ಶುಕ್ರವಾರ, ಅಕ್ಟೋಬರ್ 18, 2019
24 °C

ಹಳ್ಳಿಯಲ್ಲಿ ಉದ್ಯಮ ಆರಂಭಿಸಿದ ಯುವಕ | ರೈತರಿಗೆ ವರವಾಯ್ತು ‘ಬಾಳೆಕಾಯಿ ಮಂಡಿ’

Published:
Updated:
Prajavani

ಶಿರಸಿ: ವಾಹನದ ಚಾಲಕನಾಗಿ ಗೋವಾಕ್ಕೆ ಬಾಳೆಕಾಯಿ ಕೊಂಡೊಯ್ಯುತ್ತಿದ್ದ ಯುವ ಉತ್ಸಾಹಿಯೊಬ್ಬರು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯಮ ಆರಂಭಿಸಿ, ರೈತರ ಮನಗೆದ್ದಿದ್ದಾರೆ.

ತಾಲ್ಲೂಕಿನ ದನಗನಹಳ್ಳಿಯ ಇಮ್ರಾನ್ ಶೇಖ್ ಅವರು, ಸಂಬಂಧಿಯೊಬ್ಬರು ವಾಹನದ ಚಾಲಕರಾಗಿ, ದಾಸನಕೊಪ್ಪ ಸುತ್ತಮುತ್ತಲಿನ ರೈತರು ಬೆಳೆದ ಬಾಳೆಕಾಯಿಯನ್ನು ಗೋವಾಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆಗ, ಅವರಿಗೆ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸುವ ಯೋಚನೆ ಬಂತು. ಪರಿಣಾಮವಾಗಿ ಎಂಟು ತಿಂಗಳಿನಿಂದ ದಾಸನಕೊಪ್ಪದಲ್ಲಿ ‘ತಾಜ್ ಬಾಳೆಕಾಯಿ ಮಂಡಿ’ ಯಶಸ್ವಿಯಾಗಿ ನಡೆಯುತ್ತಿದೆ.

ಬನವಾಸಿ ಹೋಬಳಿಯಲ್ಲಿ ರೈತರು ಬಾಳೆಯನ್ನು ಉಪಬೆಳೆಯಾಗಿ ಬೆಳೆಯುತ್ತಾರೆ. ದಾಸನಕೊಪ್ಪದಲ್ಲಿ ಪ್ರತಿ ಭಾನುವಾ ಬಾಳೆಕಾಯಿ ಮಾರ್ಕೆಟ್‌ ನಡೆಯುತ್ತದೆ. ಈ ಮೊದಲು ರೈತರಿಗೆ ಮಾರ್ಕೆಟ್‌ ದಿನವೇ ಫಸಲನ್ನು ಮಾರಾಟಕ್ಕೆ ತರಬೇಕಿತ್ತು. ಹಾನಗಲ್, ಸವಣೂರು, ಬಂಕಾಪುರ ಭಾಗದ ದಲಾಲರು ಬಂದು, ರೈತರು ಶ್ರಮಪಟ್ಟು ಬೆಳೆದ ಬೆಲೆಯನ್ನು ಅರ್ಧ ಬೆಲೆಗೆ ಖರೀದಿಸುತ್ತಿದ್ದರು. ಈಗ ಇಮ್ರಾನ್ ಅವರ ಉದ್ಯಮದಿಂದ ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತಿದೆ.

‘ವಾರದ ಏಳು ದಿನವೂ ಮಂಡಿಯಲ್ಲಿ ಬಾಳೆಕಾಯಿ ಖರೀದಿ ನಡೆಯುತ್ತದೆ. ರೈತರು ಭಾನುವಾರದ ಮಾರ್ಕೆಟ್‌ಗೆ ಕಾಯಬೇಕಾಗಿಲ್ಲ. ಅಲ್ಲದೇ, ಮಾರುಕಟ್ಟೆಯಲ್ಲಿರುವ ದರದಲ್ಲಿಯೇ ರೈತರಿಂದ ಖರೀದಿಸುವುದರಿಂದ ಅವರಿಗೆ ಅನುಕೂಲವಾಗಿದೆ. ನೆರೆಯ ಜಿಲ್ಲೆಯ ಅಕ್ಕಿಆಲೂರು, ತಿಳವಳ್ಳಿ, ದಾಸನಕೊಪ್ಪ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ ರೈತರಿಂದ ಮಿಟ್ಲಿ, ಕರಿಬಾಳೆ, ಸುಗಂಧಿ (ಹುಳಿ ಮಿಟ್ಲಿ), ಪಚಬಾಳೆ ಸೇರಿ ದಿನಕ್ಕೆ ಸರಾಸರಿ 2–3 ಟನ್ ಬಾಳೆಕಾಯಿ ಖರೀದಿಸುತ್ತೇನೆ’ ಎನ್ನುತ್ತಾರೆ ಅವರು.

‘ಆರಂಭದ ದಿನಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ದಲಾಲರು ದ್ವಿತೀಯ ದರ್ಜೆ ಮಾಲನ್ನು ಗೋವಾಕ್ಕೆ ಒಯ್ದು ಕಡಿಮೆ ದರಕ್ಕೆ ವ್ಯಾಪಾರ ಮಾಡುತ್ತಿದ್ದರು. ನಾನು ಮಾರಕಟ್ಟೆ ದರದಲ್ಲಿ ಖರೀದಿಸಿದ ಉತ್ತಮ ದರ್ಜೆಯ ಫಸಲನ್ನು ದ್ವಿತೀಯ ದರ್ಜೆಯ ದರಕ್ಕೆ ಕೊಡಬೇಕಾಗುತ್ತಿತ್ತು. ಅನುಭವ ಉದ್ಯಮದಲ್ಲಿ ನನ್ನನ್ನು ಪಳಗಿಸಿದೆ. ಹೊಸದಾಗಿ ಉದ್ಯಮ ಆರಂಭಿಸುವವರು, ಶುರುವಿನಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸಿದರೆ, ಯಶಸ್ಸು ಖಂಡಿತ ಸಿಗುತ್ತದೆ’ ಎಂದು ಇಮ್ರಾನ್ ಪ್ರತಿಕ್ರಿಯಿಸಿದರು.

 

 

 

 

 

 

Post Comments (+)