ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮೀನಿಗಾಗಿ ಕಡಲತೀರಕ್ಕೆ ಮತ್ತೆ ಸಂಚಕಾರ

ಕಾರವಾರದ ‘ಲೇಡೀಸ್ ಬೀಚ್’ನಲ್ಲಿ ಮುಂದುವರಿದ ಅವೈಜ್ಞಾನಿಕ ಮೀನುಗಾರಿಕೆ
Last Updated 12 ಅಕ್ಟೋಬರ್ 2020, 13:37 IST
ಅಕ್ಷರ ಗಾತ್ರ

ಕಾರವಾರ: ಪದೇಪದೇ ಎಚ್ಚರಿಕೆ, ಅಧಿಕಾರಿಗಳು ಭೇಟಿ ನೀಡಿದರೂ ಸಮೀಪದ ‘ಲೇಡೀಸ್ ಬೀಚ್’ ಕಡಲತೀರದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಮುಂದುವರಿದಿದೆ. ಕಪ್ಪೆ ಬೊಂಡಾಸ್ ಮೀನುಗಳನ್ನು ಹಿಡಿಯಲು ಇಲ್ಲಿನ ಮರಳನ್ನು ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತುಂಬುವ ಪ್ರವೃತ್ತಿ ನಿಂತಿಲ್ಲ.

ಹೊರರಾಜ್ಯಗಳ ಮೀನುಗಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸ್ಥಳೀಯ ಮೀನುಗಾರರು ದೂರುತ್ತಾರೆ. ಬೆಳಗಿನ ಜಾವ ದೋಣಿಗಳಲ್ಲಿ ಬಂದು ಮರಳನ್ನು ಗೋಣಿಚೀಲಗಳಲ್ಲಿ ತುಂಬಿಕೊಳ್ಳುತ್ತಾರೆ. ನಿರ್ಜನವಾದ ಕಡಲತೀರದಿಂದ ಸೂರ್ಯೋದಯಕ್ಕೂ ಮೊದಲೇ ವಾಪಸಾಗುತ್ತಾರೆ ಎಂದು ಆರೋಪಿಸುತ್ತಾರೆ.

‘ನಾವು ಎಷ್ಟು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ಹೊರ ರಾಜ್ಯಗಳ ಮೀನುಗಾರರು ಕೇಳುವುದಿಲ್ಲ. ಕಡಲತೀರದ ಮರಳನ್ನು ನಿತ್ಯವೂ ಹತ್ತಾರು ಚೀಲಗಳಲ್ಲಿ ತುಂಬಿಕೊಳ್ಳುತ್ತಾರೆ. ಇದರಿಂದ ಸುಂದರ ಕಡಲತೀರದ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ದಂಡೆಯಿಂದ ಮರಳನ್ನು ನಿರಂತರವಾಗಿ ತೆಗೆದ ಕಾರಣ ಸಮುದ್ರದ ಅಲೆಗಳು ಈಗ ಹತ್ತಾರು ಮೀಟರ್‌ಗಳಷ್ಟು ಮುಂದೆ ಬರುತ್ತಿವೆ’ ಎಂದು ಸ್ಥಳೀಯ ಮುಖಂಡ ವಿನಾಯಕ ಹರಿಕಂತ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಿಷೇಧಿತ ಪದ್ಧತಿ

ಮರಳನ್ನು ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತುಂಬಿ, ಗಾಳಿಮರದ ಟೊಂಗೆಗಳಿಗೆ ಕಟ್ಟಲಾಗುತ್ತದೆ. ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಗಿದು ಸಮುದ್ರದಲ್ಲಿ 70 ಮೀಟರ್‌ಗೂ ಅಧಿಕ ಆಳವಿರುವ ಜಾಗದಲ್ಲಿ ತೇಲಿ ಬಿಡುತ್ತಾರೆ. ಆ ಚೀಲಗಳಲ್ಲಿ ಕಪ್ಪೆ ಬೊಂಡಾಸ್ ಮೀನುಗಳು ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆಗ ಅಲ್ಲಿಗೆ ಹೋಗಿ ಗಾಳ, ಬಲೆ ಹಾಕಿ ಮೀನುಗಳನ್ನು ಹಿಡಿಯುತ್ತಾರೆ.

ಹೀಗೆ ಮೀನು ಹಿಡಿಯುವ ಪದ್ಧತಿಯು ಕೇರಳದಲ್ಲಿ ಮೊದಲು ವ್ಯಾಪಕವಾಗಿ ಚಾಲ್ತಿಯಲ್ಲಿತ್ತು. ಇದರಿಂದ ಕಪ್ಪೆ ಬೊಂಡಾಸ್ ಮೀನುಗಳ ಸಂತತಿ ವಿನಾಶದತ್ತ ಸಾಗಿತ್ತು. ಅದೇರೀತಿ, ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಯಿತು. ಈ ಕಾರಣದಿಂದ ಅಲ್ಲಿ ಈ ರೀತಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

ಕಪ್ಪೆ ಬೊಂಡಾಸ್‌ಗಳು ಸೆಪ್ಟೆಂಬರ್‌ನಿಂದನವೆಂಬರ್‌ವರೆಗೆ ಹೆಚ್ಚು ಸಿಗುತ್ತವೆ. ಸ್ಥಳೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯಿರುತ್ತದೆ. ಅವೈಜ್ಞಾನಿಕ ಪದ್ಧತಿಯಲ್ಲಿ ಅವುಗಳನ್ನು ಒಂದೇ ಕಡೆ ಹಿಡಿದರೆ ಪರ್ಸೀನ್ ಹಾಗೂ ನಾಡದೋಣಿ ಮೀನುಗಾರರಿಗೆ ಭಾರಿ ನಷ್ಟವಾಗುತ್ತದೆ ಎಂಬುದೂ ಮೀನುಗಾರರ ಆಕ್ಷೇಪವಾಗಿದೆ.

‘ಹೆಚ್ಚಿನ ನಿಗಾಕ್ಕೆ ಸೂಚನೆ’

‘ಅವೈಜ್ಞಾನಿಕ ಮೀನುಗಾರಿಕೆಗೆ ಬೈತಖೋಲ್ ಸಮೀಪದ ಲೇಡೀಸ್ ಬೀಚ್‌ನಿಂದ ಮರಳು ತೆಗೆಯುವ ವಿಚಾರಕ್ಕೆ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ ಮರಳು ಅಗೆದಿರುವ ಹಾಗೂ ಪ್ಲಾಸ್ಟಿಕ್ ಗೋಣಿಚೀಲಗಳು ಕಂಡುಬರಲಿಲ್ಲ. ಬಹುಶಃ ಅವು ಅಲೆಗಳು ಅಪ್ಪಳಿಸಿದಾಗ ಮೊದಲಿನಂತಾಗಿರಬಹುದು’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ.

‘ಈ ಕಡಲತೀರದಲ್ಲಿ, ವಿಶೇಷವಾಗಿ ತಡರಾತ್ರಿ ಹಾಗೂ ನಸುಕಿನಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ಸೂಚಿಸಲಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಗಮನ ಇಡಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT