ಶುಕ್ರವಾರ, ಜನವರಿ 27, 2023
27 °C
ಕೇಂದ್ರ ಪರಿಸರ ಅರಣ್ಯ ಮಂತ್ರಾಲಯಕ್ಕೆ ಮನವಿ ಸಲ್ಲಿಕೆ

ಪಶ್ಚಿಮಘಟ್ಟಕ್ಕೆ ತನಿಖಾ ತಂಡ ಕಳುಹಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಪಶ್ಚಿಮಘಟ್ಟದಲ್ಲಿ ಅರಣ್ಯ ನಾಶ, ಭೂ ಕಬಳಿಕೆ, ಅಕ್ರಮ ಗಣಿಗಾರಿಕೆ ಹೆಚ್ಚಾಗಿದೆ. ಇದಕ್ಕೆ ತಡೆ ಹಾಕಲು ಕೇಂದ್ರ ತನಿಖಾ ತಂಡ ಈ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ವೃಕ್ಷಲಕ್ಷ ಆಂದೋಲನ ಸಂಘಟನೆ ಒತ್ತಾಯಿಸಿದೆ.

ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ ಕೆ.ಪಿ.ಸಿಂಗ್, ಉಪ ಮಹಾ ನಿರೀಕ್ಷಕ ಡಾ.ಅವಿನಾಶ ಕಾನ್ಪಡೆ  ಅವರನ್ನು ಇತ್ತೀಚೆಗೆ ಬೆಂಗಳೂರಿನ ದಕ್ಷಿಣ ಭಾರತ ಪ್ರಾದೇಶಿಕ ಕಚೇರಿಯಲ್ಲಿ ಭೇಟಿ ಮಾಡಿದ ಸಂಘಟನೆಯ ನಿಯೋಗವು, ಪಶ್ಚಿಮಘಟ್ಟದ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಿತು.

ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಆಗುತ್ತಿರುವ ಪರಿಸರ ಅವಘಡ ತಪ್ಪಿಸಬೇಕು. ಎಂಪಿಎಂ ಕಾರ್ಖಾನೆಗೆ ನೀಡಿದ್ದ 70ಸಾವಿರ ಎಕರೆ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಮೂರು ವರ್ಷಗಳಿಂದ ಆಗ್ರಹಿಸುತ್ತಲೇ ಬಂದರೂ ಕ್ರಮವಾಗಿಲ್ಲ. ಡೀಮ್ಡ್ ಅರಣ್ಯ ನಾಶದ ತಡೆಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. 3 ಲಕ್ಷ ಎಕರೆ ಡೀಮ್ಡ್ ಅರಣ್ಯ ರಕ್ಷಣೆಗೆ ಕೇಂದ್ರ ಸರ್ಕಾರ ತುರ್ತು ಕ್ರಮವಹಿಸಬೇಕು. ಡೀಮ್ಡ್ ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು. ಅಪರೂಪದ ರಾಂಪತ್ರೆ ಜಡ್ಡಿ, ವಿನಾಶದ ಅಂಚಿನಲ್ಲಿರುವ ಔಷಧ ಸಸ್ಯಗಳ ರಕ್ಷಣೆಗೆ ಮುಂದಾಗಬೇಕು. ಅಕೇಶಿಯಾ ನಿಷೇಧಿಸಿದ್ದರೂ, ಅರಣ್ಯ ಇಲಾಖೆ ಇದನ್ನು ಬೆಳೆಸುವುದನ್ನು ಮುಂದುವರಿಸಿದೆ. ಏಕಜಾತಿ ನೆಡುತೋಪು ಪದ್ಧತಿ ಕೈಬಿಡಬೇಕು. ಶರಾವತಿ ಕಣಿವೆಯಲ್ಲಿ ಹೊಸ ಜಲವಿದ್ಯುತ್ ಯೋಜನೆಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳನ್ನು ಒತ್ತಾಯಿಸಲಾಯಿತು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ, ಪರಿಸರವಾದಿ ವಾಮನ ಆಚಾರ್ಯ ನಿಯೋಗದ ನೇತೃತ್ವ ವಹಿಸಿದ್ದರು. ತಜ್ಞರ ತಂಡವನ್ನು ಶೀಘ್ರ ಪಶ್ಚಿಮಘಟ್ಟಕ್ಕೆ ಕಳುಹಿಸಿ, ತನಿಖೆ ನಡೆಸಲಾಗುವುದು ಎಂದು ಕೆ.ಪಿ.ಸಿಂಗ್ ಭರವಸೆ ನೀಡಿದರು ಎಂದು ಅನಂತ ಅಶೀಸರ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು