ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತದ ಮತದಾನ ಸುಸೂತ್ರ

ಮತಪೆಟ್ಟಿಗೆ ಸೇರಿದ ಸಾವಿರಾರು ಅಭ್ಯರ್ಥಿಗಳ ಭವಿಷ್ಯ: ಶೇ 74.83ರಷ್ಟು ಮತದಾನ
Last Updated 22 ಡಿಸೆಂಬರ್ 2020, 14:19 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಯಲ್ಲಿ ಶೇ 74.83ರಷ್ಟು ಮತದಾನವಾಗಿದೆ. ಮತದಾರರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು, ಶಾಂತಿಯುತವಾಗಿ ಹಕ್ಕು ಚಲಾಯಿಸಿದರು.

ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಯಿತು. ಮೊದಲ ಅರ್ಧ ಗಂಟೆ ಮತದಾರರ ಸಂಖ್ಯೆ ಕಡಿಮೆಯಿತ್ತು. ತಮ್ಮ ದೈನಂದಿನ ಕೆಲಸಗಳನ್ನು ಒಂದು ಹಂತಕ್ಕೆ ಪೂರ್ಣಗೊಳಿಸಿದ ಗ್ರಾಮೀಣ ಭಾಗದ ಜನ, ನಿಧಾನವಾಗಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಮಧ್ಯಾಹ್ನ 11ರ ಸುಮಾರಿಗೆ ಹಲವೆಡೆ ನೂರಾರು ಮಂದಿಯ ಸಾಲು ಕಂಡುಬಂತು.

101 ಗ್ರಾಮ ಪಂಚಾಯಿತಿಗಳ 1,380 ಸ್ಥಾನಗಳ ಪೈಕಿ 1,264 ಸ್ಥಾನಗಳಿಗೆ ಚುನಾವಣೆ ನಡೆದಿದೆ. 107 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದ್ದರೆ, ಒಂಬತ್ತು ಕಡೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಒಟ್ಟು 4,51,297 ಮತದಾರರಿದ್ದು, 3,735 ಅಭ್ಯರ್ಥಿಗಳ ರಾಜಕೀಯ ಭವಿಷ್ಯವು ಮತಪೆಟ್ಟಿಗೆ ಸೇರಿತು.

ಶಾಸಕಿ ಮತದಾನ

ಕಾರವಾರ– ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಕಾರವಾರ ತಾಲ್ಲೂಕಿನ ಚೆಂಡಿಯಾದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜನರ ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಮತದಾರರು ಆಯ್ಕೆ ಮಾಡಬೇಕು. ಅದೇ ರೀತಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ಅಹಂಕಾರ ಬರದಿರಲಿ. ನಾನು ಕೂಡ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ವಿವಿಧ ಹಂತಗಳನ್ನು ದಾಟಿ ಬಂದವಳು. ಹಾಗಾಗಿ ಸ್ಥಳೀಯರ ನೋವು–ನಲಿವುಗಳ ಬಗ್ಗೆ ಅರಿವಿದೆ. ಏನೇ ಸಮಸ್ಯೆಗಳಿದ್ದರೂ ಎಲ್ಲರೂ ಒಂದುಗೂಡಿದಾಗ ಪರಿಹಾರ ಸಿಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮಾಜಾಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಚಿತ್ತಾಕುಲಾ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿರುವ ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಅವರು ಚಿತ್ತಾಕುಲಾದಲ್ಲಿ ಹಕ್ಕು ಚಲಾಯಿಸಿದರು.

ಉದ್ಯೋಗ ನಿಮಿತ್ತ ಬೇರೆ ಬೇರೆ ನಗರಗಳು, ರಾಜ್ಯಗಳಲ್ಲಿದ್ದ ಸಾವಿರಾರು ಮಂದಿ, ಕೊರೊನಾ ಕಾರಣದಿಂದ ಊರಿಗೆ ಮರಳಿದ್ದರು. ಅವರು ಮರಳಿ ಹೋಗಲಿಲ್ಲ. ಮತ್ತೆ ಹಲವರು ಗೋವಾ, ಮಹಾರಾಷ್ಟ್ರ, ಹುಬ್ಬಳ್ಳಿ ಭಾಗದಿಂದ ಮತ ಚಲಾವಣೆಗಾಗಿಯೇ ಊರಿಗೆ ಬಂದಿದ್ದರು. ಹಾಗಾಗಿ ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಬಹುದು ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಮತದಾರರಿಗೆ ಚಿಹ್ನೆಯಿದ್ದ ಚೀಟಿ!:

ಅಸ್ನೋಟಿ ಗ್ರಾಮ ಪಂಚಾಯಿತಿಯ ಮದೇವಾಡದಲ್ಲಿ ತಮ್ಮ ಎದುರಾಳಿಗಳು ಅವರ ಚಿಹ್ನೆಗಳಿರುವ ಚೀಟಿಗಳ ಹಿಂಭಾಗದಲ್ಲಿ ಮತದಾರರ ಸಂಖ್ಯೆ ಬರೆದು ಕೊಡುತ್ತಿದ್ದರು ಎಂದು ಅಭ್ಯರ್ಥಿ ಅರುಣಕುಮಾರ್ ಸಾಳುಂಕೆ ದೂರಿದ್ದಾರೆ.

‘ಬೆಳಿಗ್ಗೆ 10ಕ್ಕೆ ಈ ವಿಚಾರ ಗಮನಕ್ಕೆ ಬಂದಾಗ ಮತಗಟ್ಟೆ ಅಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ತಿಳಿಸಿದ್ದೇನೆ. ಅಷ್ಟರಲ್ಲಿ 253 ಮತಗಳು ಚಲಾವಣೆಯಾಗಿದ್ದವು. ಈ ರೀತಿ ಮಾಡಿದ ನಾಲ್ವರು ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕು ಅಥವಾ ಆ ಮತಗಳನ್ನು ಅಸಿಂಧುಗೊಳಿಸಬೇಕು. ಒಂದುವೇಳೆ, ನ್ಯಾಯ ಸಿಗದಿದ್ದರೆ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ’ ಎಂದರು.

ಈ ಬಗ್ಗೆ‍ ಪ್ರತಿಕ್ರಿಯಿಸಿದ ತಹಶೀಲ್ದಾರ್ ಆರ್.ವಿ.ಕಟ್ಟಿ, ‘ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಅಲ್ಲಿ ಸುಸೂತ್ರವಾಗಿ ಮತದಾನ ನಡೆದಿದೆ’ ಎಂದು ತಿಳಿಸಿದರು.

ವಾಗ್ವಾದ: ವ್ಯಕ್ತಿ ಪೊಲೀಸ್ ವಶಕ್ಕೆ

ಶಿರವಾಡ ಪಬ್ಲಿಕ್ ಶಾಲೆಯ ಮತಗಟ್ಟೆಯ ನಿಷೇಧಿತ ಪ್ರದೇಶಕ್ಕೆ ಕಾರಿನಲ್ಲಿ ಬಂದು ವಾಗ್ವಾದ ಮಾಡಿದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.

ಶಾಲೆಯಲ್ಲಿ ನಾಲ್ಕು ಸೂಕ್ಷ್ಮ ಮತಗಟ್ಟೆಗಳಿದ್ದು, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಈ ವ್ಯಕ್ತಿಯು ನಿಯಮವನ್ನು ಉಲ್ಲಂಘಿಸಿದರು. ಪೊಲೀಸರು ವಾಹನ ತೆಗೆಯುವಂತೆ ಸೂಚಿಸಿದಾಗ ವಾಗ್ವಾದಕ್ಕಿಳಿದರು.

ಬಳಿಕ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಲು ಮುಂದಾದರು. ಇದನ್ನು ಗಮನಿಸಿದ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ ಹಾಗೂ ಸಿಬ್ಬಂದಿ ತಡೆದರು. ಕಾರಿನಿಂದ ಇಳಿಸಿ ವಶಕ್ಕೆ ಪಡೆದರು.

ಎಲ್ಲಿ, ಎಷ್ಟು ಮತದಾನ?

ಕಾರವಾರ;71.22%

ಅಂಕೋಲಾ;75.84%

ಕುಮಟಾ;75.30%

ಹೊನ್ನಾವರ;76.17%

ಭಟ್ಕಳ;74.63%

ಒಟ್ಟು;74.83%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT