ಸೋಮವಾರ, ಮಾರ್ಚ್ 8, 2021
27 °C
ಪ್ರಾಕೃತಿಕ ವಿಕೋಪ ತಡೆಯಲು ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ ಡಾ.ಹರೀಶಕುಮಾರ್

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಣ್ಣು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗೆ ಗುಡ್ಡವನ್ನು ಕತ್ತರಿಸಿದ ಕೆಲವು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿತವಾಗುತ್ತಿದೆ. ಮಳೆ ಜೋರಾದರೆ ಹೆಚ್ಚಿನ ಪ್ರಮಾಣದಲ್ಲಿ ಕುಸಿದು ರಸ್ತೆಗೆ ಬೀಳುವ ಸಾಧ್ಯತೆಯಿದೆ.

ತಾಲ್ಲೂಕಿನ ಬಿಣಗಾ ಘಟ್ಟದಲ್ಲಿ ಹೆದ್ದಾರಿಯ ವಿಸ್ತರಣೆಗೆಂದು ದೊಡ್ಡ ಬೆಟ್ಟವನ್ನು ಅಗೆಯಲಾಗಿದೆ. ಚತುಷ್ಪಥ ಹೆದ್ದಾರಿ ನಿರ್ಮಾಣವಾದ ಬಳಿಕ ಅಲ್ಲಿ ವಾಹನಗಳ ಸಂಚಾರ ಆರಂಭವಾಗಿ ಮಣ್ಣು ಮತ್ತಷ್ಟು ಸಡಿಲವಾಗಿದೆ. ಮಳೆ ನೀರು ಮಣ್ಣಿಗೆ ಸೇರಿಕೊಂಡ ಬಳಿಕ ಮತ್ತೂ ದುರ್ಬಲವಾಗಿದೆ. ಇದರ ಪರಿಣಾಮ ಹೆದ್ದಾರಿಗೆ ಮಣ್ಣು ಬೀಳಲಾರಂಭಿಸಿದೆ. ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಇದೇರೀತಿ, ಕುಮಟಾ ತಾಲ್ಲೂಕಿನ ಬರ್ಗಿ ಸಮೀಪ ಶಿರಸಿಗೆ ಹೋಗುವ ಖೈರೆ ರಸ್ತೆಯಲ್ಲೂ ಗುಡ್ಡ ಕುಸಿಯುವ ಆತಂಕವಿದೆ. ಇಲ್ಲಿ ಗುಡ್ಡಕ್ಕೆ ಹೊದಿಸಲಾಗಿರುವ ಕಾಂಕ್ರೀಟ್ ಹೊದಿಕೆಯು ಕಳೆದ ವರ್ಷದ ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಇಲ್ಲಿನ ಎರಡೂ ರಸ್ತೆಗಳಲ್ಲಿ ಇದೇ ಸಮಸ್ಯೆಯಿದೆ.

ಈ ವರ್ಷ ಮಳೆಗಾಲಕ್ಕೂ ಮೊದಲೇ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆದ್ಯತೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಕೂಡ ಸಭೆ ನಡೆಸಲಾಗಿದೆ.

‘ಜಿಲ್ಲೆಯಲ್ಲಿ ಈ ವಾರದಲ್ಲಿ ಮತ್ತಷ್ಟು ಮಳೆಯಾಗುವ ನಿರೀಕ್ಷೆಯಿದೆ. ಹಾಗಾಗಿ ರಸ್ತೆಯಂಚಿನ ಗುಡ್ಡಗಳು ಕುಸಿಯದಂತೆ ಸಾಕಷ್ಟು ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಐ.ಆರ್.ಬಿ.ಗೆ ನಿರ್ದೇಶನ ನೀಡಲಾಗಿದೆ. ಕಳೆದ ವರ್ಷದ ರೀತಿಯಲ್ಲೇ ಈ ವರ್ಷವೂ ಮುಂಗಾರಿಗೆ ಮೊದಲೇ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಒಂದುವೇಳೆ ಪ್ರಾಕೃತಿಕ ವಿಕೋಪ ಉಂಟಾದರೆ ಸಮರ್ಪಕವಾಗಿ ಎದುರಿಸಲು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಸಾಧಾರಣ ಮಳೆ: ಮೂರು ದಿನಗಳ ಬಳಿಕ ಜಿಲ್ಲೆಯಲ್ಲಿ ಸೋಮವಾರ ಮಳೆಯಾಯಿತು. ಕರಾವಳಿಯಲ್ಲಿ ಭಾರಿ ಮಳೆಯಾಗಬಹುದು ಎಂಬ ಮುನ್ಸೂಚನೆಯಿದ್ದರೂ ಮಳೆಯಾಗಿರಲಿಲ್ಲ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಬಿರುಸಾದ ಮಳೆಯಾಯಿತು. ಸಂಜೆಯ ವೇಳೆಗೆ ಉತ್ತಮ ಮಳೆಯಾಯಿತು.

ಭಾನುವಾರ ಬೆಳಿಗ್ಗೆ 8ರಿಂದ ಸೋಮವಾರ ಬೆಳಿಗ್ಗೆ 8ರ ಅವಧಿಯಲ್ಲಿ ಭಟ್ಕಳದಲ್ಲಿ 4 ಸೆಂ.ಮೀ, ಅಂಕೋಲಾದಲ್ಲಿ 3.1 ಸೆಂ.ಮೀ, ಶಿರಸಿಯಲ್ಲಿ 1.6 ಸೆಂ.ಮೀ ಹಾಗೂ ಸಿದ್ದಾಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು