ಬುಧವಾರ, ಮೇ 18, 2022
25 °C

ಒಳಿತು ಮಾಡುವುದೇ ಪರಮೇಶ್ವರನ ಪೂಜೆ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಹುಟ್ಟಿದ ದಿನ ಮಾತ್ರವಲ್ಲದೇ ಜೀವನದುದ್ದಕ್ಕೂ ಶುಭವನ್ನು ಮಾಡುವುದು ಮುಖ್ಯ. ಸುತ್ತಮುತ್ತ ಇರುವ ಎಲ್ಲರಿಗೂ ಒಳಿತು ಮಾಡುವುದೇ ಪರಮೇಶ್ವರನ ನಿಜವಾದ ಪೂಜೆ. ತಮ್ಮ ಹಾಗೂ ಕುಟುಂಬದೊಂದಿಗೆ, ಊರಿಗೆ, ಗ್ರಾಮಕ್ಕೆ ಒಳಿತು ಮಾಡುವ ಪಣ ತೊಡಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ಮಂಗಳವಾರ, ತಮ್ಮ 29ನೇ ಸನ್ಯಾಸ ಸ್ವೀಕಾರ ದಿನದಂದು ನಡೆದ ಕಾರ್ಯಕ್ರಮದಲ್ಲಿ, ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಅವರು ಅಭಯ ನೀಡಿದರು. ಅವರ ಜೀವನಕ್ಕೆ ನೆರವಾಗುವ ‘ಜೀವನದಾನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹೊನ್ನಾವರ ತಾಲ್ಲೂಕಿನ ಯಶೋಧಾ ಹೆಗಡೆ ಅವರಿಗೆ ‘ಜೀವನದಾನ’ ಪ್ರದಾನ ಮಾಡಲಾಯಿತು.

‘ಹಲವರು ಜನ್ಮದಿನವನ್ನು ಬಗೆ ಬಗೆಯಾಗಿ ಆಚರಿಸುತ್ತಾರೆ. ಆದರೆ, ಜನ್ಮದಿನದಂದು ಮಾತ್ರವಲ್ಲದೇ ಜೀವನವಿಡೀ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ. ನಾವು ಸಿಹಿ ತಿಂದು ಜನ್ಮದಿನ ಆಚರಿಸುವುದಕ್ಕಿಂತ ಬೇರೆಯವರ ಬಾಳಿಗೆ ಸವಿ ತರುವುದು ಮುಖ್ಯ. ಶ್ರೀಶಂಕರರ ಜೀವನವೇ ಒಂದು ಉಪದೇಶ. ಶಂ ಎಂದರೆ ಶುಭ; ಕರ ಎಂದರೆ ಮಾಡುವವನು. ಅಂದರೆ ಶುಭ ಮಾಡು ಎನ್ನುವುದೇ ಅವರ ಜೀವನ ಸಂದೇಶ’ ಎಂದು ಬಣ್ಣಿಸಿದರು. 

‘ಕಷ್ಟದಲ್ಲಿರುವ ಕುಟುಂಬದ ಕಣ್ಣೀರು ಒರೆಸುವ ಮೂಲಕ ಸನ್ಯಾಸ ಸ್ವೀಕಾರ ದಿನವನ್ನು ಆಚರಿಸಲಾಗುತ್ತಿದೆ. ಅವರ ಜೀವನ ಬೆಳಕಾಗಲಿ ಎಂದು ಆಶಿಸುವುದೇ ಇಂದಿನ ಆಚರಣೆಯಾಗಿದೆ’ ಎಂದರು.

ಮಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಾತಿ, ಮತ ಬೇಧವಿಲ್ಲದೇ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ಪ್ರತಿ ವರ್ಷ ಒಬ್ಬರಿಗೆ ಜೀವನದಾನ ನೀಡಲಾಗುತ್ತದೆ. ಅವರ ಇಡೀ ಜೀವನ ನಿರ್ವಹಣೆಯ ಹೊಣೆಯನ್ನು ಟ್ರಸ್ಟ್ ವಹಿಸಿಕೊಳ್ಳುತ್ತದೆ’ ಎಂದರು.

ಟ್ರಸ್ಟಿಗಳಾದ ಎಸ್.ಎಸ್.ಹೆಗಡೆ, ಆರ್.ಜಿ.ಹೆಗಡೆ, ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಇದ್ದರು. ಎಸ್.ಜಿ.ಭಟ್ ಕಬ್ಬಿನಹಿತ್ಲು ಕಾರ್ಯಕ್ರಮ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು