ಬುಧವಾರ, ಅಕ್ಟೋಬರ್ 21, 2020
25 °C

ದ್ವೀಪದ ಒಡಲಲಿ ‘ಕಾಳಿ’ ನರ್ತನ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಆಗಸ್ಟ್ 5, ರಾತ್ರಿ 10 ಗಂಟೆ ಆಗಿರಬಹುದು, ಅಂಗಳದಲ್ಲಿದ್ದ ನಾಯಿ ಒಂದೇ ಸಮನೆ ಕೂಗಾಡುತ್ತಿತ್ತು. ಎಲ್ಲೋ ದನ–ಕರು ಬಂದಿರಬಹುದು ಎಂದುಕೊಂಡೆ. ಮೂಕ ಪ್ರಾಣಿಯ ಎಚ್ಚರ ನನಗೆ ಹೊಳೆಯಲಿಲ್ಲ. ಮತ್ತೆ ಮತ್ತೆ ಬಂದು ತನ್ನದೇ ಭಾಷೆಯಲ್ಲಿ ಸಂದೇಶ ಕೊಡುತ್ತಿತ್ತು. ನಿರ್ಲಿಪ್ತನಾಗಿ ಹೊರಬಂದ ನಾನು ಅರೆಕ್ಷಣ ಬೆಚ್ಚಿದೆ. ಏನೋ ಹೊಳೆದಂತಾಯಿತು. ಕಣ್ಣು ಮಿಟುಕಿಸಿ ಮತ್ತೆ ನೋಡಿದರೆ ನೀರು ಅಂಗಳ ವನ್ನು ಆವರಿಸಿತ್ತು. ಜೀವ ಬಾಯಿಗೆ ಬಂದಂತಾಗಿತ್ತು. ಕಂಡಿದ್ದಷ್ಟನ್ನು ಕೈಗೆತ್ತಿಕೊಂಡು ಓಡಿ ಜೀವ ಉಳಿಸಿಕೊಂಡೆ...

ಕಾರವಾರ ತಾಲ್ಲೂಕಿನ ಖಾರ್ಗೆಜೂಗ ನಡುಗಡ್ಡೆಯ ಹಿರಿಯ ಜೀವ ರಮೇಶ ನಾಯ್ಕ ಹೀಗೆ ವಿವರಿಸಿದಾಗ ಕಾಳಿ ನದಿಯ ಭಯಾನಕ ಪ್ರವಾಹದ ಚಿತ್ರಣ ಕಣ್ಣೆದುರು ಹಾದುಹೋಯಿತು.

‘ಸುತ್ತಲಿನ ಜನರೆಲ್ಲ ಸೇರಿದ್ದರು ಜಾತಿ, ಮತ, ಪಂಥ ಯಾವುದೂ ಅಲ್ಲಿ ಉಳಿದಿರಲಿಲ್ಲ. ಆಗ ಅಲ್ಲಿ ಇದ್ದಿದ್ದು ಮನುಷ್ಯ ಮತ್ತು ಮಾನವೀಯತೆ ಇಷ್ಟೇ. ಎಲ್ಲರೂ ಪರಿಹಾರ ಕೇಂದ್ರ ಸೇರಿದೆವು. ಬೆಳಿಗ್ಗೆ ನೋಡಿದರೆ, ನದಿ ಆ ದ್ವೀಪವನ್ನೇ ಆಪೋಷನ ತೆಗೆದುಕೊಂಡಿತ್ತು. ಜೀವನದಲ್ಲಿ ಒಮ್ಮೆಯೂ ಇಂಥ ಸನ್ನಿವೇಶ ಕಂಡಿರಲಿಲ್ಲ. 1961ರಲ್ಲಿ ಒಮ್ಮೆ ಹೀಗಾಗಿತ್ತಂತೆ’ ಎಂದು ಯಾರೋ ಹೇಳಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.

ಉಕ್ಕಿದ ಕಾಳಿ ನದಿ ಖಾರ್ಗೆಜೂಗ, ಹಣಕೋಣ ಜೂಗ ಸೇರಿದಂತೆ ಮೂರ್ನಾಲ್ಕು ನಡುಗಡ್ಡೆಯ ಜನರನ್ನು ಗಡ ಗಡ ನಡುಗಿಸಿದೆ. ನೀರಿನ ಸುತ್ತ ಬದುಕುವ, ನೀರಿನ ಮೇಲೆ ದೋಣಿಯಲ್ಲಿ ತೇಲುತ್ತಾ ಜೀವಿಸುವ, ನೀರಿನೊಂದಿಗೆ ಸಹಬಾಳ್ವೆ ಮಾಡುವ ನಡುಗಡ್ಡೆಗಳ ಜನರು ಈ ಬಾರಿ ಕಾಳಿ ನದಿಯ ಆರ್ಭಟಕ್ಕೆ ಅಕ್ಷರಶಃ ಬೆಚ್ಚಿದ್ದಾರೆ.

ಈಗ ಮಳೆ ನಿಂತಿದೆ. ಮನೆಯ ಬಾಗಿಲಿಗೆ ಸಾವಿನ ಭಯ ತಂದೊಡ್ಡಿದ್ದ ನದಿ ಶಾಂತವಾಗಿದೆ. ನೆರೆ ಇಳಿದಿದೆ. ಕೊಚ್ಚಿ ಹೋಗಿದ್ದ ಬದುಕನ್ನು ಜೋಡಿಸಿಕೊಳ್ಳುತ್ತಿದ್ದಾರೆ ದ್ವೀಪಗಳ ಜನ. ತಳದಲ್ಲಿರುವ ಕರಿಕಲ್ಲುಗಳ ಜೊತೆ ನಯವಾಗಿ ಹರಿಯುವ ಕಾಳಿಯ ಒಡಲು ಕೆಂಪಾಗಿದೆ. ತಿಳಿಯಾಗಿದ್ದ ನೀರಿನಲ್ಲಿ ಕೇವಲ ಮಣ್ಣು ಕರಗಿದ್ದಲ್ಲ, ಸಾವಿರಾರು ಕುಟುಂಬಗಳ ಕನಸು, ಜೀವನವೂ ತೊಳೆದು ಹೋಗಿದೆ. ಇವರಿಗೆಲ್ಲ ನೀರು ಹೊಸತಲ್ಲ, ಆದರೆ, ಈ ಬಾರಿಯ ನೀರಿನ ಅಬ್ಬರಕ್ಕೆ ಇವರೆಲ್ಲ ತತ್ತರಿಸಿಹೋಗಿದ್ದಾರೆ. ಆದರೆ ನೆರೆ ಬಂದ ದಿನಗಳು ದುಃಸ್ವಪ್ನವಾಗಿ ಕಾಡುತ್ತಿವೆ.

ಕಾಳಿ ನದಿಯಷ್ಟೇ ಅಲ್ಲ, ಸುತ್ತಮುತ್ತಲಿರುವ ಕದ್ರಾ, ಕೊಡಸಳ್ಳಿ ಅಣೆಕಟ್ಟುಗಳು ಮತ್ತಷ್ಟು ನೀರನ್ನು ತಂದು ಒತ್ತಿವೆ. ಯಾರೋ ಕಟ್ಟಿದ ತಡೆಗೋಡೆಯ ಮುನಿಸನ್ನು ನದಿ ನಮ್ಮ ಮೇಲೆ ತೀರಿಸಿಕೊಂಡಿರಬೇಕು ಎಂದು ಸಂಕಟದಿಂದ ನುಡಿಯುತ್ತಾರೆ ದ್ವೀಪದ ಜನ.

‘ಕಾಳಿ ನದಿ ಉಕ್ಕಿದ್ದರಿಂದ 28 ಹಳ್ಳಿಗಳು ದ್ವೀಪದ ಅನುಭವ ಕಂಡಿವೆ. ಮನೆಯಲ್ಲಿ ಮೂರು ಕ್ವಿಂಟಲ್ ಅಕ್ಕಿ ಇತ್ತು. ಮತ್ತೊಂದಷ್ಟು ದಿನ ಬಳಕೆಯ ಸಾಮಗ್ರಿ, ಬಟ್ಟೆಬರೆ ಇದ್ದವು. ಮನೆಗೆ ನುಗ್ಗಿದ ನೀರು ಇವೆಲ್ಲವನ್ನು ಕೊಂಡೊಯ್ದಿದೆ. ಮತ್ತೆ ಶೂನ್ಯದಿಂದ ಜೀವನ ಆರಂಭಿಸಬೇಕು’ ಎನ್ನುತ್ತ ಗೋಟೆಗಾಳಿ ನಿವಾಸಿ ಶ್ಯಾಮಕಾಂತ ಗದ್ಗದಿತರಾಗುತ್ತಾರೆ.

‘ಕಾಳಿ ನದಿಯ ತಪ್ಪಲಲ್ಲಿದ್ದ ಹೆಮ್ಮೆಯಿತ್ತು. ಆದರೆ, ಮೇಲಿನ ಭಾಗದಲ್ಲಿ ಜಲಾಶಯ ಇರುವ ಕಾರಣ ಪ್ರವಾಹದ ಪರಿಕಲ್ಪನೆಯೇ ನಮಗಿರಲಿಲ್ಲ. ನಮ್ಮೆದುರೇ, ನಮ್ಮ ಕನಸಿನ ಮನೆ ನೀರಿನಲ್ಲಿ ಮುಳುಗುತ್ತಿದ್ದುದನ್ನು ನೋಡಲು ಸಾಧ್ಯವಾಗದೇ ಕಣ್ಣೀರು ಹಾಕಿದೆ. ಆ ಸಮಯದಲ್ಲಿ ಜೀವ ಉಳಿಸಿಕೊಳ್ಳುವುದೇ ದೊಡ್ಡದಾಗಿತ್ತು.  ಕೈಗೆ ಸಿಕ್ಕಷ್ಟು ಕಾಗದಪತ್ರ ಮಾತ್ರ ನಮಗೆ ಉಳಿದಿರುವ ಕೊನೆಯ ಆಸ್ತಿ’ ಎಂದು ಹಣಕೋಣಜೂಗದ ಅಮರ್ ಕೊಠಾರಕರ ಸಂಕಟಪಡುತ್ತಾರೆ.

ಸೇತುವೆ ಸಂಪರ್ಕವಿಲ್ಲದ ಉಂಬಳಿಜೂಗ ನಡುಗಡ್ಡೆಯವರದ್ದು ಮತ್ತೊಂದು ಸಂಕಟ. 

‘ಕದ್ರಾ ಅಣೆಕಟ್ಟೆಯಿಂದ ನೀರು ಬಿಟ್ಟಿದ್ದಾರಂತೆ ಎಂಬ ಮೆಸೇಜ್ ಬಂತು. ಅರ್ಧ ಗಂಟೆಗೊಮ್ಮೆ ದ್ವೀಪದ ಅಂಚಿಗೆ ಹೋಗಿ ನೀರಿನ ಮಟ್ಟ ಏರುತ್ತಿರುವುದನ್ನು ನೋಡಿ ಬರುತ್ತಿದ್ದೆವು. ನಮ್ಮ ಚಡಪಡಿಕೆಯನ್ನು ಕಂಡ ದ್ವೀಪದ ಹಿರಿಯರು, ‘ಇಂಥ ಪ್ರವಾಹವನ್ನು ಬಹಳ ಹಿಂದೆಯೂ ಕಂಡಿದ್ದೇವೆ, ಜಾಸ್ತಿ ನೀರು ಬರಲಿಕ್ಕಿಲ್ಲ. ಹೆದರಬೇಡಿ’ ಎನ್ನುತ್ತಲೇ ಇದ್ದರು. ನೋಡನೋಡುತ್ತಲೇ ರಾತ್ರಿ ವೇಳೆಗೆ ನೀರು ದ್ವೀಪವನ್ನು ಆವರಿಸಿತು. ರಾತ್ರಿಯಿಂದ ಬೆಳಿಗ್ಗೆ 9ರವರೆಗೆ ತುದಿಗಾಲಲ್ಲಿ ಕುಳಿತು, ಜೀವ ಕೈಯಲ್ಲಿ ಹಿಡಿದುಕೊಂಡು ಸಮಯ ದೂಡಿದೆವು. ರಕ್ಷಣಾ ತಂಡದವರು ಬಂದು ದೋಣಿಯಲ್ಲಿ ನಮ್ಮನ್ನು ಕರೆದುಕೊಂಡು ಹೋದರು. ಆ ನೆರೆಯಿಂದ ಬಚಾವಾಗಿದ್ದೊಂದು ಪವಾಡ’ ಎನ್ನುತ್ತಾರೆ ಕೇವಲ್ ಥಾಮ್ಸೆ. 

ಜೀವ ಉಳಿಸಿಕೊಂಡಿರುವ ಈ ದ್ವೀಪದ ಜನ ಜೀವನವನ್ನು ಕಳೆದುಕೊಂಡಿದ್ದಾರೆ. ಪ್ರವಾಹದ ನೀರಿಗೆ ಭತ್ತದ ಗದ್ದೆಗಳೆಲ್ಲ ಏಕವಾಗಿಬಿಟ್ಟಿವೆ. ಹಲವರು ಈಗ ತಮ್ಮ ಜಮೀನಿನ ಗಡಿಯನ್ನು ಹುಡುಕುತ್ತಿದ್ದಾರೆ. ಎಲ್ಲರೂ ಅನ್ಯೋನ್ಯವಾಗಿರುವ ಕಾರಣ ಪರಸ್ಪರ ಸಹಕರಿಸುತ್ತಿದ್ದಾರೆ.

ವಿಚಿತ್ರವೆಂದರೆ; ಕೆಲ ದಿನಗಳ ಹಿಂದಿನವರೆಗೆ ಇವರೆಲ್ಲ ‘ದೇಹಿ’ ಎಂದು ಬಂದವರಿಗೆ ಕೈ ನೀಡಿ ಕೊಡುವವರಾಗಿದ್ದರು. ಅವರ ಬಳಿ ಗರಿಗರಿಯಾದ ಸಾಕಷ್ಟು ಜೊತೆ ಬಟ್ಟೆಗಳಿದ್ದವು, ಹೊಟ್ಟೆತುಂಬ ಉಣ್ಣಲೂ ಕೊರತೆ ಇರಲಿಲ್ಲ. ಪ್ರವಾಸೋದ್ಯಮಕ್ಕೆ ಹೆಸರಾದ ಖಾರ್ಗೆ ಜೂಗ ದ್ವೀಪಕ್ಕೆ ಭೇಟಿ ನೀಡಿದವರೆಲ್ಲ ಈ ಜಾಗ ಎಷ್ಟು ಸುಂದರವಾಗಿದೆ ಎಂದು ಹೇಳಿ ಫೋಟೊ ತೆಗೆದುಕೊಳ್ಳುತ್ತಿದ್ದರು.

ಆದರೆ... ಆ.5ರ ರಾತ್ರಿಯ ಸನ್ನಿವೇಶ ಅವರ ಬದುಕನ್ನೇ ಬದಲಿಸಿತು. ಉಕ್ಕೇರಿದ ಕಾಳಿ ನದಿ ಅವರನ್ನು ಇನ್ನಿಲ್ಲದಂತೆ ಹಿಂಡಿ ಹಿಪ್ಪೆ ಮಾಡಿದೆ. ನಿತ್ಯವೂ ಅದೇ ದುಃಸ್ವಪ್ನದಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಮನೆಯ ಗೋಡೆಗಳಲ್ಲಿ ನದಿ ಅಬ್ಬರದ ಗುರುತುಗಳಿವೆ. ಆಕೆಯ ರೌದ್ರಾವತಾರಕ್ಕೆ ನಲುಗಿದ್ದರೂ ಬತ್ತದ ಜೀವನೋತ್ಸಾಹವಿದೆ. ಹೊಸ ಜೀವನಕ್ಕೆ ಅಣಿಯಾಗಿದ್ದಾರೆ ದ್ವೀಪದ ಜನರು.

ಚಿತ್ರಗಳು: ದಿಲೀಪ್ ರೇವಣಕರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು