ಸೋಮವಾರ, ಜೂನ್ 14, 2021
21 °C
ನಗರಸಭೆಗೆ ಪ್ರತಿ ತಿಂಗಳು ಸುಮಾರು ₹ 13.50 ಲಕ್ಷ ಆದಾಯ

ಕಾರವಾರ: ಭಾರಿ ಮೊತ್ತಕ್ಕೆ ಮಳಿಗೆ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಮೀನು ಮಾರುಕಟ್ಟೆಯ ನೂತನ ಕಟ್ಟಡದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಬುಧವಾರ ಹರಾಜು ಹಾಕಲಾಯಿತು. ನಗರಸಭೆಯ ಅಧಿಕಾರಿಗಳ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿದ್ದು, ಉದ್ಯಮಿಗಳು, ವರ್ತಕರು ಭಾರಿ ದರದಲ್ಲಿ ಗುತ್ತಿಗೆಗೆ ಪಡೆದುಕೊಂಡರು. ಇದರಿಂದ ನಗರಸಭೆಗೆ ಪ್ರತಿ ತಿಂಗಳು ಸುಮಾರು ₹ 13.50 ಲಕ್ಷ ಆದಾಯ ಸಿಗಲಿದೆ.

ಕಟ್ಟಡ ನೆಲ ಅಂತಸ್ತಿನಲ್ಲಿ ಒಂಬತ್ತು ಮಳಿಗೆಗಳು ಹಾಗೂ ಮೊದಲ ಅಂತಸ್ತಿನಲ್ಲಿ ಎಂಟು ಹೀಗೆ ಒಟ್ಟು 17 ಮಳಿಗೆಗಳನ್ನು ನೂತನ ಕಟ್ಟಡದ ಮೀನು ಮಾರುಕಟ್ಟೆಯ ಸ್ಥಳದಲ್ಲಿ ಸಾರ್ವಜನಿಕವಾಗಿ ಹರಾಜು ಕೂಗಲಾಯಿತು. ಹರಾಜಿನಲ್ಲಿ ಭಾಗವಹಿಸಿದ್ದವರು ನೆಲ ಅಂತಸ್ತಿನ ಮಳಿಗೆಗಳಿಗೆ ಪ್ರತಿ ತಿಂಗಳಿಗೆ ಗರಿಷ್ಠ ₹ 65 ಸಾವಿರ, ಮೊದಲ ಮಹಡಿಯಲ್ಲಿ ಕನಿಷ್ಠ ₹ 28 ಸಾವಿರ, ಗರಿಷ್ಠ ₹ 31 ಸಾವಿರ ಬಾಡಿಗೆಗೆ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಎರಡನೇ ಅಂತಸ್ತಿನ ಒಂಬತ್ತು ಸಾವಿರ ಚದರ ಅಡಿ ಜಾಗವನ್ನು ಒಬ್ಬರೇ ಪಡೆದುಕೊಂಡಿದ್ದಾರೆ.

ಹರಾಜಿನ ಬಗ್ಗೆ ಮಾಹಿತಿ ನೀಡಿದ ನಗರಸಭೆ ಪ್ರಭಾರ ಆಯುಕ್ತೆ ಎಂ.ಪ್ರಿಯಾಂಗಾ, ‘ಕಟ್ಟಡದ ಎರಡನೇ ಅಂತಸ್ತಿನ ಪ್ರತಿ ಚದರ ಅಡಿಗೆ ₹ 72ರಂತೆ ಮೂಲ ದರ ನಿಗದಿ ಮಾಡಲಾಗಿತ್ತು. ಹರಾಜಿನಲ್ಲಿ ಪಡೆದುಕೊಂಡವರಿಗೆ ಅದೇ ದರದಲ್ಲಿ ನೀಡಲಾಗಿದೆ. ನಗರಸಭೆಗೆ ಇದರ ಭದ್ರತಾ ಠೇವಣಿ ₹ 23 ಲಕ್ಷ ಹಾಗೂ ಬಾಡಿಗೆ ಮೊತ್ತ ಪ್ರತಿ ತಿಂಗಳಿಗೆ ಸುಮಾರು ₹ 5 ಲಕ್ಷ ಸಿಗಲಿದೆ. ಆ ಅಂತಸ್ತನ್ನು ಅವರಿಗೆ ಬೇಕಾದಂತೆ ವಿಂಗಡಿಸಿ, ನೆಲಕ್ಕೆ ಟೈಲ್ಸ್ ಹಾಕಿ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಉಳಿದಂತೆ, 17 ಮಳಿಗೆಗಳ ಪೈಕಿ ಒಂದು ಅಂಗವಿಕಲರಿಗೆ, ಎರಡು ಪರಿಶಿಷ್ಟ ಜಾತಿಯವರಿಗೆ, ಒಂದು ಪರಿಶಿಷ್ಟ ಪಂಗಡದವರಿಗೆ ಮೊದಲೇ ಮೀಸಲಾಗಿತ್ತು. ಕೆಲವು ಅಂಗಡಿಗಳು 230 ಚದರ ಅಡಿ, ಮತ್ತೆ ಕೆಲವು 198 ಚದರ ಅಡಿ ಇದ್ದವು. ಮೂಲ ದರವು ₹ 17,250 ಇದ್ದರೂ ಮಳಿಗೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗಿತ್ತು’ ಎಂದು ತಿಳಿಸಿದರು.

ನಗರಸಭೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಪಿ.ನಾಯಕ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ನಗರಸಭೆಯು ಮೀನು ಮಾರುಕಟ್ಟೆಯ ಕಟ್ಟಡವನ್ನು ನೂತನವಾಗಿ ₹ 4.90 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಕಟ್ಟಡವನ್ನು ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.