ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ ಹರಸಾಹಸ

ನೂರಾರು ವಿದ್ಯುತ್ ಕಂಬಗಳು, ಪರಿವರ್ತಕಗಳಿಗೆ ಹಾನಿ: ದುರಸ್ತಿಗೆ ಶ್ರಮಿಸುತ್ತಿರುವ ಸಿಬ್ಬಂದಿ
Last Updated 17 ಮೇ 2021, 13:04 IST
ಅಕ್ಷರ ಗಾತ್ರ

ಕಾರವಾರ: ‘ತೌತೆ’ ಚಂಡಮಾರುತವು ಉತ್ತರ ಕನ್ನಡ ಕರಾವಳಿಯ ಮೂಲಕ ಉತ್ತರಕ್ಕೆ ಸಾಗಿದ್ದು, ಜಿಲ್ಲೆಯಲ್ಲಿ ವಾತಾವರಣವು ಸೋಮವಾರ ಸಹಜ ಸ್ಥಿತಿಗೆ ಮರಳಿದೆ. ಆದರೆ, ಎರಡು ದಿನಗಳಿಂದ ಅಪಾರ ಹಾನಿಯನ್ನು ಮುಂದಿಟ್ಟಿದೆ.

ಕಾರವಾರದಿಂದ ಭಟ್ಕಳದವರೆಗೂ ಕರಾವಳಿಯಲ್ಲಿ ನೂರಾರು ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು, ತಂತಿಗಳು ಹಾನಿಗೀಡಾಗಿವೆ. ಕಾರವಾರ– ಅಂಕೋಲಾ ಉಪ ವಿಭಾಗವೊಂದರಲ್ಲೇ 213 ಕಂಬಗಳು ಮುರಿದಿವೆ. 14 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಸುಮಾರು ₹ 38 ಲಕ್ಷದಷ್ಟು ಹಾನಿಯಾಗಿರುವ ಪ್ರಾಥಮಿಕ ಮಾಹಿತಿಯಿದೆ ಎಂದು ಹೆಸ್ಕಾಂ ಕಾರ್ಯ ಪಾಲಕ ಎಂಜಿನಿಯರ್ ರೋಶನಿ ಮಾಹಿತಿ ನೀಡಿದ್ದಾರೆ.

ಗಾಳಿಯ ಅಬ್ಬರಕ್ಕೆ ಮರಗಳು ಮುರಿದು ತಂತಿಗಳ ಮೇಲೆ ಬಿದ್ದಿವೆ. ಇದರಿಂದ ಕಂಬಗಳು ಮುರಿದು ಹೋಗಿದ್ದು, ಶನಿವಾರ ರಾತ್ರಿಯಿಂದಲೇ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಗರದ ಕೆಲವು ಪ್ರದೇಶಗಳಿಗೆ ಭಾನುವಾರ ರಾತ್ರಿಯ ವೇಳೆಗೆ ವಿದ್ಯುತ್ ನೀಡಲು ಹೆಸ್ಕಾಂ ಸಿಬ್ಬಂದಿ ಸಫಲರಾದರು. ಕೆಲವು ಬಡಾವಣೆಗಳಿಗೆ ಸೋಮವಾರ ವಿದ್ಯುತ್ ದೊರೆಯಿತು. ಹಾನಿಯ ಪ್ರಮಾಣ ಅಗಾಧವಾಗಿರುವ ಕಾರಣ ತಾಲ್ಲೂಕಿನ ಅಮದಳ್ಳಿ, ಬೈತಖೋಲ್, ವೈಲವಾಡ ಸುತ್ತಮುತ್ತ ವಿದ್ಯುತ್ ಸಂಪರ್ಕ ಪುನಃ ನೀಡಲು ಹೆಸ್ಕಾಂ ಸಿಬ್ಬಂದಿ ಸತತ ಶ್ರಮಿಸುತ್ತಿದ್ದಾರೆ.

ಹೊನ್ನಾವರ ಉಪ ವಿಭಾಗದಲ್ಲಿ (ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲ್ಲೂಕುಗಳು) 434 ವಿದ್ಯುತ್ ಕಂಬಗಳು ಮುರಿದಿವೆ. 17 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. 14 ಕಿಲೋಮೀಟರ್‌ಗಳಷ್ಟು ತಂತಿ ತುಂಡಾಗಿವೆ. ಅಂದಾಜು ₹ 89.2 ಲಕ್ಷದಷ್ಟು ಉಪಕರಣಗಳಿಗೆ ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಇದರಲ್ಲಿ ಹೊನ್ನಾವರ ತಾಲ್ಲೂಕಿನಲ್ಲಿ 250, ಕುಮಟಾ ತಾಲ್ಲೂಕಿನಲ್ಲಿ 122 ಹಾಗೂ ಭಟ್ಕಳ ತಾಲ್ಲೂಕಿನಲ್ಲಿ 62 ವಿದ್ಯುತ್ ಕಂಬಗಳು ಸೇರಿವೆ. ಅಂತೆಯೇ, ಭಟ್ಕಳದಲ್ಲಿ ಒಂಬತ್ತು ಮತ್ತು ಹೊನ್ನಾವರದಲ್ಲಿ ಎಂಟು ಪರಿವರ್ತಗಳಿವೆ.

ಶಿರಸಿ ಹೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ 327 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 10 ಪರಿವರ್ತಕಗಳು ಹಾಳಾಗಿವೆ. ಒಟ್ಟು ₹ 47.17 ಲಕ್ಷ ಹಾನಿ ಉಂಟಾಗಿರಬಹುದು ಎಂದು ಅಂದಾಜಿಸಿದ್ದಾಗಿ ಹೆಸ್ಕಾಂ ಕಾರ್ಯ ಪಾಲಕ ಎಂಜಿನಿಯರ್ ವಿನಯ ರಾಚೊಟ್ಟಿ ತಿಳಿಸಿದ್ದಾರೆ.

ಯಲ್ಲಾಪುರ ತಾಲ್ಲೂಕಿನಲ್ಲಿ 110 ಕಂಬಗಳು ಮುರಿದಿವೆ. ಮೂರು ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ. ಅಂದಾಜು ₹ 20 ಹಾನಿಯಾಗಿದೆ. ಸಿದ್ದಾಪುರ ತಾಲ್ಲೂಕಿನಲ್ಲಿ 34 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಎರಡು ಟ್ರಾನ್ಸ್‌ಫಾರ್ಮರ್ ಕೆಟ್ಟಿವೆ. ಹೆಚ್ಚಿನ ಕಂಬಗಳನ್ನು ನಿಲ್ಲಿಸಿ, ವಿದ್ಯುತ್ ಮರು ಸಂಪರ್ಕ ನೀಡಲಾಗಿದೆ. ಉಳಿದವುಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸುಮಾರು ₹ 10 ಲಕ್ಷ ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುನ್ನೆಚ್ಚರಿಕೆಯಿಂದ ತಪ್ಪಿದ ಹಾನಿ:

ಎರಡು ದಿನಗಳಿಂದ ತೀರಕ್ಕೆ ಭಾರಿ ಗಾತ್ರದ ಅಲೆಗಳು ಅಪ್ಪಳಿಸಿದ ಪರಿಣಾಮ ಮೀನುಗಾರ ಸಮುದಾಯಕ್ಕೆ ಭಾರಿ ಆತಂಕ ಕಾಡಿತ್ತು. ಆದರೆ, ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡ ಪರಿಣಾಮ ದೊಡ್ಡ ಪ್ರಮಾಣದ ಹಾನಿ ತಪ್ಪಿದೆ.

ಈ ಬಗ್ಗೆ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು, ‘ಚಂಡಮಾರುತದ ಬಗ್ಗೆ ಮೂರು ದಿನಗಳ ಹಿಂದೆಯೇ ನೀಡಿದ ಮುನ್ನೆಚ್ಚರಿಕೆಯನ್ನು ಮೀನುಗಾರರು ಪಾಲಿಸಿದ್ದಾರೆ. ದೋಣಿಗಳನ್ನು ದಡದಿಂದ ಮೇಲೆತ್ತಿ ಇಟ್ಟಿದ್ದಾರೆ. ಹಾಗಾಗಿ ದೋಣಿಗಳು ನೀರು ಪಾಲಾಗಿದ್ದು, ಅಲೆಗಳ ಹೊಡೆತಕ್ಕೆ ಭಾರಿ ಹಾನಿಯಾಗಿರುವ ದೂರುಗಳಿಲ್ಲ’ ಎಂದರು.

‘ಮುದಗಾದಲ್ಲಿ 10 ಮೀನುಗಾರರ ಬಲೆಗಳು ಕೊಚ್ಚಿಕೊಂಡು ಹೋಗಿರುವ ಮಾಹಿತಿಯಿದೆ. ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನಲ್ಲಿ 10 ದೋಣಿಗಳಿಗೆ ಭಾಗಶಃ ಹಾನಿಯಾಗಿದೆ. ದೇವಭಾಗ, ಮಾಜಾಳಿ, ಮುದಗಾ ಮುಂತಾದ ಕಡೆಗೆ ಭೇಟಿ ನೀಡಿ ಪ‍ರಿಶೀಲನೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT