ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ: ಕೆರೆಗಳ ಸಂರಕ್ಷಣೆಯ ನೆರವಿಗೆ ‘ಖಾತ್ರಿ’

ಜೊಯಿಡಾ ತಾಲ್ಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಮಾನವ ದಿನಗಳಿಂದ ಜಲಮೂಲ ಅಭಿವೃದ್ಧಿ
Last Updated 12 ಜೂನ್ 2020, 19:30 IST
ಅಕ್ಷರ ಗಾತ್ರ

ಜೊಯಿಡಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಳೆಗಾಲದಲ್ಲಿ ನೀರಿನ ಸಂರಕ್ಷಣೆ ಹಾಗೂ ಇಂಗಿಸುವ ವಿವಿಧ ಕಾಮಗಾರಿಗಳು ತಾಲ್ಲೂಕಿನಲ್ಲಿ ನಡೆಯುತ್ತಿದೆ. ತಾಲ್ಲೂಕುಪಂಚಾಯ್ತಿಯು ಈ ವರ್ಷವೇಹೆಚ್ಚಿನ ಆದ್ಯತೆ ನೀಡಿದೆ.

ತಾಲ್ಲೂಕಿನ ಮಟ್ಟಿಗೆ ದಾಖಲೆ ಎಂಬಂತೆ ಒಂದು ಲಕ್ಷಕ್ಕೂ ಅಧಿಕ ಮಾನವ ದಿನಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಳಸಿಕೊಳ್ಳಲಾಗಿದೆ. ₹1 ಕೋಟಿ ಅನುದಾನದಲ್ಲಿ ಮಳೆ ನೀರನ್ನು ಸಂರಕ್ಷಣೆ ಮಾಡಲಾಗುತ್ತಿದೆ. 40 ಕೆರೆಗಳನ್ನು, 10 ಕೃಷಿ ಹೊಂಡಗಳನ್ನು, ಎರಡು ಚೆಕ್ ಡ್ಯಾಂಗಳನ್ನು ಹಾಗೂ 10 ತೆರೆದ ಬಾವಿಗಳನ್ನು ಗ್ರಾಮ ಪಂಚಾಯ್ತಿಗಳ ಮೂಲಕ ಅಭಿವೃದ್ಧಿ ಪಡಿಸಲಾಗಿದೆ.ಈ ಕಾಮಗಾರಿಗಳು ಲಾಕ್‌ಡೌನ್ ಅವಧಿಯಲ್ಲಿ ಗ್ರಾಮೀಣ ಜನರ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿವೆ.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಾಗೋಡಾ 6, ನಂದಿಗದ್ದಾ, ರಾಮನಗರ ಹಾಗೂ ಉಳವಿಯಲ್ಲಿತಲಾ 4, ಆಖೇತಿ, ಅಣಶಿ, ಆವೇಡಾ, ಬಜಾರಕುಣಂಗ, ಸಿಂಗರಗಾಂವ, ಹಾಗೂ ಪ್ರಧಾನಿಯಲ್ಲಿ ತಲಾ 3, ಅಸು ಮತ್ತು ಜಗಲಪೇಟದಲ್ಲಿ ತಲಾಎರಡು.. ಹೀಗೆ ಒಟ್ಟು40 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ತಾಲ್ಲೂಕಿನಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಹಿಂಗಾರಿನಲ್ಲಿ ಕೃಷಿಗೆ ನೀರಾವರಿ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಕೆರೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಎಲ್ಲ ಕೆರೆಗಳು ಗ್ರಾಮೀಣ ಪ್ರದೇಶದಲ್ಲೇ ಇದ್ದು, ಕೆಲವನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ಅರಣ್ಯ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಗಿಡ ಮರಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರು ಸಿಗಲಿ ಎಂಬ ಉದ್ದೇಶದಿಂದಲೂ ಅಭಿವೃದ್ದಿ ಪಡಿಸಲಾಗಿದೆ.

ಹಲವು ವರ್ಷಗಳ ಬೇಡಿಕೆಯಂತೆ ಅಣಶಿ ಗ್ರಾಮ ಪಂಚಾಯ್ತಿಯು ಸುಮಾರು ₹ 1 ಲಕ್ಷ ಅನುದಾನದಲ್ಲಿ ನಿಗುಂಡಿ ಊರಿನ ಕೆರೆಯನ್ನು ಅಭಿವೃದ್ಧಿಪಡಿಸಿದೆ.ಇದು ಊರ ಹೊರಗೆ ಇರುವ ಈ ಕೆರೆಯುಕೃಷಿಯ ಜೊತೆಗೇವನ್ಯಜೀವಿಗಳಿಗೂ ನೀರು ಒದಗಿಸುತ್ತದೆ. ವರ್ಷದ ಕೊನೆಯಲ್ಲಿ ಮಳೆ ಪ್ರಮಾಣ ಕಡಿಮೆಯಾದರೆ ಊರಿನ ಜನರು ಇದೇ ಕೆರೆಯ ನೀರನ್ನು ಕುಡಿಯಲೂ ಬಳಸುತ್ತಾರೆ ಎಂದು ನಿಗುಂಡಿ ಗ್ರಾಮದ ರೈತ ವಿಷ್ಣು ನೀಲಕಂಠ ದೇಸಾಯಿ ಹೇಳಿದರು.

ಕಾರ್ಮಿಕರಿಗೆ ಕೆಲಸ:ಕೆರೆಗಳ ಹೂಳು ತೆಗೆಯುವ ಹಾಗೂ ಇತರ ದುರಸ್ತಿ ಕಾರ್ಯಗಳಿಗೆ ಜೆ.ಸಿ.ಬಿ. ಅಥವಾ ಇನ್ನಿತರ ಯಾವುದೇ ಯಂತ್ರಗಳನ್ನು ಬಳಸಿಲ್ಲ. ಕೂಲಿ ಕಾರ್ಮಿಕರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಕಾಮಗಾರಿಗಳನ್ನು ಮಾಡಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಬಂದ, ಸ್ಥಳೀಯ ದಾಖಲೆ ಇರುವ ವಲಸೆ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸವನ್ನು ನೀಡಲಾಗುತ್ತಿದೆ ಎಂದುಜೊಯಿಡಾ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT