕಳಸವನ್ನು ಮುಖ್ಯ ಗುನಗರು ಹೊತ್ತು ಸೂಕ್ತ ಮಾರ್ಗದರ್ಶನ ನೀಡುತ್ತಿದದ್ದು ಕಂಡು ಬಂತು.

ಬಂಡಿಹಬ್ಬವು ಶಿವರಾತ್ರಿಯ ರಥೋತ್ಸವದಂತೆ ಭಾಸವಾಗುತ್ತಿತ್ತು. ಬಂಡಿಯ ಮುಂದುಗಡೆ ಹರಕೆ ಹೊತ್ತ 100ಕ್ಕೂ ಹೆಚ್ಚು ಬೊಗಣಗಿತ್ತಿಯರು ತಲೆಯ ಮೇಲೆ ಕಳಸದ ಸಂಗಡ ಉಡಿ ತುಂಬುವ ವಸ್ತುಗಳನ್ನು ಹೊತ್ತು ಸಾಗಿದ್ದು ಆಕರ್ಷಕವಾಗಿ ಕಂಡು ಬಂದಿತು. ಅನೇಕ ಭಕ್ತರು ತಮ್ಮ ತಮ್ಮ ಸಮಸ್ಯೆಯನ್ನು, ಊರಿನ ಸಮಸ್ಯೆಯನ್ನು ಮುಖ್ಯ ಗುನಗರ ಹತ್ತಿರ ಹೇಳಿ ಪರಿಹಾರ ಕಂಡುಕೊಂಡರು.

ಬುಧುವಾರ ಸಮಾರೋಪ ಹಾಗೂ ಶ್ರೀ ದೇವರುಗಳಿಗೆ ಹರಕೆ ಒಪ್ಪಿಸಿ ಸಮರ್ಪಣಾ ಮಹೋತ್ಸವವನ್ನು ಆಚರಿಸುವದರೊಂದಿಗೆ ಬಂಡಿಹಬ್ಬವು ಮುಕ್ತಾಯಗೊಳ್ಳುವುದು. ಕೋವಿಡ್ ಕಾರಣದಿಂದ 2 ವರ್ಷದಿಂದ ಬಂಡಿಹಬ್ಬದ ಆಚರಣೆಯನ್ನು ನಿಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT