ಕಾರವಾರ: ಉತ್ತರ ಕನ್ನಡದ ಕರಾವಳಿಯಲ್ಲಿ ಗುರುವಾರ ನಸುಕಿನಿಂದಲೇ ಜೋರಾಗಿ ಮಳೆಯಾಗುತ್ತಿದೆ. ದಟ್ಟವಾದ ಮೋಡ ಕವಿದಿದ್ದು, ವರ್ಷಧಾರೆ ಮುಂದುವರಿಯುವ ಲಕ್ಷಣಗಳಿವೆ.
ಭಟ್ಕಳದ ಶಿರಾಲಿಯಲ್ಲಿ ಜನತಾ ವಿದ್ಯಾಲಯದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿದೆ. ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಅಸಮರ್ಪಕವಾದ ಚತುಷ್ಪಥ ಕಾಮಗಾರಿಯಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಐ.ಆರ್.ಬಿ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರವಾರ ನಗರದ ಹಬ್ಬುವಾಡದಲ್ಲಿ ಚರಂಡಿ ಉಕ್ಕಿ ಹರಿಯುತ್ತಿದೆ. ರಾಜ್ಯ ಹೆದ್ದಾರಿ ಮತ್ತೊಮ್ಮೆ ಜಲಾವೃತವಾಗುವ ಹಂತದಲ್ಲಿದೆ. ಇದೇ ರೀತಿ ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ.
ಮಲೆನಾಡಿನ ಶಿರಸಿ, ಯಲ್ಲಾಪುರ, ಜೊಯಿಡಾ, ಸಿದ್ದಾಪುರ ಭಾಗದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮುಂಡಗೋಡ ಮತ್ತು ಹಳಿಯಾಳದಲ್ಲೂ ಮಳೆಯಾಗಿದೆ.
24 ಗಂಟೆಗಳಲ್ಲಿ ಅಂಕೋಲಾದಲ್ಲಿ 11.6 ಸೆಂಟಿಮೀಟರ್, ಹೊನ್ನಾವರದಲ್ಲಿ 11.3 ಸೆಂಟಿಮೀಟರ್, ಕಾರವಾರದಲ್ಲಿ 9.1 ಸೆಂಟಿಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.