ಶುಕ್ರವಾರ, ಫೆಬ್ರವರಿ 28, 2020
19 °C
ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ಸರ್ಕಾರಕ್ಕೆ ಮುಖಂಡರ ಆಗ್ರಹ

ಕಾರವಾರ| ಮಧ್ಯಂತರ ತಡೆ ಆಶಾದಾಯಕ ಬೆಳವಣಿಗೆ: ಸತೀಶ ಸೈಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಮೀನುಗಾರರ ಹಾಗೂ ತಾಲ್ಲೂಕಿನ ಜನರ ಹೋರಾಟಕ್ಕೆ ನ್ಯಾಯಾಲಯದಿಂದಲೂ ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೂ ಯೋಜನೆಯನ್ನು ಸರ್ಕಾರವು ಸಂಪೂರ್ಣ ಕೈಬಿಡಲಿ ಎನ್ನುವುದೇ ನಮ್ಮ ಕಳಕಳಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಹೇಳಿದರು.

ಅವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೀನುಗಾರ ಮುಖಂಡರು ಹೋರಾಟಕ್ಕಾಗಲೀ ಬಂದ್‌ಗಾಗಲೀ ನನಗೆ ಆಮಂತ್ರಣ ನೀಡಿರಲಿಲ್ಲ. ಆದರೆ, ನಾನು ಕಡಲತೀರ‌ದ ರಕ್ಷಣೆ ಹಾಗೂ ಮೀನುಗಾರರ ಹಿತಾಸಕ್ತಿಗಾಗಿ ಹೋರಾಟದಲ್ಲಿ ಸ್ವತಃ ಭಾಗಿಯಾಗಿದ್ದೇನೆ. ರಾಜಕೀಯ ಸ್ವಾರ್ಥವೆಂದು ದೂರುವ ಶಾಸಕಿ ರೂಪಾಲಿ ಅವರು ಇದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ಶಾಸಕಿ ದೂರದಲ್ಲಿ ಕುಳಿತು ಯೋಜನೆಯಿಂದ ಮೀನುಗಾರರಿಗೆ ತೊಂದರೆಯಾಗದು ಎನ್ನುತ್ತಾರೆ. 11 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ ಮೀನುಗಾರರ ಎದುರಿಗೆ ಬಂದು ಅವರು ಮಾತನಾಡಲಿಲ್ಲ. ಸಾಗರಮಾಲಾ ವಿರೋಧಿಸಿ ನಾನು ಮೊದಲ ದಿನದಿಂದಲೂ ಹೋರಾಟಗಾರರಿಗೆ ಬೆಂಬಲಿಸಿದ್ದೇನೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರ ಬಳಿಯೂ ಚರ್ಚಿಸಿದ್ದೇನೆ’ ಎಂದರು.

ಹರಿಕಂತ್ರ ಮಹಾಜನ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಬಿ.ಹರಿಕಂತ್ರ ಮಾತನಾಡಿ, ‘ಯಾವುದೇ ಪಕ್ಷದ ಮೇಲೆ ನಮಗೆ ದ್ವೇಷವಿಲ್ಲ. ಬಿ.ಜೆ.ಪಿ.ಗೆ ಮತ ಚಲಾಯಿಸಿದವರೂ ಹೋರಾಟವನ್ನು ಬೆಂಬಲಿಸಿದ್ದರು. ಮೀನುಗಾರ ಮುಖಂಡರ ಜೊತೆಗೆ ಶಾಸಕಿ ರೂಪಾಲಿ ಸಭೆ ನಡೆಸಿದ್ದರು’ ಎಂದರು.

ಭಾನುವಾರದಿಂದ ಮೀನು ವ್ಯಾಪಾರ: ಕಾರವಾರದಲ್ಲಿ ಸಾಗರಮಾಲಾ ಯೋಜನೆ ವಿರುದ್ಧ 12 ದಿನಗಳಿಂದ ನಡೆಯುತ್ತಿರುವ ಧರಣಿ ಶನಿವಾರ ಅಂತ್ಯಗೊಳ್ಳಲಿದೆ. ಹೈಕೋರ್ಟ್ ಈ ಕಾಮಗಾರಿಗೆ ಗುರುವಾರ ಮಧ್ಯಂತರ ತಡೆ ನೀಡಿದೆ. ಹಾಗಾಗಿ ಭಾನುವಾರದಿಂದ ಮೀನು ಮಾರುಕಟ್ಟೆ ತೆರೆಯಲಿದ್ದು, ಎಂದಿನಂತೆ ಚಟುವಟಿಕೆಗಳು ಪ್ರಾರಂಭವಾಗಲಿವೆ’ ಎಂದು ಮುಖಂಡ ರಾಜು ತಾಂಡೇಲ ತಿಳಿಸಿದ್ದಾರೆ.

‘ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮೂರ್ತಿ ನಾಯಕ ಹಾಗೂ ಸುಪ್ರೀಂಕೋರ್ಟ್ ವಕೀಲ ದೇವದತ್ತ ಕಾಮತ್ ಅವರು ಶನಿವಾರ ಕಾರವಾರಕ್ಕೆ ಬಂದು ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ’ ಎಂದು ತಿಳಿಸಿದರು.

ಮುಂದುವರಿದ ಬೆಂಬಲ: ಬಂದರು ವಿಸ್ತರಣೆ ಕಾಮಗಾರಿ ವಿರುದ್ಧದ ಹೋರಾಟಕ್ಕೆ ದಿವೇಕರ ಕಾಲೇಜು,  ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ತಾಲ್ಲೂಕು ಸುನ್ನಿ ಮುಸ್ಲಿಂ ಅಸೋಸಿಯೇಶನ್ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ.

ಮೀನುಗಾರ ಮುಖಂಡ ಕೆ.ಟಿ.ತಾಂಡೇಲ, ವಿವಿಧ ಪ್ರಮುಖರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು