ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಗುತ್ತಿರುವ ಜನೌಷಧ ಕೇಂದ್ರ

ಗುತ್ತಿಗೆ ಏಜೆನ್ಸಿ ಮತ್ತು ವೈದ್ಯರ ನಡುವಿನ ಗೊಂದಲ, ರೋಗಿಗಳಿಗೆ ತಪ್ಪದ ಅಲೆದಾಟ
Last Updated 20 ಜನವರಿ 2019, 19:45 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕಳೆದ ನಾಲ್ಕು ತಿಂಗಳುಗಳ ಹಿಂದೆ ಆರಂಭವಾಗಿರುವ ಜನೌಷಧ ಕೇಂದ್ರವು ದಿನದಿಂದ ದಿನಕ್ಕೆ ಸೊರಗುತ್ತಿದೆ. ಗುತ್ತಿಗೆ ಏಜೆನ್ಸಿ ಮತ್ತು ಆಸ್ಪತ್ರೆ ವೈದ್ಯರ ನಡುವಿನ ಗೊಂದಲದಿಂದಾಗಿ ಬಹುನಿರೀಕ್ಷಿತ ಈ ಕೇಂದ್ರದಿಂದ ಬಡವರಿಗೆ ಪ್ರಯೋಜನವಾಗುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.

‘ಭಾರತೀಯ ಜನೌಷಧ ಪ್ರಾಧಿಕಾರವು (ಬಿಪಿಪಿಐ) ಮಾನ್ಯ ಮಾಡಿರುವ ಏಜೆನ್ಸಿಗಳಿಂದ ಜನೌಷಧ ಕೇಂದ್ರಕ್ಕೆ ಔಷಧಗಳನ್ನು ಪೂರೈಕೆಯಾಗುತ್ತವೆ. ಬಿಪಿಪಿಐ ದೃಢೀಕರಿಸಿರುವ 600ಕ್ಕೂ ಹೆಚ್ಚು ಔಷಧಗಳನ್ನು ಜನೌಷಧ ಕೇಂದ್ರದಲ್ಲಿ ಸಂಗ್ರಹಿಸಬಹುದು. ಇದನ್ನು ಆಧರಿಸಿ, ಪಂಡಿತ ಆಸ್ಪತ್ರೆಗೆ ಯಾವ ಔಷಧ ಬೇಕು ಮತ್ತು ಪ್ರತಿ ವಿಭಾಗಕ್ಕೆ ಅಗತ್ಯವಿರುವ ಔಷಧಗಳ ಪಟ್ಟಿ ನೀಡುವಂತೆ ಪತ್ರ ಬರೆಯಲಾಗಿದೆ. ಆದರೆ, ಆಸ್ಪತ್ರೆಯಿಂದ ನಮಗೆ ಈ ಪಟ್ಟಿ ಲಭ್ಯವಾಗಿಲ್ಲ. ಜನೌಷಧ ಕೇಂದ್ರಕ್ಕೆ ಔಷಧ ಬರೆದುಕೊಡಲು ನಮಗೆ ಅಧಿಕಾರವಿಲ್ಲ ಎನ್ನುತ್ತಾರೆ. ವೈದ್ಯರು ನಿರ್ದಿಷ್ಟ ಔಷಧಗಳ ಬಗ್ಗೆ ತಿಳಿಸಿದರೆ, ಅದನ್ನು ಕೇಂದ್ರದ ಸಂಗ್ರಹದಲ್ಲಿಡಲು ನಾವು ಸಿದ್ಧರಿದ್ದೇವೆ’ ಎನ್ನುತ್ತಾರೆ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಇಲ್ಲಿನ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ನಾಯ್ಕ.

‘ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಖಾಸಗಿ ಔಷಧ ಅಂಗಡಿಗಳಿಗೆ ಹೋಗುವುದು ನಿಂತಿಲ್ಲ. ಅಲ್ಲಿ ಹೋಗುವ ಬದಲಾಗಿ, ರೋಗಿಗೆ ಅಗತ್ಯವಿರುವ ಔಷಧದ ಅಂಶವಿರುವ ಜನೌಷಧವನ್ನು ವೈದ್ಯರು ಬರೆದರೆ, ಬಡವರಿಗೆ ಅನುಕೂಲವಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.

‘ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಔಷಧ ಕೊಡುವುದು ನಮ್ಮ ಕರ್ತವ್ಯ. ಈ ಔಷಧ ಖರೀದಿಸಲು ಅಗತ್ಯ ಅನುದಾನ ಲಭ್ಯವಿದೆ. ಅಗತ್ಯವಿರುವ ಔಷಧಗಳನ್ನು ಈ ಅನುದಾನದಿಂದಲೇ ಖರೀದಿಸುತ್ತೇವೆ. ಪ್ರೊಟೀನ್ ಪೌಡರ್, ಟಾನಿಕ್‌ನಂತಹ ಪೋಷಕಾಂಶ ಹೊರತುಪಡಿಸಿ, ಎಲ್ಲ ಜೀವರಕ್ಷಕ ಔಷಧಗಳು ಆಸ್ಪತ್ರೆಯಲ್ಲಿ ಲಭ್ಯ ಇವೆ. ಇದಕ್ಕೆ ಸಹ ಇಂಡೆಂಟ್ ಹಾಕಲಾಗಿದೆ. ಹೊಸ ಔಷಧಗಳ ಅಗತ್ಯವಿದ್ದರೆ ಅದನ್ನು ಖರೀದಿಸಲು ಸಹ ಅವಕಾಶವಿದೆ. ಹೀಗಾಗಿ, ಬೇರೆ ಕಡೆ ಔಷಧ ಬರೆದುಕೊಡುವ ಅಗತ್ಯ ಬರುವುದಿಲ್ಲ’ ಎನ್ನುತ್ತಾರೆ ಪಂಡಿತ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಜಾನನ ಭಟ್ಟ.

‘ಜನೌಷಧ ಕೇಂದ್ರದಲ್ಲಿ ಕೆಲವು ಔಷಧಗಳನ್ನು ಕೇಳಿದರೆ ಪೂರೈಕೆಯಿಲ್ಲ, ಬ್ರ್ಯಾಂಡೆಂಡ್ ಜನರಿಕ್ ಔಷಧವನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಹೇಳುವುದೇ ಹೆಚ್ಚು’ ಎಂದು ರೋಗಿಯೊಬ್ಬರು ಪ್ರತಿಕ್ರಿಯಿಸಿದರು.

‘ವೈದ್ಯರು ಹೊರಗಡೆ ಔಷಧಗಳನ್ನು ಬರೆದುಕೊಡುವಾಗ ನಿರ್ದಿಷ್ಟ ಬ್ರ್ಯಾಂಡ್ ಉಲ್ಲೇಖಿಸದೆ, ಅದರಲ್ಲಿರುವ ಅಂಶಗಳನ್ನು ಮಾತ್ರ ಬರೆದುಕೊಟ್ಟರೆ ಮಾತ್ರ ಜನೌಷಧ ಕೇಂದ್ರದ ಉಪಯೋಗವಾಗುತ್ತದೆ’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಹೇಳಿದರು.

*
ಜನೌಷಧ ಕೇಂದ್ರವು ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿದೆ. ಆದರೆ, ಈ ಕೇಂದ್ರ ಮತ್ತು ಆಸ್ಪತ್ರೆಗೆ ನೇರವಾದ ಸಂಬಂಧವಿಲ್ಲ.
-ಗಜಾನನ ಭಟ್ಟ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT