ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಲ್ಲಿ ಪ್ರಯೋಗಾಲಯ ಶುರು

ಐ.ಸಿ.ಎಂ.ಆರ್‌.ನಿಂದ ನಾಳೆ ಪ್ರಮಾಣೀಕರಣ: ವೈರಸ್ ಸೋಂಕು ಪತ್ತೆಗೆ ಸಹಕಾರಿ
Last Updated 23 ಮೇ 2020, 12:51 IST
ಅಕ್ಷರ ಗಾತ್ರ

ಕಾರವಾರ: ‘ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಸ್ಥಾಪಿಸಲಾಗಿರುವ ಅತಿ ಸೂಕ್ಷ್ಮಾಣು ಪ್ರಯೋಗಾಲಯ (ಮೊಬಿಕ್ಯುಲರ್ ಲ್ಯಾಬ್) ಮೇ 26ರಿಂದ ಕಾರ್ಯಾರಂಭ ಮಾಡಲಿದೆ. ಅಲ್ಲಿರುವ ಯಂತ್ರಗಳ ಕಾರ್ಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯವರು ಸೋಮವಾರ ಪ್ರಮಾಣೀಕರಿಸುತ್ತಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

‘ಕ್ರಿಮ್ಸ್’ನಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲು ಶನಿವಾರ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಯೋಗಾಲಯದಲ್ಲಿರಿಯಲ್ ಟೈಮ್ ಪಾಲಿಮರ್ ಚೈನ್ ರಿಯಾಕ್ಷನ್ (ಆರ್.ಟಿ.ಪಿ.ಸಿ.ಆರ್) ಯಂತ್ರವನ್ನು ಅಳವಡಿಸಲಾಗಿದೆ. ಅದು ಶೇ 100 ಖಚಿತ ಹಾಗೂ ವೇಗವಾಗಿ ಫಲಿತಾಂಶ ನೀಡುತ್ತದೆ. ಈಗ ಬೇರೆ ಬೇರೆ ಯಂತ್ರಗಳ ಮೂಲ ದಿನಕ್ಕೆ 30 ಪರೀಕ್ಷೆಗಳನ್ನು ಮಾಡಲಾಗುತ್ತಿದೆ’ ಎಂದರು.

‘ರೋಗ ಲಕ್ಷಣ ಇಲ್ಲದವರನ್ನು ಇನ್ನುಮುಂದೆ ಸಾಮಾನ್ಯ ಆರೈಕೆ ಕೇಂದ್ರದಲ್ಲೇ ಇಡಲಾಗುತ್ತದೆ. ಚಿಕಿತ್ಸೆ ಅಗತ್ಯವಿದ್ದವರನ್ನು ಮಾತ್ರ ಕೋವಿಡ್ ವಾರ್ಡ್‌ಗೆ ಕರೆದುಕೊಂಡು ಬರಲಾಗುತ್ತದೆ. ಅಲ್ಲದೇ, ವಾರ್ಡ್‌ನಲ್ಲಿ ಇನ್ನೂ 100 ಹಾಸಿಗೆಗಳನ್ನು ಅಳವಡಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ (ಜಿ.ಪಂ ಸಿ.ಇ.ಒ) ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕ್ರಿಮ್ಸ್‌ನಲ್ಲಿ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸೌಕರ್ಯಗಳನ್ನು ಜಿಲ್ಲಾಡಳಿತದಿಂದ ನೀಡಲಾಯಿತು. ಅದರ ಜೊತೆಗೇ ಸರ್ಕಾರಿ ವೈದ್ಯರು ಈ ಸಂದರ್ಭದಲ್ಲಿ ಕೈಗೊಂಡಿರುವ ನಿಸ್ವಾರ್ಥ ಸೇವೆ ಅಭಿನಂದನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಗರಪ್ರದೇಶಗಳಲ್ಲಿ ಪ್ರಯೋಗಾಲಯ ತೆರೆಯಲು ಖಾಸಗಿಯವರಿಗೂ ಸರ್ಕಾರ ಅನುಮತಿ ನೀಡಲು ಆರಂಭಿಸಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಸೋಂಕಿತರನ್ನು ಇನ್ನಷ್ಟುಬೇಗ ಪತ್ತೆ ಹಚ್ಚಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಜಿ.ಪಂ ಸಿ.ಇ.ಒ ಮೊಹಮ್ಮದ್ ರೋಶನ್ ಮಾತನಾಡಿ, ‘ಕೇವಲ 20 ದಿನಗಳಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಹೇಳಿದ್ದರು. ಅದು ಬಹಳ ಕಷ್ಟದ ಕೆಲಸವಾಗಿದ್ದರೂ ನಿರ್ಮಿತಿ ಕೇಂದ್ರದ ಸಿಬ್ಬಂದಿ ಹಾಗೂ ಉಳಿದೆಲ್ಲರ ಸಹಕಾರದಿಂದ ಸಾಧ್ಯವಾಯಿತು. ಇದೊಂದು ಶಾಶ್ವತವಾದ ಹಾಗೂ ಬೇರೆ ಬೇರೆ ಚಿಕಿತ್ಸೆಗಳಿಗೆ ಬಳಕೆ ಮಾಡಬಹುದಾದ ವಾರ್ಡ್ ಆಗಿದೆ’ ಎಂದರು.

ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ಮಾತನಾಡಿ, ‘ಈಗ ಕೋವಿಡ್ ಜೊತೆಗೆ ಬದುಕಬೇಕಾದ ಸನ್ನಿವೇಶ ಬಂದಿದೆ. ಏಕಾಏಕಿ ಗಂಭೀರ ಪರಿಸ್ಥಿತಿ ಎದುರಿಸುವ ಸ್ಥಿತಿ ಬಂದಿದ್ದರೆ ಕಷ್ಟವಾಗುತ್ತಿತ್ತು. ಜಿಲ್ಲಾಡಳಿತ ಮುಂದಾಲೋಚನೆ ಮಾಡಿದ್ದರಿಂದ ಅಂತಹ ಸಮಸ್ಯೆಯಾಗಲಿಲ್ಲ’ ಎಂದು ಹೇಳಿದರು.

ಸನ್ಮಾನ:ಕೋವಿಡ್ ವಾರ್ಡ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇದೇವೇಳೆ ಜಿಲ್ಲಾಧಿಕಾರಿ ಸನ್ಮಾನಿಸಿದರು.

ಅಣಶಿ ಯುವಕನಿಗೆ ಸೋಂಕಿಲ್ಲ:‘ಅಣಶಿಯ ಯುವಕನನ್ನು ಗೋವಾದಲ್ಲಿ ಕೋವಿಡ್‌ ವಾರ್ಡ್‌ಗೆ ದಾಖಲಿಸಲಾಗಿದ್ದು, ಅವರ ಗಂಟಲುದ್ರವ ಮಾದರಿಯ ಪರೀಕ್ಷೆ ನೆಗೆಟಿವ್ ಬಂದಿದೆ. ಅವರನ್ನು ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಮಾಡುತ್ತಾರೆ’ ಎಂದು ಡಾ.ಕೆ.ಹರೀಶಕುಮಾರ್ ತಿಳಿಸಿದರು.

‘ಅಲ್ಲಿನ ಖಾಸಗಿ ಪ್ರಯೋಗಾಲಯದಲ್ಲಿ ಅವರಿಗೆ ಕೋವಿಡ್ ಇದೆ ಎಂದು ವರದಿ ಬಂದಿತ್ತು. ಸರ್ಕಾರಿ ಪ್ರಯೋಗಾಲಯದಲ್ಲಿ ಸೋಂಕು ಪತ್ತೆಯಾಗಿಲ್ಲ’ ಎಂದು ಹೇಳಿದರು.

*
ಡಿ.ಎಚ್.ಒ ಡಾ.ಅಶೋಕಕುಮಾರ್ ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗುತ್ತಾರೆ.ಈಗಿನಕಷ್ಟದ ಸನ್ನಿವೇಶದಲ್ಲಿ ಅವರ ಸೇವೆ ಮುಂದುವರಿಸುವಂತೆ ಸರ್ಕಾರವನ್ನು ಕೋರಲಾಗಿದೆ.
- ಡಾ.ಕೆ.ಹರೀಶಕುಮಾರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT