ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳಿಗೆ ಸುವಾಸನೆ ತಂದ ಮಲ್ಲಿಗೆ ಕೃಷಿ: ₹ 65 ಸಾವಿರ ಲಾಭ ಪಡೆದ ಮೇಘನಾ

Last Updated 15 ಜುಲೈ 2019, 19:30 IST
ಅಕ್ಷರ ಗಾತ್ರ

ಭಟ್ಕಳ: ಅವರಿವರು ಬೆಳೆಯುತ್ತಿದ್ದ ಮಲ್ಲಿಗೆ ಹೂವನ್ನು ಪಡೆದು ಅದನ್ನು ಕೆಲವೇ ರೂಪಾಯಿಗಳ ಲಾಭಕ್ಕೆ ಮಾರಿದಾಗ ಬರುತ್ತಿದ್ದ ಅತ್ಯಲ್ಪ ಲಾಭ ಅವರಿಗೆ ತೃಪ್ತಿ ಕೊಡಲಿಲ್ಲ. ಸ್ವತಃಮಲ್ಲಿಗೆ ತೋಟ ಸಿದ್ಧಪಡಿಸಿ ಕೇವಲ ಎರಡು ವರ್ಷಗಳಲ್ಲಿ₹ 65 ಸಾವಿರ ಲಾಭ ಗಳಿಸಿದರು. ಈಗ ಸ್ವಾವಲಂಬಿ ಜೀವನ ನಡೆಸುತ್ತಿರುವವರು ಭಟ್ಕಳ ತಾಲ್ಲೂಕಿನ ಮೂಡುಶಿರಾಲಿಯ ಮೇಘನಾ ನಾಯ್ಕ.

ಸುವಾಸನೆಭರಿತ ಭಟ್ಕಳ ಮಲ್ಲಿಗೆ ಬೆಳೆದು ಸ್ವಾವಲಂಬಿ ಜೀವನ ನಡೆಸುತ್ತಿತುವ ಮಹಿಳೆಯರಲ್ಲಿ ಮೇಘನಾ ಅವರೂ ಒಬ್ಬರು.15 ವರ್ಷಗಳಿಂದ ಬೇರೆಯವರಿಂದ ಮಲ್ಲಿಗೆ ಮೊಗ್ಗನ್ನು ಪಡೆದು ಅದನ್ನು ಕಟ್ಟಿ ಮಾರುತ್ತಿದ್ದರು. ತಾನೇ ಯಾಕೆ ಮಲ್ಲಿಗೆ ಬೆಳೆಯಬಾರದು ಎಂದು ಮನದಲ್ಲಿ ಮೂಡಿದ ಆಸೆಯನ್ನು ಕಾರ್ಯರೂಪಕ್ಕೆ ತಂದೇಬಿಟ್ಟರು.

ಮನೆಯ ಹತ್ತಿರವೇ ಇದ್ದ ಸುಮಾರು 10 ಗುಂಟೆ ಜಾಗದಲ್ಲಿ ಮಲ್ಲಿಗೆ ಕೃಷಿಯನ್ನು ಆರಂಭಿಸಿದರು. ಎರಡು ವರ್ಷಗಳ ಹಿಂದೆ ಅವರಿವರಿಂದ ಸಾಲ ಪಡೆದು ಸುಮಾರು ₹ 30 ಸಾವಿರ ಖರ್ಚು ಮಾಡಿದರು. ಮಲ್ಲಿಗೆಯ ಗಿಡಗಳನ್ನು ನೆಟ್ಟು, ನಿತ್ಯವೂ ಆರೈಕೆ ಮಾಡಿದರು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಹಾಕಿ ಬೆಳೆಸಿದಾಗ ಆರು ತಿಂಗಳಲ್ಲೇಗಿಡದಲ್ಲಿ ಮೊಗ್ಗುಗಳು ಅರಳಿದವು. ಅಂದಿನಿಂದ ಇಂದಿನವರೆಗೂ ದಿನವೂಬುಟ್ಟಿತುಂಬ ಮೊಗ್ಗುಗಳನ್ನು ಕೀಳುತ್ತಲೇ ಇದ್ದಾರೆ.

ಅತಿಯಾದ ಮಳೆ ಬೀಳುವ ಜುಲೈ ತಿಂಗಳ ಆಷಾಢ ಮಾಸ, ಚಳಿ ಬೀಳುವ ಡಿಸೆಂಬರ್ ತಿಂಗಳು ಹಾಗೂ ಬಿರು ಬೇಸಿಗೆಯ ಮೇ ತಿಂಗಳಿನಲ್ಲಿ ನೀರಿನ ಕೊರತೆಯಿಂದ ಮಲ್ಲಿಗೆ ಬೆಳೆಯಲ್ಲಿ ಕಡಿಮೆ ಆಗುತ್ತದೆ. ಆದರೆ, ಶ್ರಾವಣ ಬಂತೆಂದರೆ ಮತ್ತೆ ಗಿಡದಲ್ಲಿ ಮಲ್ಲಿಗೆ ಮೊಗ್ಗುಗಳುಕಾಣಿಸಿಕೊಳ್ಳುತ್ತವೆಎಂದು ಮೇಘನಾವಿವರಿಸುತ್ತಾರೆ.

‘ಸುಮಾರು 50ರಷ್ಟು ಮಲ್ಲಿಗೆ ಬುಡ ಮಾಡಿದ್ದು, ದಿನಕ್ಕೆ ಸುಮಾರು 120 ಮೊಳ ಮಲ್ಲಿಗೆ ಮೊಗ್ಗು ಆಗುತ್ತದೆ. ಒಂದು ಮೊಳ ಮಾಲೆ ಕಟ್ಟಿದವರಿಗೆ ₹ 2.5 ಕೊಡಲಾಗುತ್ತದೆ. ಗಿಡಗಳಿಗೆ ಸಿಂಪಡಿಸುವ ಔಷಧಕ್ಕೆ ತಿಂಗಳಿಗೆ ಸುಮಾರು ₹ 500 ಖರ್ಚಾಗುತ್ತದೆ’ ಎಂದು ತಿಳಿಸಿದರು.

‘ಬೇಡಿಕೆ ಹೆಚ್ಚಿರುವಸಂದರ್ಭಗಳಲ್ಲಿ ಒಂದು ಮೊಳ ಮಲ್ಲಿಗೆಗೆ₹ 80ವರೆಗೂ ದರವಿರುತ್ತದೆ. ಅತೀ ಕಡಿಮೆ ಎಂದರೆ ಈ ವರ್ಷ ₹ 5ಕ್ಕೂ ಮಾರಾಟ ಮಾಡಲಾಗಿದೆ. ಕೇವಲ ಎರಡು ವರ್ಷದಲ್ಲಿ ಹಾಕಿದ ಬಂಡವಾಳ ಸಿಕ್ಕಿದೆ. ₹65 ಸಾವಿರ ರೂಪಾಯಿ ಲಾಭವೂ ಆಗಿದೆ’ ಎಂದು ಈ ಕೃಷಿಯಲ್ಲಿರುವ ಕಷ್ಟ ಸುಖದ ಬಗ್ಗೆ ತಿಳಿಸಿದರು.

ಬೇಂಗ್ರೆ ಗ್ರಾಮ ಪಂಚಾಯ್ತಿ ಸದಸ್ಯರೂ ಆಗಿರುವ ಮೇಘನಾ, ಅವರಿಗೆ ಕೃಷಿಯಲ್ಲಿಪತಿ ತಿಮ್ಮಪ್ಪ ನಾಯ್ಕ ಸಹಕರಿಸುತ್ತಾರೆ.ತಮ್ಮ ಅತ್ತೆಯೂಮಲ್ಲಿಗೆ ಮೊಗ್ಗು ಕೊಯ್ಯಲು ಬರುತ್ತಾರೆ ಎಂದು ಸಂತಸದಿಂದ ಹೇಳುತ್ತಾರೆ.ಇಬ್ಬರು ಸಣ್ಣ ಮಕ್ಕಳನ್ನು ಒಳಗೊಂಡಿರುವ ಕುಟುಂಬದ ನಿರ್ವಹಣೆಗೆಮಲ್ಲಿಗೆ ಕೃಷಿ ಸ್ವಾವಲಂಬನೆ ನೀಡಿದೆ ಎಂದು ಹೆಮ್ಮೆಯಿಂದ ಹೇಳಿದರು.

ಬೆಳಗ್ಗೆ ಆರು ಗಂಟೆಗೆ ಮಲ್ಲಿಗೆ ಮೊಗ್ಗುಗಳನ್ನು ಕೊಯ್ದು, ಅದನ್ನು ಕಟ್ಟುವವರಿಗೆ ಕೊಟ್ಟು, ಮಧ್ಯಾಹ್ನ 12ರ ಮೊದಲು ಮಾಲೆ ಸಿದ್ಧಪಡಿಸಲಾಗುತ್ತದೆ. ಮನೆಗೆ ಬಂದು ಖರೀದಿಸುವವರು, ಅದನ್ನು ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ ಎಂದು ಅವರು ತಿಳಿಸಿದರು.

‘ಬೆಂಬಲ ಬೆಲೆ ಸಿಗಬೇಕು’: ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ಭಟ್ಕಳ ಮಲ್ಲಿಗೆಗೆ ಬೆಂಬಲ ಬೆಲೆ ದೊರಕಬೇಕು, ದಲ್ಲಾಳಿಗಳ ಹಾವಳಿತಪ್ಪಬೇಕು ಎಂದು ಮೇಘನಾ ನಾಯ್ಕ ತಮಗೆ ಅವಕಾಶ ಸಿಕ್ಕಿದಾಗಲೆಲ್ಲ ವಾದ ಮಂಡಿಸುತ್ತಿದ್ದರು.

ಇದರ ಪರಿಣಾಮವಾಗಿ ‘ಮಲ್ಲಿಗೆ ಬೆಳೆಗಾರರ ಸಂಘ’ ಅಸ್ತಿತ್ವಕ್ಕೆ ಬಂತು. ಆದರೆ, ಇದಕ್ಕೆ ಸರಿಯಾಗಿ ಸ್ಪಂದನೆ ದೊರಕಲಿಲ್ಲ ಎಂಬುದು ಮೇಘನಾ ಅವರ ಬೇಸರವಾಗಿದೆ. ಬೆಳೆಗಾರರು ಒಗ್ಗಟ್ಟಾದರೆ ಏನಾದರೂ ಮಾಡಬಹುದು. ಆದರೆ, ಯಾರಲ್ಲೂ ಆಸಕ್ತಿಯೇ ಇಲ್ಲ. ಹೀಗಾಗಿ ಬೇರೆ ಬೇರೆ ಊರುಗಳಿಗೆ ಮಲ್ಲಿಗೆಯನ್ನು ಕಳುಹಿಸಲು ಮಧ್ಯವರ್ತಿಗಳನ್ನೇ ಅವಲಂಬಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT