ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಮೆ ಗ್ರಾಮಸ್ಥರ ಸಂಕಷ್ಟದ ಸರಮಾಲೆ: ಬಾಣಂತಿ ಆರೈಕೆಗೂ ರಸ್ತೆಯ ಕೊರತೆ

Last Updated 23 ಅಕ್ಟೋಬರ್ 2021, 16:55 IST
ಅಕ್ಷರ ಗಾತ್ರ

ಕಾರವಾರ: ಸರ್ವಋತು ರಸ್ತೆ ಹಾಗೂ ಸೇತುವೆ ಇಲ್ಲದೇ ಕಂಗೆಟ್ಟಿರುವ ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮಸ್ಥರ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಅನಾರೋಗ್ಯ ಪೀಡಿತ ಬಾಣಂತಿಯೊಬ್ಬರನ್ನು ಗ್ರಾಮಸ್ಥರು ಸುಮಾರು ಎರಡೂವರೆ ಕಿಲೋಮೀಟರ್ ಎತ್ತಿಕೊಂಡು ಸಾಗಿ ಜೀವ ಉಳಿಸಿದ್ದಾರೆ.

ಸಾವಿತ್ರಿ ಕೃಷ್ಣ ಮರಾಠಿ ಎಂಬುವವರು ಹೆರಿಗೆಗೆಂದು ಮಹಿಮೆಯ ಮರಾಠಿಕೇರಿಗೆ ಬಂದಿದ್ದರು. ಅವರಿಗೆ ಅ.17ಕ್ಕೆ ಹೊನ್ನಾವರ ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ತಾಯಿ ಮಗುವಿನ ಆರೋಗ್ಯ ಪರಿಶೀಲಿಸಿ 19ರಂದು ತವರು ಮನೆಗೆ ಕರೆದುಕೊಂಡು ಬರಲಾಗಿತ್ತು. ಗ್ರಾಮದ ಆಶಾ ಕಾರ್ಯಕರ್ತೆ ಪ್ರಮೀಳಾ ಅ.21ರಂದು ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಬಾಣಂತಿ ಸಂಪೂರ್ಣ ಅಶಕ್ತರಾಗಿದ್ದುದು ಗಮನಕ್ಕೆ ಬಂತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು.

ಗ್ರಾಮ ಮಧ್ಯದಲ್ಲಿ ಹಳ್ಳ ಹರಿಯುತ್ತಿದ್ದು, ಮರಾಠಿಕೇರಿ ಸೇರಿದಂತೆ ಹತ್ತಾರು ಜನವಸತಿಯ ಪ್ರದೇಶಗಳು ಮತ್ತೊಂದು ಬದಿಯಲ್ಲಿವೆ. ಅಲ್ಲಿಗೆ ಸಾಗಲು ಸೇತುವೆಯಾಗಲೀ ರಸ್ತೆಯಾಗಲೀ ಇಲ್ಲ. ಹಾಗಾಗಿ ಆಂಬುಲೆನ್ಸ್ ಹಳ್ಳದ ಮತ್ತೊಂದು ಭಾಗದಲ್ಲೇ ನಿಲ್ಲಬೇಕಾಯಿತು. ಕೊನೆಗೆ ಕುಟುಂಬದವರು ಹಾಗೂ ಗ್ರಾಮಸ್ಥರೆಲ್ಲ ಸೇರಿ ಬಾಣಂತಿಯನ್ನು ಎತ್ತಿಕೊಂಡು ಸುಮಾರು ಎರಡೂವರೆ ಕಿಲೋಮೀಟರ್ ನಡೆದು ಬಂದು ಆಂಬುಲೆನ್ಸ್‌ನಲ್ಲಿ ಮಲಗಿಸಿದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಆಶಾ ಕಾರ್ಯಕರ್ತೆ ಪ್ರಮೀಳಾ, ‘ಬಾಣಂತಿಯು ಎದ್ದು ಕೂರಲೂ ಆಗದಷ್ಟು ನಿತ್ರಾಣವಾಗಿದ್ದರು. ಎಲ್ಲರೂ ಸೇರಿ ಅವರನ್ನು ಎಬ್ಬಿಸಿ ಕೂರಿಸಿದೆವು. ಅವರು ಹಸುಳೆಗೆ ಹಾಲು ಕುಡಿಸುವಷ್ಟರಲ್ಲಿ ಗಡಗಡ ನಡುಗುತ್ತಿದ್ದರು. ಒಂದುವೇಳೆ, ಆ ಸಂದರ್ಭದಲ್ಲಿ ಅವರನ್ನು ಕರೆದುಕೊಂಡು ಆಂಬುಲೆನ್ಸ್‌ ಬಳಿ ಹೋಗಿರದಿದ್ದರೆ ಪರಿಸ್ಥಿತಿ ಶೋಚನೀಯವಾಗುತ್ತಿತ್ತು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ’ ಎಂದು ವಿವರಿಸಿದರು.

ಸೌಕರ್ಯದ ಕನವರಿಕೆ:

‘ಉಪ್ಪೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಮೆಯಲ್ಲಿ ಕೆಲವು ದಿನಗಳ ಹಿಂದೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಕೂಡ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಶಾಸಕ ಸುನೀಲ ನಾಯ್ಕ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಮನವರಿಕೆ ಮಾಡಿದ್ದೆವು’ ಎಂದು ಗ್ರಾಮಸ್ಥ ರಾಜೇಶ ನಾಯ್ಕ ಹೇಳುತ್ತಾರೆ.

‘ಅದಕ್ಕೆ ಸ್ಪಂದಿಸಿದ್ದ ಶಾಸಕರು, ಅಂಗನವಾಡಿ, ಶಾಲಾ ಕೊಠಡಿ, ಮಹಿಷಾಸುರ ಮರ್ದಿನಿ ರಸ್ತೆ ಕಾಮಗಾರಿಯನ್ನು ನೆರವೇರಿಸಲಾಗಿದೆ. ಐಕಣಿ ಸೇತುವೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ₹ 2 ಕೋಟಿ ವೆಚ್ಚದಲ್ಲಿ ಕಂಚಿಬೀಳು ಸೇತುವೆ ನಿರ್ಮಾಣವು ಸರ್ಕಾರದ ಮಟ್ಟದಲ್ಲಿ ಅನುಮೋದನೆ ಹಂತದಲ್ಲಿದೆ ಎಂದು ತಿಳಿಸಿದ್ದರು. ಈ ಎಲ್ಲ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪಾರದರ್ಶಕವಾಗಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT