ಮಂಗಳವಾರ, ನವೆಂಬರ್ 19, 2019
26 °C

ಎಂಎಲ್‌ಸಿ ಸಾಧನೆ ಶೂನ್ಯ : ಡಾ.ಎಂ.ಕುಬೇರಪ್ಪ

Published:
Updated:
Prajavani

ಕಾರವಾರ: ‘ಪಶ್ಚಿಮ ಪದವೀಧರ ಸೇರಿ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆ ಬರುವ ಜೂನ್‌ನಲ್ಲಿ ನಡೆಯಲಿದ್ದು, ಎಲ್ಲೆಡೆ ಕಾಂಗ್ರೆಸ್ ಗೆಲ್ಲಿಸಲು ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಕಾಂಗ್ರೆಸ್ ಶಿಕ್ಷಕರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಕುಬೇರಪ್ಪ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ವಿವಿಧ ಕಾರಣಗಳಿಂದ ಈ ಕ್ಷೇತ್ರಗಳು ಕೈತಪ್ಪಿದ್ದವು. ಶಿಕ್ಷಕರ ಘಟಕದ ಜವಾಬ್ದಾರಿ ವಹಿಸಿಕೊಂಡ ನಂತರ ಎಲ್ಲ ಕ್ಷೇತ್ರಗಳಿಗೆ ಓಡಾಟ ನಡೆಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಇನ್ನೊಂದು ವಾರದಲ್ಲಿ ಪಕ್ಷದ ಹೈಕಮಾಂಡ್‌ನಿಂದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ನಡೆಯಲಿದೆ’ ಎಂದು ಹೇಳಿದರು.

‘28 ತಾಲ್ಲೂಕುಗಳನ್ನು ಒಳಗೊಂಡಿರುವ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಈ ಕ್ಷೇತ್ರದ ಮತದಾರರ ಪಟ್ಟಿಯನ್ನು ರದ್ದು ಮಾಡಲಾಗಿದೆ. ಹೊಸ ಮತದಾರರ ಪಟ್ಟಿಗೆ ಅರ್ಜಿ ಆಹ್ವಾನಿಸಲಾಗಿದೆ. ನ.5ರವರೆಗೆ ನೋಂದಣಿಗೆ ಅವಕಾಶವಿದೆ. ಎಲ್ಲ ಪದವೀಧರರನ್ನು ಫಾರ್ಮ್ ನಂಬರ್ 18ರ ಮೂಲಕ ನೋಂದಾಯಿಸುವ ಕಾರ್ಯವನ್ನು ಮಾಡಲಾಗುತ್ತಿದೆ’ ಎಂದರು.

ಬಿಜೆಪಿ ಮೋಸ ಮಾಡಿತು: ‘ಹಿಂದೆ 35 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಬಿಜೆಪಿಗೆ ಅಭ್ಯರ್ಥಿ ಇಲ್ಲದ ಸಮಯದಲ್ಲಿ ಆ ಪಕ್ಷದ ಮುಖಂಡರು ನನ್ನ ಮನೆ ಬಾಗಿಲಿಗೆ ಬಂದು ಕೇಳಿಕೊಂಡರು, ಒತ್ತಾಯ ಮಾಡಿ ‘ಬಿ’ ಫಾರ್ಮ್ ಕೊಟ್ಟರು. ಆದರೆ, ಎರಡನೇ ಬಾರಿ ಗೆಲ್ಲುವ ಅವಕಾಶ ಇದ್ದ ಸಂದರ್ಭದಲ್ಲಿ ಮೋಸ ಮಾಡಿದರು’ ಎಂದು ಆರೋಪಿಸಿದರು. ‘ಜಿಲ್ಲೆಯ ಶಿಕ್ಷಕರು, ಪದವೀಧರರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈಗಿನ ಎಂಎಲ್‌ಸಿ ಆದವರು ಕಳೆದ ಐದು ವರ್ಷದಲ್ಲಿ ಎಷ್ಟು ಕಾರ್ಯ ಮಾಡಿದ್ದಾರೆ ಎಂದು ಹೇಳಲಿ, ಬಹಿರಂಗ ಸಂವಾದ ಏರ್ಪಡಿಸಲಿಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರಾದ ಎಸ್.ಕೆ.ಭಾಗ್ವತ್, ಪ್ರಭಾಕರ ಮಾಳ್ಸೇಕರ್, ಅಶ್ವಥ್, ನಿತಿನ್ ಇದ್ದರು.

ಪ್ರತಿಕ್ರಿಯಿಸಿ (+)