ಶನಿವಾರ, ಡಿಸೆಂಬರ್ 5, 2020
21 °C
ಕಾರವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಸಹಕಾರ

ಕಾರವಾರ ನಗರಸಭೆ ಅಧ್ಯಕ್ಷ ಚುನಾವಣೆ: ಜೆ.ಡಿ.ಎಸ್, ಪಕ್ಷೇತರರ ಬಾಹ್ಯ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನ.1ರಂದು ನಡೆಯಲಿರುವ ಚುನಾವಣೆಯಲ್ಲಿ, ಜೆ.ಡಿ.ಎಸ್‌.ನ ನಾಲ್ವರು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಬಿ.ಜೆ.ಪಿ.ಗೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೆ.ಡಿ.ಎಸ್ ಮುಖಂಡ ಆನಂದ ಅಸ್ನೋಟಿಕರ್, ‘ಸದ್ಯಕ್ಕೆ ಒಂದು ವರ್ಷದ ಅವಧಿಗೆ ಬೆಂಬಲ ನೀಡಲಾಗುವುದು. ಈ ಅವಧಿಯಲ್ಲಿ ಬಿ.ಜೆ.ಪಿ.ಯವರು ನಗರಕ್ಕೆ ಅಗತ್ಯವಾಗಿರುವ ನಾಲ್ಕು ಯೋಜನೆಗಳಲ್ಲಿ ಯಾವುದಾದರೂ ಎರಡನ್ನು ಮಂಜೂರು ಮಾಡಿಸಬೇಕು. ಆಗ ಅವರಿಗೆ ಅಧಿಕಾರವಧಿಯ ಉದ್ದಕ್ಕೂ ಬೆಂಬಲ ಮುಂದುವರಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ ಸರ್ಕಾರಗಳೇ ಅಧಿಕಾರದಲ್ಲಿವೆ. ಕಾರವಾರದ ಶಾಸಕರು, ಜಿಲ್ಲೆಯ ಸಂಸದರು ಕೂಡ ಅದೇ ಪಕ್ಷದವರು. ಉಸ್ತುವಾರಿ ಸಚಿವರೂ ಇದೇ ಜಿಲ್ಲೆಯವರು. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಡಾ.ನಿತಿನ್ ಪಿಕಳೆ ಬಿ.ಜೆ.ಪಿ.ಯ ಅಭ್ಯರ್ಥಿ ಎಂದು ಕೇಳಿದ್ದೇನೆ. ಅವರ ನೇತೃತ್ವದಲ್ಲಿ ನಗರದ ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆಯಿದೆ. ಹಾಗಾಗಿ ಜನಪರ ಕಾಮಗಾರಿಗಳ ಹೊರತಾಗಿ ಬಿ.ಜೆ.ಪಿ.ಗೆ ಬೇರಾವುದೇ ಷರತ್ತು ವಿಧಿಸದೇ ಬೆಂಬಲ ನೀಡುತ್ತಿದ್ದೇವೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆ.ಡಿ.ಎಸ್ ಸದಸ್ಯರಾದ ರುಕ‌್ಮಿಣಿ ಸುಧಾಕರ ಗೌಡ, ಪ್ರೀತಿ ಮಧುಕರ ಜೋಶಿ, ಸ್ನೇಹಾ ಸದಾನಂದ ಮಾಂಜ್ರೇಕರ, ರಾಜೇಶ ಮಾಜಾಳಿಕರ, ಪಕ್ಷೇತರ ಸದಸ್ಯರಾದ ಸಂಧ್ಯಾ ಸಂಜಯ ಬಾಡ್ಕರ ಮತ್ತು ಮನೋಜ ಬಾಂದೇಕರ ಹಾಜರಿದ್ದರು.

31 ಸದಸ್ಯ ಬಲದ ಕಾರವಾರ ನಗರಸಭೆಯಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೆಸ್ ತಲಾ 11 ಸದಸ್ಯರನ್ನು ಹೊಂದಿವೆ. ಜೆ.ಡಿ.ಎಸ್.ನಿಂದ ನಾಲ್ವರು ಆಯ್ಕೆಯಾಗಿದ್ದಾರೆ. ಐವರು ಪಕ್ಷೇತರ ಸದಸ್ಯರಿದ್ದಾರೆ.

‘ಜಿಲ್ಲೆಯ ವಿಭಜನೆಗೆ ಬೆಂಬಲ’:

‘ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಕನ್ನಡವನ್ನು ವಿಭಜಿಸಿ ಎರಡು ಜಿಲ್ಲೆಗಳನ್ನಾಗಿ ಮಾಡುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.

‘ದಕ್ಷಿಣ ಕನ್ನಡವನ್ನು ವಿಭಜಿಸಿ ಉಡುಪಿ ಪ್ರತ್ಯೇಕವಾಯಿತು. ಈಗ ಎರಡೂ ಜಿಲ್ಲೆಗಳಲ್ಲಿ ಸರಿಸಮನಾದ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಅದೇ ರೀತಿ, ಉತ್ತರ ಕನ್ನಡವನ್ನೂ ಎರಡು ಜಿಲ್ಲೆ ಮಾಡುವುದು ಸೂಕ್ತ. ಒಟ್ಟಿನಲ್ಲಿ ಜನರಿಗೆ ಮೂಲಸೌಕರ್ಯ ಸಿಗುವಂತಾಗಬೇಕು’ ಎಂದು ಪ್ರತಿಪಾದಿಸಿದರು.

ನಾಲ್ಕು ಬೇಡಿಕೆಗಳು:

* ಕೋಣೆನಾಲಾವನ್ನು ಸಂಪೂರ್ಣ ನೈರ್ಮಲ್ಯಗೊಳಿಸುವುದು

* ಬಡವರಿಗೆ ನಗರದಲ್ಲಿ ಕನಿಷ್ಠ 500 ಮನೆಗಳ ಮಂಜೂರು

‌* ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು

* ಮಾಲಾದೇವಿ ಮೈದಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಕೈಗೊಳ್ಳುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು