ಶುಕ್ರವಾರ, ಜೂನ್ 25, 2021
29 °C
ಮಹಿಳೆಯರ ಮೇಲೆ ದರ್ಪ ತೋರಿದ್ದಾಗಿ ಆರೋಪ

ಕಾರವಾರ: ಮೀನು ಚೆಲ್ಲಿದ ನಗರಸಭೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್ ನಿಯಂತ್ರಣಕ್ಕೆ ಜಾರಿಯಾಗಿರುವ ಕರ್ಫ್ಯೂ ನೆಪದಲ್ಲಿ ನಗರಸಭೆ ಸಿಬ್ಬಂದಿ ಶುಕ್ರವಾರ ದರ್ಪ ಎಸಗಿದ್ದಾರೆ. ಬುಟ್ಟಿಯಲ್ಲಿದ್ದ ಮೀನನ್ನು ನೆಲಕ್ಕೆ ಚೆಲ್ಲಿ ಕೋಲು ಹಿಡಿದು ಬೆದರಿಸಿದ್ದಾರೆ ಎಂದು ಮೀನುಗಾರ ಮಹಿಳೆಯರು ದೂರಿದ್ದಾರೆ.

ನಗರದ ಆಯುಷ್ ಆಸ್ಪತ್ರೆ ಬಳಿ ಪಾದಚಾರಿ ರಸ್ತೆಯ ಮೇಲೆ ಕುಳಿತು ಕೆಲವು ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರು.  ಜಿಲ್ಲೆಯಲ್ಲಿ ಪರಿಷ್ಕೃತ ಆದೇಶದಂತೆ ಜಿಲ್ಲೆಯಲ್ಲಿ ಬೆಳಿಗ್ಗೆ 10ರಿಂದ ಕರ್ಫ್ಯೂ ಜಾರಿಯಾಗಿದೆ. ಆ ಸಮಯದಲ್ಲಿ ಮೀನು ಮಾರಾಟಗಾರರು ತಮ್ಮ ಮನೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ನಗರಸಭೆ ಸಿಬ್ಬಂದಿ  ಬುಟ್ಟಿಯಲ್ಲಿ ಉಳಿದಿದ್ದ ಮೀನನ್ನು ನೆಲಕ್ಕೆ ಬಿಸಾಡಿದರು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

‘ಮೀನು ಆಹಾರ ಪದಾರ್ಥ. ನಾವು ನಾಲ್ಕೈದು ಸಾವಿರ ರೂಪಾಯಿ ಬಂಡವಾಳ ಹಾಕಿ ಮಾರಾಟ ಮಾಡುತ್ತೇವೆ. ಅದರಿಂದ ಸಿಗುವ ₹ 500 – ₹ 600ಯಲ್ಲಿ ನಮ್ಮ ಇಡೀ ಕುಟುಂಬದ ಖರ್ಚು ಸಾಗುತ್ತದೆ. ಒಂದು ದಿನ ದುಡಿಯದಿದ್ದರೂ ಊಟಕ್ಕೆ ತೊಂದರೆಯಾಗುತ್ತದೆ. ಪೊಲೀಸರು ಕೂಡ ನಮಗೆ ಹೊಡೆದಿಲ್ಲ. ಮೀನುಗಾರರ ಕಷ್ಟವೇನು ಎಂಬುದು ಅವರಿಗೂ ಗೊತ್ತಿದೆ. ನಗರಸಭೆ ಸಿಬ್ಬಂದಿಗೆ ಈ ರೀತಿ ವರ್ತಿಸಲು ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸುತ್ತ ಕಣ್ಣೀರು ಹಾಕಿದರು.

‘ಸಮುದ್ರದಿಂದ ಮೀನು ಹಿಡಿದು ತಂದು ಅದನ್ನು ಮಾರಾಟ ಮಾಡಲು ಕಷ್ಟವೆಷ್ಟಿದೆ ಎಂದು ಗೊತ್ತಿದ್ದವರು ಈ ರೀತಿ ನೆಲಕ್ಕೆ ಎಸೆದು ಹಾಳು ಮಾಡುತ್ತಿರಲಿಲ್ಲ. ಮನೆ ಮನೆಗೆ ಹೋಗಿ ಮಾರಾಟ ಮಾಡಿ ಎಂದು ಹೇಳುತ್ತಾರೆ. ಆದರೆ, ಮನೆಯವರು ಸರಿಯಾಗಿ ಸ್ಪಂದಿಸುವುದಿಲ್ಲ. ಕೊರೊನಾದ ನೆಪದಲ್ಲಿ ಕೆಲವರು ಹತ್ತಿರ ಬರುವುದಿರಲಿ, ಗೇಟು ಕೂಡ ತೆರೆಯುವುದಿಲ್ಲ’ ಎಂದು ಅಳಲು ತೋಡಿಕೊಂಡರು.

‘ಮಹಿಳೆಯರು ರಸ್ತೆ ಬದಿ ಅಂತರ ಕಾಯ್ದುಕೊಂಡು ಕುಳಿತು ಮೀನು ಮಾರಾಟ ಮಾಡುತ್ತಿದ್ದಾರೆ. ಅಗತ್ಯವಿದ್ದವರು ಬಂದು ಖರೀದಿಸುತ್ತಾರೆ. ಒಂದು ವೇಳೆ ನಿಯಮದ ಉಲ್ಲಂಘನೆಯಾಗಿದ್ದರೆ ಎಚ್ಚರಿಕೆ ಕೊಡಲಿ. ಅದು ಬಿಟ್ಟು ಈ ರೀತಿ ದೌರ್ಜನ್ಯ ಮಾಡುವುದು ಖಂಡಿತ ಸರಿಯಲ್ಲ’ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಆಕ್ಷೇಪಿಸಿದರು.

ಗುಂಪು ಚದುರಿಸಿದ ‍ಪೊಲೀಸರು

ನಗರದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ 10ರ ನಂತರವೂ ಹಲವಾರು ಜನ ಸೇರಿದ್ದರು. ಅಲ್ಲಿಗೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು. ಒಂದಿಬ್ಬರಿಗೆ ಲಘುವಾಗಿ ಲಾಠಿಯ ರುಚಿಯನ್ನೂ ತೋರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು