ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭುವನೇಶ್ವರಿ’ಯ ಊರಿಗೆ ಪ್ರಗತಿ ನಿರೀಕ್ಷೆ

ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿ ಗ್ರಾಮ ಪಂಚಾಯಿತಿ: ಒಂದಷ್ಟು ಅಭಿವೃಧ್ಧಿ
Last Updated 24 ಮೇ 2022, 15:35 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ಆಧಾರದಲ್ಲಿ ಬೇಡ್ಕಣಿ ವಿಶಾಲವಾಗಿದೆ. ತಾಲ್ಲೂಕು ಕೇಂದ್ರದಿಂದ ಆರು ಕಿಲೋಮೀಟರ್ ದೂರವಿರುವ ಗ್ರಾಮ ಪಂಚಾಯಿತಿಯು ಸಿದ್ದಾಪುರ– ಕುಮಟಾ ಹೆದ್ದಾರಿಯಲ್ಲಿದೆ.

ಗ್ರಾಮ ಪಂಚಾಯಿತಿಯ ಕಾರ್ಯಾಲಯವು ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ಸಭಾಭವನ ಮತ್ತು ಸಾರ್ವಜನಿಕ ಗ್ರಂಥಾಲಯಗಳಿವೆ. ಪಕ್ಕದಲ್ಲಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಇದೆ. ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಮೀಪ ಇತ್ತೀಚೆಗೆ ಆರಂಭಗೊಂಡ ‘ಗ್ರಾಮ ಒನ್’ ಕೇಂದ್ರವೂ ಇದೆ.

11 ಸದಸ್ಯರಿದ್ದು, ವಾಸಂತಿ ಪಿ.ಹಸ್ಲರ್ ಬೇಡ್ಕಣಿ ಅಧ್ಯಕ್ಷೆಯಾಗಿ, ರೇಣುಕಾ ಪಿ.ನಾಯ್ಕ ಕಾನಳ್ಳಿ ಉಪಾಧ್ಯಕ್ಷೆಯಾಗಿದ್ದಾರೆ.
ಬೇಡ್ಕಣಿ, ಮುತ್ತಿಗೆ, ಭಾನ್ಕುಳಿ ಮತ್ತು ತ್ಯಾರ್ಸಿ ಎಂಬ ನಾಲ್ಕು ಕಂದಾಯ ಗ್ರಾಮಗಳು ಸೇರಿ ಬೇಡ್ಕಣಿ ಗ್ರಾಮ ಪಂಚಾಯಿತಿ ರೂಪುಗೊಂಡಿದೆ. 2011ರ ಜನಗಣತಿಯ ಪ್ರಕಾರ 1,076 ಕುಟುಂಬಗಳಿಂದ 4,266 ಜನಸಂಖ್ಯೆ ಇತ್ತು.

ಏನೇನಿವೆ?:

ಪ್ರತಿ ಶನಿವಾರ ಸಾವಿರಾರು ಭಕ್ತರು ಭೇಟಿ ನೀಡುವ ಶನೇಶ್ವರ ದೇವಾಲಯ, ಪುರಾತನ ಜೈನ ಬಸದಿ, ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ ಕಾನಳ್ಳಿ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಅಡಿಕೆ ಮತ್ತು ಭತ್ತ ಇಲ್ಲಿನ ಪ್ರಮುಖ ಬೆಳೆಯಾಗಿವೆ. ಕಾಳು ಮೆಣಸು, ಬಾಳೆ ಮತ್ತು ಕಬ್ಬು ಉಪ ಬೆಳೆಗಳಾಗಿವೆ. ಮಲೆನಾಡಿನ ತಪ್ಪಲಿನಲ್ಲಿರುವ ಪ್ರದೇಶವಾಗಿರುವ ಕಾರಣ ನೀರಿಗೆ ಹೆಚ್ಚು ಸಮಸ್ಯೆಯಿಲ್ಲ. ಆದರೂ ರೈತರ ಅನುಕೂಲಕ್ಕಾಗಿ 73 ತೆರೆದ ಬಾವಿಗಳು, 12 ಕೊಳವೆ ಬಾವಿಗಳು, ನಾಲ್ಕು ಕಿರು ನೀರು ಯೋಜನೆಗಳು ಮತ್ತು ಎರಡು ಝರಿ ನೀರಿನ ಯೋಜನೆಗಳು ಜಾರಿಯಾಗಿವೆ.

ಗ್ರಾಮದಲ್ಲಿ ಅತಿ ದೊಡ್ಡ ಊರು ಬೇಡ್ಕಣಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಜಾನುವಾರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 10 ನೀರಿನ ತೊಟ್ಟಿಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಏಳು ಸುಸ್ಥಿತಿಯಲ್ಲಿದ್ದು, ಮೂರು ತೊಟ್ಟಿಗಳು ನಿರ್ವಹಣೆ ಆಗಬೇಕಿದೆ. ಹೆಚ್ಚು ಜನಸಂಖ್ಯೆ ಇರುವ ಬೇಡ್ಕಣಿ ಗ್ರಾಮಕ್ಕೆ ಹೆಚ್ಚಿನ ಕಾಮಗಾರಿಗಳು ದೊರೆತಿದ್ದು, ಕಡಿಮೆ ಜನ ಸಂಖ್ಯೆ ಇರುವ ಭಾನ್ಕುಳಿ ಗ್ರಾಮಕ್ಕೆ ಅತಿ ಕಡಿಮೆ ಕಾಮಗಾರಿಗಳು ದೊರೆತಿವೆ.

ರಸ್ತೆ ದುರಸ್ತಿಯ ನಿರೀಕ್ಷೆ:

ಭಾನ್ಕುಳಿ ಗ್ರಾಮದ ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರವಿದೆ. ಮುಂದಿನ ಕಲಿಗೆ ವಿದ್ಯಾರ್ಥಿಗಳು ಮೂರು, ನಾಲ್ಕು ಕಿಲೋಮೀಟರ್ ನಡೆದುಕೊಂಡು ಬೇಡ್ಕಣಿಗೆ ಬರಬೇಕಿದೆ. ಭಾನ್ಕುಳಿ ಗ್ರಾಮದ ಕೆಲವು ರಸ್ತೆಗಳು ಸುಧಾರಣೆ ಆಗಬೇಕಿದ್ದು, ಮಳೆಗಾಲದಲ್ಲಿ ವಾಹನ ಸವಾರರು ಕೆಸರಿನಲ್ಲಿ ಸಂಕಷ್ಟಕ್ಕೀಡಾಗುತ್ತಾರೆ.

‘ಸಿದ್ದಾಪುರ – ಕುಮಟಾ ಹೆದ್ದಾರಿಯಿಂದ ಹಕ್ಕಲಗೇರಿ ಮಾರ್ಗವಾಗಿ ಗುಂಜಗೋಡು ರಸ್ತೆಗೆ ಸಂಪರ್ಕಿಸುವ ಊರಿನ ಮುಖ್ಯ ರಸ್ತೆಗೆ ಶನೇಶ್ವರ ದೇವಾಲಯದವರೆಗೆ ಕಾಂಕ್ರೀಟ್ ಮಾಡಲಾಗಿದೆ. ಉಳಿದ ಭಾಗ ಸಂಪೂರ್ಣ ಹದಗೆಟ್ಟಿದ್ದು, ನಿತ್ಯವೂ ಸಂಚರಿಸುವ ನೂರಾರು ಜನರಿಗೆ ತೊಂದರೆಯಾಗುತ್ತಿದೆ’ ಎಂದು ಗ್ರಾಮಸ್ಥ ಗಣಪತಿ ನಾಯ್ಕ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT