ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳವಾಗಿ ನೆರವೇರಿದ ಏಳನೇ ಯೋಗ ದಿನಾಚರಣೆ

ಕೋವಿಡ್ ನಿಯಮಾವಳಿಗೊಂದಿಗೆ ನಡೆದ ಕಾರ್ಯಕ್ರಮ
Last Updated 21 ಜೂನ್ 2021, 14:29 IST
ಅಕ್ಷರ ಗಾತ್ರ

ಕಾರವಾರ: ‘ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಮಯ ನಿಗದಿಪಡಿಸಿಕೊಂಡು ಯೋಗಾಭ್ಯಾಸ ಮಾಡಬೇಕು. ಇದರಿಂದ ನಮ್ಮ ಆರೋಗ್ಯ ವೃದ್ಧಿಯೊಂದಿಗೆ ಇತರರಿಗೆ ಸೇವೆ ನೀಡಲೂ ಸಾಧ್ಯವಾಗುತ್ತದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಏಳನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಯುಷ್ ಮಂತ್ರಾಲಯ, ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ, ನೆಹರೂ ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ದಿನಾಚರಣೆ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮಾತನಾಡಿ, ‘ಯೋಗದಿಂದ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಸದೃಢವಾಗಲಿದೆ. ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ತಡೆಯಲು ಯೋಗ ಸಹಕಾರಿ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ ಎಂ. ಮಾತನಾಡಿ, ‘ಈಗಿನ ಕೊರೊನಾ ಸನ್ನಿವೇಶದಲ್ಲಿ ದೈಹಿಕ ಆರೋಗ್ಯದ ಸಮಸ್ಯೆ ಜೊತೆಗೆ ಮಾನಸಿಕ ಆರೋಗ್ಯದ ಸಮಸ್ಯೆಗೂ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ತಜ್ಞರ ಕೊರತೆಯಿದೆ. ಆದ್ದರಿಂದ ಯೋಗಾಭ್ಯಾಸ ಅನುಸರಿಸಿಕೊಳ್ಳುವುದು ಅನುಕೂಲಕರ’ ಎಂದು ಅಭಿಪ್ರಾಯಪಟ್ಟರು.

ಯೋಗ ವೈದ್ಯ ಡಾ.ಪ್ರಕಾಶ ಯಾಜಿ ಸುಮಾರು 45 ನಿಮಿಷ ಯೋಗಾಸನ ನಡೆಸಿಕೊಟ್ಟರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ನೆಹರೂ ಯುವ ಕೇಂದ್ರದ ಲೆಕ್ಕಾಧಿಕಾರಿ ಮೀರಾ ನಾಯ್ಕ ಇದ್ದರು.

‘ವಿಕ್ರಮಾದಿತ್ಯ’ದಲ್ಲಿ ಯೋಗಾಭ್ಯಾಸ:

ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಏಳನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ನೌಕಾನೆಲೆ ವಿವಿಧ ಘಟಕಗಳ 2,500 ಸಿಬ್ಬಂದಿ ಯುದ್ಧ ವಿಮಾನ ವಾಹಕ ನೌಕೆ ಐ.ಎನ್.ಎಸ್ ವಿಕ್ರಮಾದಿತ್ಯದ ಮೇಲೆ ಹಾಗೂ ಮನೆಗಳಲ್ಲಿ ಯೋಗಾಭ್ಯಾಸ ಮಾಡಿದರು.

‘ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಯೋಗ ಸಹಕಾರಿಯಾಗುವ ಬಗ್ಗೆ ಜಾಗೃತಿ, ಅರಿವು ಮೂಡಿಸಲು ಈ ದಿನಾಚರಣೆಯನ್ನು ಆಯೋಜಿಸಲಾಯಿತು. ನಿತ್ಯವೂ ಯೋಗಾಭ್ಯಾಸ ಮಾಡಲು ಪ್ರೇರೇಪಿಸಲು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ನಮಸ್ತೆ ಯೋಗ ಆ್ಯಪ್ ಮೂಲಕ ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆಯು ತರಬೇತಿ ನೀಡಿತ್ತು’ ಎಂದು ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪತಂಜಲಿ ಯೋಗ ಸಮಿತಿ:

ನಗರದ ಪತಂಜಲಿ ಯೋಗ ಸಮಿತಿಯಿಂದ ಮಹಾಸತಿ ಕಲ್ಯಾಣ ಮಂಟಪದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಯೋಗ ಗುರು ಪ್ರಶಾಂತ ರೇವಣಕರ್,ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ.ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್, ನಗರಸಭೆ ಸದಸ್ಯ ಹನುಮಂತ ತಳವಾರ್, ಮುಖಂಡ ಪ್ರದೀಪ ಗುನಗಿ ಇದ್ದರು.

ಎನ್.ಸಿ.ಸಿ 29ನೇ ಬಟಾಲಿಯನ್:

ಕಾರವಾರದ 29ನೇ ಬಟಾಲಿಯನ್ಎನ್.ಸಿ. ಸಿ. ವ್ಯಾಪ್ತಿಯಲ್ಲಿ ಬರುವ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಭಟ್ಕಳ ಮತ್ತು ದಾಂಡೇಲಿಯ ಶಾಲಾ ಕಾಲೇಜುಗಳ ಎನ್.ಸಿ.ಸಿ. ವಿದ್ಯಾರ್ಥಿಗಳು ಸರಳವಾಗಿ ಯೋಗ ದಿನಾಚರಣೆ ಮಾಡಿದರು.

ಜಿಂಗಲ್ ಹಾಡುಗಳ ರಚನೆ, ಯೋಗ ಪ್ರತಿಜ್ಞೆ, ಆನ್‌ಲೈನ್ ರಸಪ್ರಶ್ನೆ ಮತ್ತು ಯೋಗದ ಪೂರ್ವ ತಯಾರಿಯಲ್ಲಿ ಎಲ್ಲಾ ಕೆಡೆಟ್‌ಗಳು ತೊಡಗಿಸಿಕೊಂಡರು. ಇಬ್ಬರು ಅಧಿಕಾರಿಗಳು, 16 ದೈಹಿಕ ಶಿಕ್ಷಣ ತರಬೇತುದಾರರು, ಎಂಟು ಎ.ಎನ್.ಒ ಹಾಗೂ 825 ಎನ್.ಸಿ.ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಇಡೀ ಬದುಕು ಯೋಗಮಯವಾಗಲಿ’:

ಕಾರವಾರ: ‘ಸರಿಯಾದ ಆಹಾರ, ವಿಹಾರ, ಚಟುವಟಿಕೆ ಮೂಲಕ ನಿದ್ದೆ, ಸ್ವಪ್ನ, ಜಾಗೃತಸ್ಥಿತಿ ಮತ್ತು ಸಮಾಧಿ ಸ್ಥಿತಿಯನ್ನು ಆನಂದಿಸುವುದೇ ನಿಜವಾದ ಯೋಗ. ಯೋಗ ಜೀವಾತ್ಮ ಮತ್ತು ಪರಮಾತ್ಮನನ್ನು ಬೆಸೆಯುವ ಪವಿತ್ರ ಬಂಧ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವ ಭಾರತಿ ಸ್ವಾಮೀಜಿ ಹೇಳಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಮ್ಮಿಕೊಂಡ ‘ಯೋಗಾಂತರಂಗ’ ಅಂತರ್ಜಾಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಒಂದು ಗಂಟೆ ಯೋಗ ಮಾಡಿ ಉಳಿದ 23 ಗಂಟೆ ಪೂರಕ ಜೀವನ ನಡೆಸದಿದ್ದರೆ ಅಂಥ ಯೋಗ ಯಾವ ಪ್ರಯೋಜನವನ್ನೂ ನೀಡದು. ಆದ್ದರಿಂದ ವರ್ಷಕ್ಕೊಮ್ಮೆ ಯೋಗ ದಿನಾಚರಣೆ ಮಾಡುವ ಬದಲು ದಿನವೂ ಯೋಗಾಚರಣೆ ಅಭ್ಯಾಸ ಮಾಡಿಕೊಳ್ಳೋಣ’ ಎಂದರು.

ಮೈಸೂರಿನ ಶ್ರೀಭಾರತೀ ಯೋಗಧಾಮದ ಯೋಗಾಚಾರ್ಯ ಮಧುಕೇಶ್ವರ ಹೆಗಡೆ ಪ್ರಮುಖ ಉಪನ್ಯಾಸ ನೀಡಿದರು. ವಿ.ವಿ.ವಿ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ, ವಿದ್ಯಾ ಪರಿಷತ್ತು ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಕಾರ್ಯದರ್ಶಿ ನೀಲಕಂಠ ಯಾಜಿ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ, ಪ್ರಾಚಾರ್ಯ ಗುರುಮೂರ್ತಿ ಮೇಣ ಇದ್ದರು. ಮಹೇಶ್ ಭಟ್ ದೇವತೆ ಕಾರ್ಯಕ್ರಮ ನಿರೂಪಿಸಿದರು.

ದೇಹದ ಸಮತೋಲನಕ್ಕೆ ಯೋಗ ಸಹಕಾರಿ:

ಶಿರಸಿ: ತಾಲ್ಲೂಕಿನ ಸೋಂದಾದ ಸ್ವರ್ಣವಲ್ಲಿ ಮಠದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ವಿವಿಧ ಬಗೆಯ ಯೋಗಾಸನ ಪ್ರದರ್ಶಿಸಿ ಗಮನಸೆಳೆದರು.

ಕಳೆದ ಹಲವು ವರ್ಷಗಳಿಂದಲೂ ಅವರು ಯೋಗಾಸನ ಮಾಡುತ್ತಿದ್ದಾರೆ. ಆದರೆ, ಸೋಮವಾರ ಯೋಗ ದಿನದ ಅಂಗವಾಗಿ ಮಠದ ಶಿಷ್ಯರಿಗೆ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗದ ಪಾಠ ಹೇಳಿಕೊಟ್ಟರು. ‘ದೇಹ ಮತ್ತು ಮನಸ್ಸು ಸಮತೋಲನದಲ್ಲಿ ಇಟ್ಟುಕೊಳ್ಳಲು ಯೋಗ ಅಗತ್ಯ. ಯೋಗದ ಮೂಲಕ ಜಗತ್ತು ಒಗ್ಗೂಡಬೇಕು’ ಎಂದರು.

ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪ್ರಾಚಾರ್ಯ ನರಸಿಂಹ ಭಟ್ಟ ತಾರಿಮಕ್ಕಿ, ಶಂಕರ ಭಟ್ಟ ಬಾಲಿಗದ್ದೆ, ಶಂಕರ ಭಟ್ಟ ಉಂಚಳ್ಳಿ, ಯೋಗ ಶಿಕ್ಷಕ ವಿನಾಯಕ ಭಟ್ಟ ಕಿಚ್ಚಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT