ಆಂತರಿಕ ‘ಹೊಂದಾಣಿಕೆ’ಗೆ ಯೋಜನೆ

ಗುರುವಾರ , ಏಪ್ರಿಲ್ 25, 2019
22 °C
ವಿಧಾನಸಭೆ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್

ಆಂತರಿಕ ‘ಹೊಂದಾಣಿಕೆ’ಗೆ ಯೋಜನೆ

Published:
Updated:
Prajavani

ಶಿರಸಿ: ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವಾರು ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಂಚೂಣಿಯಲ್ಲಿದ್ದರೆ, ಜೆಡಿಎಸ್‌ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಮೂರು ಕ್ಷೇತ್ರಗಳಲ್ಲೂ ಮೂರನೇ ಸ್ಥಾನದಲ್ಲಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಪೈಪೋಟಿ ನೀಡಲು ಯತ್ನಿಸಿದ್ದ ಜೆಡಿಎಸ್, 2018ರ ಚುನಾವಣೆಯಲ್ಲಿ ಇನ್ನಷ್ಟು ಕುಸಿದಿದೆ. ಕಾಂಗ್ರೆಸ್‌ ಕಾರ್ಯಕರ್ತರು ಈ ಮತಗಳ ಲೆಕ್ಕವನ್ನಿಟ್ಟುಕೊಂಡು, ಪ್ರಸ್ತುತ ಎದುರಾಗಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎದುರು ಆಂತರಿಕ ‘ಹೊಂದಾಣಿಕೆ’ ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ.

2013ರ ಚುನಾವಣೆಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ 55,005 ಮತಗಳಿಸಿದ್ದರೆ, ಪ್ರಸ್ತುತ ಬಿಜೆಪಿಯಲ್ಲಿರುವ, ಆಗ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಸುನೀಲ್ ಹೆಗಡೆ 49,066 ಮತ ಹಾಗೂ ಬಿಜೆಪಿಯ ರಾಜು ಧೂಳಿ 7844 ಮತ ಗಳಿಸಿದ್ದರು. ಶಿರಸಿ–ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 42,854 ಮತ, ಕಾಂಗ್ರೆಸ್‌ನ ದೀಪಕ ಹೊನ್ನಾವರ 39,795 ಮತ ಹಾಗೂ ಜೆಡಿಎಸ್‌ನ ಶಶಿಭೂಷಣ ಹೆಗಡೆ 39,761 ಮತಗಳನ್ನು ಪಡೆದಿದ್ದರು. ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ 58,025 ಮತ, ಬಿಜೆಪಿಯ ವಿ.ಎಸ್.ಪಾಟೀಲ 33,533 ಮತ ಹಾಗೂ ಜೆಡಿಎಸ್‌ನ ಡಿ.ಅನಿಲಕುಮಾರ್ 22,361 ಮತ ಪಡೆಯಲು ಯಶಸ್ವಿಯಾಗಿದ್ದರು.

ಹಳಿಯಾಳದಲ್ಲಿ ಸುನೀಲ್ ಹೆಗಡೆ ಅವರು ವೈಯಕ್ತಿಕ ವರ್ಚಸ್ಸಿನ ಮೇಲೆ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಅವರು ಬಿಜೆಪಿಗೆ ಸೇರಿರುವುದರಿಂದ ಅಲ್ಲಿ ಜೆಡಿಎಸ್ ದುರ್ಬಲಗೊಂಡಿದೆ. ಶಿರಸಿ–ಸಿದ್ದಾಪುರ ಕ್ಷೇತ್ರದಲ್ಲಿ ಆಗ ಬದಲಾವಣೆಯ ಗಾಳಿ ಗಾಢವಾಗಿ ಇದ್ದಿದ್ದರಿಂದ ಹಾಗೂ ಶಶಿಭೂಷಣ ಹೆಗಡೆ ಅವರ ವೈಯಕ್ತಿಕ ಪ್ರಭಾವದಿಂದ ಅಧಿಕ ಮತ ಲಭ್ಯವಾಗಿತ್ತು. ಪಕ್ಷದ ಆಧಾರದಲ್ಲಿ ಈ ಮತ ದೊರೆತಿಲ್ಲ ಎನ್ನುವುದನ್ನು ಜೆಡಿಎಸ್ ಕಾರ್ಯಕರ್ತರೇ ಆಗ ಒಪ್ಪಿಕೊಂಡಿದ್ದರು.

ಮತದಾರರಲ್ಲಿ ಜೆಡಿಎಸ್‌ ಬಗೆಗಿನ ಒಲವು ಕಡಿಮೆಯಾಗುತ್ತಲೇ ಇರುವುದಕ್ಕೆ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಸಾಕ್ಷಿಯಾಯಿತು. ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ 61,577 ಮತ, ಬಿಜೆಪಿಯ ಸುನೀಲ್ ಹೆಗಡೆ 56,437 ಮತ ಹಾಗೂ ಜೆಡಿಎಸ್‌ನ ಕೆ.ಆರ್.ರಮೇಶ 7,209 ಮತ ಪಡೆದಿದ್ದರು. ಚಲಾವಣೆಯಾಗಿದ್ದ ಒಟ್ಟು ಮತಗಳಲ್ಲಿ ಜೆಡಿಎಸ್ ಗಳಿಸಿದ್ದು ಶೇ 5.42.

ಶಿರಸಿ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 70,595 ಮತ, ಕಾಂಗ್ರೆಸ್‌ನ ಭೀಮಣ್ಣ ನಾಯ್ಕ 53,134 ಮತ, ಜೆಡಿಎಸ್‌ನ ಶಶಿಭೂಷಣ ಹೆಗಡೆ 26,625 ಮತ ಗಳಿಸಿದ್ದರು. ಇಲ್ಲೂ ಸಹ ಚಲಾವಣೆಯಾಗಿದ್ದ ಒಟ್ಟು ಮತಗಳಲ್ಲಿ ಜೆಡಿಎಸ್‌ಗೆ ಬಂದಿದ್ದು ಶೇ 17.16 ಮತಗಳು ಮಾತ್ರ.

ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ 66,290 ಮತ, ಬಿಜೆಪಿಯ ವಿ.ಎಸ್.ಪಾಟೀಲ 64,807 ಮತ ಹಾಗೂ ಜೆಡಿಎಸ್‌ನ ರವೀಂದ್ರ ನಾಯ್ಕ 6263 ಮತ ಪಡೆದಿದ್ದರು. ಇಲ್ಲಿ ಜೆಡಿಎಸ್ ಪಕ್ಷಕ್ಕೆ ದಕ್ಕಿದ್ದು ಶೇ 4.46 ರಷ್ಟು ಮತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !