ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ದೇವಿಕೆರೆ ಸೌಂದರ್ಯ ವೃದ್ಧಿಸಿದ ‘ಬೆಳಕು’

ನಗರಸಭೆ ವಿಶೇಷ ಅನುದಾನದಲ್ಲಿ 60 ಎಲ್‍ಇಡಿ ಬಲ್ಬ್ ಅಳವಡಿಕೆ
Last Updated 3 ಜೂನ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ನಗರದ ಹೃದಯ ಭಾಗದಲ್ಲಿರುವ ದೇವಿಕೆರೆ ಅಭಿವೃದ್ಧಿಯ ನಿರೀಕ್ಷೆಯಲ್ಲೇ ದಶಕ ಕಳೆದಿದ್ದ ಜನರಿಗೆ ಈಗ ಅಲ್ಲಿನ ‘ಬೆಳಕು’ ಹೊಸಹೊಳಪು ಮೂಡಿಸಿದೆ.

ಸುಮಾರು ಆರೂವರೆ ಎಕರೆಗೂ ಹೆಚ್ಚು ವಿಸ್ತಾರವಾಗಿರುವ ಕೆರೆಯ ಸುತ್ತಲಿನ ನಾಲ್ಕೂ ಬದಿಯಲ್ಲೂ 60 ವಿದ್ಯುತ್ ಕಂಬಗಳನ್ನು ಈಚೆಗೆ ಅಳವಡಿಸಲಾಗಿದೆ. ಅವುಗಳಿಗೆ ಹೊಸ ಮಾದರಿಯ ಎಲ್‍ಇಡಿ ಬಲ್ಬ್ ಅಳವಡಿಕೆಯಾಗಿದೆ. ಮಂದ ಬೆಳಕು ಚೆಲ್ಲುವ ಇವು ಕೆರೆಯ ಸೌಂದರ್ಯ ವೃದ್ಧಿಸಿವೆ.

ಪೇಟೆಯ ಮಧ್ಯದಲ್ಲಿರುವ ಇಲ್ಲಿಗೆ ನಿತ್ಯ ನಸುಕಿನ ಜಾಗ ಹಾಗೂ ಸಂಜೆ ನೂರಾರು ಸಂಖ್ಯೆಯಲ್ಲಿ ವಾಯುವಿಹರಿಗರು ಭೇಟಿ ನೀಡುತ್ತಾರೆ. ಈ ಮೊದಲು ಅಭಿವೃದ್ಧಿ ಕಾಣದ ಕೆರೆಯತ್ತ ಜನರು ಬರಲು ಹಿಂದೇಟು ಹಾಕುತ್ತಿದ್ದರು. ಕೆಲವು ತಿಂಗಳುಗಳಿಂದ ಜನರ ಭೇಟಿ ಹೆಚ್ಚುತ್ತಿದೆ.

ದೇವಿಕೆರೆಗೆ ಸುತ್ತ ಪಿಚ್ಚಿಂಗ್ ಕಟ್ಟಿ, ವಾಯುವಿಹಾರ ಪಥ ನಿರ್ಮಿಸುವ ಯೋಜನೆ ಹಲವು ವರ್ಷದಿಂದ ಆಮೆಗತಿಯಲ್ಲಿ ಸಾಗಿತ್ತು. ಕಳೆದ ವರ್ಷ ಕಾಮಗಾರಿ ಪೂರ್ಣಗೊಂಡಿತ್ತು. ಕೆಲವು ದಿನಗಳಿಂದ ಇಲ್ಲಿ ವಾಯುವಿಹಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

‘ಕೆ.ಆರ್.ಐ.ಡಿ.ಎಲ್. ವತಿಯಿಂದ 100 ಮೀ. ವರೆಗೆ ರೇಲಿಂಗ್ (ಸುರಕ್ಷತಾ ತಡೆಬೇಲಿ) ಅಳವಡಿಕೆಯಾಗಿತ್ತು. ನಗರಸಭೆಯ ವಿಶೇಷ ಅನುದಾನದಲ್ಲಿ ₹30 ಲಕ್ಷ ಬಳಕೆ ಮಾಡಿ 126 ಮೀ. ಉದ್ದದವರೆಗೆ ರೇಲಿಂಗ್ ಅಳವಡಿಸಲಾಗಿದೆ. 60 ವಿದ್ಯುತ್ ಕಂಬ ಮತ್ತು ಬಲ್ಬ್ ಅಳವಡಿಸಿದ್ದೇವೆ’ ಎನ್ನುತ್ತಾರೆ ಪೌರಾಯುಕ್ತ ಕೇಶವ ಚೌಗುಲೆ.

‘ವಾಕಿಂಗ್ ಪಾತ್ ಸುತ್ತ ಕಾಂಕ್ರೀಟ್ ಬೆಂಚುಗಳ ಅಳವಡಿಕೆ ಬಾಕಿ ಇದೆ. ಇಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ಕೆರೆಯ ಸುತ್ತ ಅಲಂಕಾರಿಕ ಗಿಡ ಬೆಳೆಸುವ ಜತೆಗೆ ಸಿಸಿಟಿವಿ ಅಳವಡಿಕೆ ಕೆಲಸ ಇನ್ನಷ್ಟೆ ಆಗಬೇಕಿದೆ’ ಎಂದರು.

‘ದೇವಿಕೆರೆಯನ್ನು ಪ್ರವಾಸಿ ತಾಣವಾಗಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಕೇಳಲಾಗಿದೆ. ಶಿರಸಿ ನಗರಕ್ಕೆ ಮಾದರಿಯಾಗಿ ಈ ತಾಣ ರೂಪಿಸಲು ನಿಶ್ಚಯಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.

ಸೌಕರ್ಯ ಕಾಯುವುದೇ ಸವಾಲು:‘ಕೋಟೆಕೆರೆಯಲ್ಲೂ ದೀಪ ಅಳವಡಿಸಿ ಸೌಂದರ್ಯೀಕರಣಗೊಳಿಸಲಾಗಿತ್ತು. ದುಷ್ಕರ್ಮಿಗಳ ಉಪಟಳಕ್ಕೆ ದೀಪಗಳು ಒಡೆದಿವೆ. ಅಲ್ಲಿದ್ದ ವ್ಯಾಯಾಮ ಪರಿಕರ, ಬೆಂಚುಗಳ ಸ್ಥಿತಿಯೂ ಹದಗೆಟ್ಟಿದೆ. ಅಂತಹ ಸ್ಥಿತಿ ದೇವಿಕೆರೆಗೆ ಬರಬಾರದು’ ಎನ್ನುತ್ತಾರೆ ಭೂತೇಶ್ವರ ಕಾಲೊನಿ ನಿವಾಸಿ ಶ್ರೀರಾಮ ನಾಯ್ಕ.

‘ರಾತ್ರಿ ವೇಳೆ ದೇವಿಕೆರೆ ಬಳಿ ಕುಡುಕರು, ಜೂಜುಕೋರರ ಹಾವಳಿ ಹೆಚ್ಚುತ್ತದೆ. ಆಗಂತುಕರ ಓಡಾಟವೂ ಇದ್ದು ಅಂತಹವರಿಂದ ಸೌಕರ್ಯಗಳಿಗೆ ಹಾನಿಯಾಗದಂತೆ ಎಚ್ಚರವಹಿಸಬೇಕು. ಧಾರ್ಮಿಕ ತಾಣವೂ ಇರುವ ಇಲ್ಲಿ ಕಸ, ಮದ್ಯದ ಖಾಲಿ ಬಾಟಲಿ ಎಸೆಯದಂತೆ ಎಚ್ಚರವಹಿಸಬೇಕು’ ಎಂದು ಒತ್ತಾಯಿಸಿದರು.

-------------

ದೇವಿಕೆರೆ ಸೌಂದರ್ಯೀಕರಣಗೊಳಿಸಿ, ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಅಗತ್ಯ ನೆರವು ಒದಗಿಸಲಾಗಿದೆ.

-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT