ಗುರುವಾರ , ಸೆಪ್ಟೆಂಬರ್ 16, 2021
24 °C
20 ವರ್ಷಗಳ ಹಿಂದಿನ ಸಾಲ ಪ್ರಕರಣ: ಲೋಕ ಅದಾಲತ್‌ನಲ್ಲಿ ಇತ್ಯರ್ಥ

ಕಾರವಾರ: ವಿವಿಧ ‘ಹೊರೆ’ಗೆ ಚರ್ಚೆಯಲ್ಲಿ ಪರಿಹಾರ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಹಮ್ಮಿಕೊಳ್ಳುತ್ತಿರುವ ‘ಲೋಕ ಅದಾಲತ್’, ಹಲವು ಪ್ರಕರಣಗಳನ್ನು ಅತ್ಯಂತ ಸರಳವಾಗಿ ಇತ್ಯರ್ಥಗೊಳಿಸಲು ನೆರವಾಗುತ್ತಿದೆ. ಸಣ್ಣಪುಟ್ಟ ಕಾರಣಕ್ಕೂ ದಾಖಲಾಗಿದ್ದ ದಾವೆಗಳು ಮಾತುಕತೆಯ ಮೂಲಕ ಬಗೆಹರಿಯುತ್ತಿವೆ. ಈ ಹಿಂದೆ ನಡೆದ ಅದಾಲತ್‌, ಇಂಥ ಮಾನವೀಯ ವಿಚಾರಗಳಿಗೂ ಸಾಕ್ಷಿಯಾಗಿದೆ.

ಪ್ರಕರಣ 1:

ಕಾರವಾರ ಹೊರವಲಯದಲ್ಲಿ ವಾಸವಿರುವ ಬಡ ರೈತರೊಬ್ಬರು ಸುಮಾರು 20 ವರ್ಷಗಳ ಹಿಂದೆ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಕಂತುಗಳನ್ನು ಪಾವತಿಸಿದ್ದರೂ ಮತ್ತಷ್ಟು ಮೊತ್ತ ಬಾಕಿಯಿತ್ತು. ಅವರ ಕೃಷಿ ಜಮೀನಿನ ಸುತ್ತ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು ತಲೆ ಎತ್ತಿದ್ದು, ಬೇಸಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ಸರಕು ಸಾಗಣೆಯ ಆಟೊ ಚಲಾಯಿಸಿ ಜೀವನ ನಡೆಸುತ್ತಿದ್ದಾರೆ. ಆದರೂ ಸಾಲ ತೀರಿಸಲಾಗದೇ ಒತ್ತಡದಲ್ಲಿದ್ದರು.

ಆಗಸ್ಟ್‌ನಲ್ಲಿ ನಡೆದ ಲೋಕ ಅದಾಲತ್‌ ಮಾಹಿತಿ ಪಡೆದ ಅವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರು. ಅದರಂತೆ, ವ್ಯಾಜ್ಯ ‍ಪೂರ್ವ ಪ್ರಕರಣ ಎಂದು ಪರಿಗಣಿಸಿ ಸಹಕಾರ ಬ್ಯಾಂಕ್‌ನವರನ್ನೂ ಅದಾಲತ್‌ಗೆ ಕರೆಸಲಾಯಿತು.

₹ 2.50 ಲಕ್ಷ ಸಾಲದ ಪ್ರಕರಣವನ್ನು ಸುಮಾರು ₹ 1.50 ಲಕ್ಷ ಪಾವತಿಸಿದರೆ ಇತ್ಯರ್ಥಗೊಳಿಸುವುದಾಗಿ ಬ್ಯಾಂಕ್‌ನವರು ತಿಳಿಸಿದರು. ರೈತ ಮತ್ತಷ್ಟು ಕಡಿಮೆ ಮಾಡುವಂತೆ ಕೋರಿಕೊಂಡರು. ಕೊನೆಗೆ ಸಾಲದ ಅಸಲು ಮೊತ್ತಕ್ಕೆ ಚ್ಯುತಿ ಬಾರದಂತೆ ₹ 1.45 ಲಕ್ಷ ಪಾವತಿಗೆ ಸಹಮತಕ್ಕೆ ಬರಲಾಯಿತು.

ಪ್ರಕರಣ 2:

ಅಪಘಾತದಲ್ಲಿ ಅಂಗವೈಕಲ್ಯ ಹೊಂದಿದ ಬೈಕ್ ಸವಾರರೊಬ್ಬರು, ವಿಮೆಯ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದ್ದರು. ವಿಮಾ ಕಂಪನಿಯವರು, ಅಂಗವೈಕಲ್ಯದ ಪ್ರಮಾಣ ಪತ್ರವಿಲ್ಲದೇ ಹೆಚ್ಚು ಪರಿಹಾರ ಕೊಡಲು ಸಾಧ್ಯವಿಲ್ಲ ಎಂದಿದ್ದರು.

ಈ ಬಗ್ಗೆ ಸ್ಪಂದಿಸಿದ ನ್ಯಾಯಾಧೀಶರು, ಅರ್ಜಿದಾರರಿಗೆ ಪ್ರಮಾಣ ಪತ್ರ ತರಲು ಸೂಚಿಸಿದ್ದರು. ಆದರೆ, ತಾನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಪ್ರಮಾಣಪತ್ರಕ್ಕಾಗಿ ಮತ್ತೆ ಒಂದು ವಾರ ಅಲ್ಲಿ ಉಳಿದುಕೊಳ್ಳಲು, ಸಹಾಯಕರಾಗಿ ಮತ್ತೊಬ್ಬರನ್ನು ಕರೆದುಕೊಂಡು ಹೋಗಲು ಹಣಕಾಸು ಸ್ಥಿತಿಗತಿ ಸಮಸ್ಯೆಯನ್ನು ವಿವರಿಸಿ ಕಣ್ಣೀರು ಹಾಕಿದರು.

ಈ ಬಗ್ಗೆ ಜಿಲ್ಲಾ ಸರ್ಜನ್‌ಗೆ ಪತ್ರ ಬರೆದ ನ್ಯಾಯಾಧೀಶರು, ಅರ್ಜಿದಾರರ ತಪಾಸಣೆ ನಡೆಸಿ ಅಂಗವೈಕಲ್ಯದ ಪ್ರಮಾಣಪತ್ರ ನೀಡಲು ಸೂಚಿಸಿದರು. ಅದರ ವರದಿಯನ್ನು ನಾಲ್ಕು ದಿನಗಳಲ್ಲಿ ತಮಗೇ ಕೊಡಬೇಕು ಎಂದೂ ಸೂಚಿಸಿದರು. ಅದರಂತೆ ಸಲ್ಲಿಕೆಯಾದ ಪ್ರಮಾಣಪತ್ರವನ್ನು ಆಧರಿಸಿ ಅರ್ಜಿದಾರರಿಗೆ ₹ 1.50 ಲಕ್ಷ ಪರಿಹಾರದ ಬದಲು ₹ 4.45 ಲಕ್ಷ ದೊರೆಯಿತು.

ಪ್ರಕರಣ 3:

ಇಬ್ಬರು ಅವಿವಾಹಿತ ಸಹೋದರಿಯರ ತಂದೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಅದನ್ನು ತೀರಿಸಿದ್ದರೂ ಇನ್ನೂ ಬಾಕಿಯಿದೆ ಎಂದು ತೋರಿಸುತ್ತಿತ್ತು. ಅವರಲ್ಲೊಬ್ಬರು ಅದೇ ಬ್ಯಾಂಕ್‌ನಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದಾರೆ. ತಮ್ಮ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಅದಾಲತ್‌ನಲ್ಲಿ ಕೋರಿದ್ದರು.

ಈ ಬಗ್ಗೆ ಬ್ಯಾಂಕ್‌ನವರನ್ನು ಸಂಪರ್ಕಿಸಿದಾಗ ₹ 16 ಸಾವಿರ ಪಾವತಿ ಮಾಡುವಂತೆ ತಿಳಿಸಿದರು. ಆದರೆ, ತಂದೆಯೂ ಮೃತಪಟ್ಟಿದ್ದು, ಮನೆಯಲ್ಲಿ ಹಣಕಾಸಿಗೆ ಬೇರೆ ಯಾವುದೇ ಮೂಲವಿಲ್ಲ. ತಾವು ₹ 5 ಸಾವಿರಮಾತ್ರ ತುಂಬಬಹುದು ಎಂದರು. ಅದರಂತೆ ಬ್ಯಾಂಕ್‌ನವರು ಒಪ್ಪಿಕೊಂಡು ಋಣಮುಕ್ತರನ್ನಾಗಿ ಮಾಡಿತು.

30ಕ್ಕೆ ಲೋಕ ಅದಾಲತ್:

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಸೆ.30ರಂದು ‘ಮೆಗಾ ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸಂತೋಷಕುಮಾರ ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸುಮಾರು 38 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದವು. ಅವುಗಳ ಪೈಕಿ 5,287ನ್ನು ಮಾರ್ಚ್‌ನಲ್ಲಿ ಹಾಗೂ 7,609ನ್ನು ಆಗಸ್ಟ್‌ನಲ್ಲಿ ಹಮ್ಮಿಕೊಳ್ಳಲಾದ ಅದಾಲತ್‌ನಲ್ಲಿ ಬಗೆಹರಿಸಲಾಗಿದೆ. ಈ ಬಾರಿಯೂ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವ ವಿಶ್ವಾಸವಿದ’ ಎಂದು ತಿಳಿಸಿದರು.

-----

* ರೈತರು, ಬಡವರು ಮನೆ ಬಳಕೆಗೆ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಅಂಥ ನಿಜವಾದ 49 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.

- ಎನ್.ಸಂತೋಷಕುಮಾರ ಶೆಟ್ಟಿ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು