ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ದಿನವೂ ಲಾಕ್‌ಡೌನ್ ಯಶಸ್ವಿ

ಲಾಠಿ ರುಚಿ ನೋಡಿದ ಪಡ್ಡೆ ಹುಡುಗರು
Last Updated 26 ಮಾರ್ಚ್ 2020, 13:50 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಎರಡನೇ ದಿನ ಗುರುವಾರವೂ ಲಾಕ್‌ಡೌನ್ ಯಶಸ್ವಿಯಾಯಿತು. ಎಲ್ಲ ಪ್ರಮುಖ ರಸ್ತೆಗಳು ಪಾದಚಾರಿಗಳು, ವಾಹನ ಸಂಚಾರದಿಂದ ಮುಕ್ತವಾಗಿದ್ದವು.

ಬುಧವಾರ ಸಂಚಾರ ಸಂಪೂರ್ಣ ಬಂದಾಗಿದ್ದರೆ, ಗುರುವಾರ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ಹೋಗುವವರು ಅಲ್ಲಲ್ಲಿ ಕಾಣುತ್ತಿದ್ದರು. ವಿನಾಕಾರಣ ಬೈಕ್ ಹಿಡಿದು ತಿರುಗುವ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಎಲ್ಲ ವೃತ್ತಗಳಲ್ಲಿ ನಿಂತಿದ್ದ ಪೊಲೀಸರು, ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಪ್ರತಿ ವಾಹನವನ್ನು ತಡೆದು ನಿಲ್ಲಿಸಿ, ವಿಚಾರಿಸಿದರು. ರಸ್ತೆಯಲ್ಲಿ ಹಿರಿಯರು, ಮುದುಕರು, ಹೆಂಗಸರು ನಡೆದುಕೊಂಡು ಹೋಗುತ್ತಿದ್ದರೆ, ಅವರನ್ನು ಸಹ ತಡೆದು, ತಿಳಿ ಹೇಳಿ ಮನೆಗೆ ಕಳುಹಿಸಿದರು.

ನಗರದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದಾಗಿರುವ ಕಾರಣ ಕೆಲ ಉತ್ಸಾಹಿ ಯುವಕರು, ಮನೆ–ಮನೆಗೆ ದಿನಸಿ ಸಾಮಗ್ರಿ ಪೂರೈಕೆ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಬಹುತೇಕ ಅಂಗಡಿಗಳಲ್ಲಿ ಸಂಗ್ರಹ ಮುಗಿದಿದೆ ಎನ್ನುತ್ತಿದ್ದಾರೆ.

ಉಪವಿಭಾಗಾಧಿಕಾರಿ ಸಭೆ

ಕಾಯಂ ದಿನಸಿ ಸಾಮಗ್ರಿಗಳ ಅಂಗಡಿಗಳನ್ನು ಸ್ಥಗಿತಗೊಳಿಸಿ ವಾಹನಗಳ ಮೂಲಕ ಪೂರೈಕೆ ಮಾಡಲು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಟ್ಟಿ ಸಂಬಂಧಿಸಿದ ಅಂಗಡಿಕಾರರಿಗೆ ಸೂಚಿಸಿದರು.

ಅಂಗಡಿಕಾರರ ಜೊತೆ ಚರ್ಚಿಸಿದ ಅವರು, ‘ವಾರ್ಡ್ ವ್ಯಾಪ್ತಿಯಲ್ಲಿ ಈಗಿರುವ ಕಾಯಂ ಅಂಗಡಿಗಳ ಬದಲು ಸಂಚಾರಿ ವಾಹನಗಳ ಮೂಲಕ ತರಕಾರಿ ಮಾರಾಟ ಮಾಡಬೇಕು. ಎಲ್ಲ ಮನೆಗಳಿಗೂ ತರಕಾರಿ ಸಿಗುವಂತೆ ನೋಡಿಕೊಳ್ಳಬೇಕು. ವಾಹನದಲ್ಲಿಟ್ಟುಕೊಂಡೇ ವ್ಯಾಪಾರ ಮಾಡಬೇಕು. ದರ ಹೆಚ್ಚಳ ಮಾಡಿ ವ್ಯಾಪಾರ ಮಾಡಿದರೆ, ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಹಣ್ಣು, ತರಕಾರಿಗಳ ದಾಸ್ತಾನು ಖಾಲಿಯಾಗುತ್ತಿದೆ. ಹುಬ್ಬಳ್ಳಿ ಸೇರಿದಂತೆ ಹೊರ ಜಿಲ್ಲೆಗಳಿಂದ ಉತ್ಪನ್ನ ಬರಬೇಕಾಗಿದೆ ಎಂದು ಕೆಲ ಅಂಗಡಿಕಾರರು ಹೇಳಿದಾಗ ಪ್ರತಿಕ್ರಿಯಿಸಿದ ಉಳ್ಳಾಗಡ್ಡಿ, ‘ತುರ್ತು ಕಾರ್ಯಕ್ಕೆ ಪ್ರತ್ಯೇಕ ಪಾಸ್ ವಿತರಿಸಲಾಗುವುದು. ಅದೇ ಪಾಸನ್ನು ಪೆಟ್ರೋಲ್ ಬಂಕ್‌ಗಳಲ್ಲಿ ತೋರಿಸಿದರೆ ಪೆಟ್ರೋಲ್ ಸಿಗುತ್ತದೆ. ಗುಣಮಟ್ಟದ ಹಣ್ಣು, ತರಕಾರಿ ವಿತರಿಸಬೇಕು’ ಎಂದರು.

ಪೊಲೀಸರು, ಸರ್ಕಾರಿ ನೌಕರರು ಹಾಗೂ ಮಾಧ್ಯಮದವರಿಗೆ ಮಾತ್ರ ಅಗತ್ಯ ಪೆಟ್ರೊಲ್ ವಿತರಿಸಲು ಸೂಚಿಸಲಾಗಿದೆ ಎಂದರು.

ಡಿವೈಎಸ್ಪಿ ಜಿ.ಟಿ.ನಾಯಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಸಿಪಿಐ ಪ್ರದೀಪ ಬಿ.ಯು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT