ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕಡಲತೀರದಲ್ಲಿ ಮತ್ತೆ ‘ಸೀಗಲ್‌’ ಕಲರವ

ಅರಬ್ಬಿ ಸಮುದ್ರಕ್ಕೆ ಮರಳಿದ ಚಳಿಗಾಲದ ಅತಿಥಿಗಳು: ಸ್ವಚ್ಛಂದ ಹಾರಾಟ
Last Updated 22 ಡಿಸೆಂಬರ್ 2021, 19:46 IST
ಅಕ್ಷರ ಗಾತ್ರ

ಕಾರವಾರ: ವಲಸೆ ಪಕ್ಷಿ ‘ಸೀಗಲ್’ಗಳು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮತ್ತೆ ಕಾಣಿಸಿಕೊಂಡಿವೆ. ನೂರಾರು ಹಕ್ಕಿಗಳು ಅಲೆಗಳ ಮೇಲೆ ತೇಲುತ್ತ ಮೀನುಗಳನ್ನು ಬೇಟೆಯಾಡುವ ದೃಶ್ಯ ಜನರನ್ನು ಸೆಳೆಯುತ್ತಿವೆ.

ಈ ಹಕ್ಕಿಗಳು ಅಂಟಾರ್ಟಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಉತ್ತರ ಅಮೆರಿಕಾಮ ರಷ್ಯಾ ಮುಂತಾದ ದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಅಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಆಹಾರ ಅರಸಿ ವಲಸೆ ಬರುತ್ತವೆ.

ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮಾಜಾಳಿ ಭಾಗದಲ್ಲಿ ಕೆಲವು ವರ್ಷಗಳ ಹಿಂದಿನವರೆಗೂ ಸಾವಿರಾರು ಹಕ್ಕಿಗಳು ಕಾಣಸಿಗುತ್ತಿದ್ದವು. ಆದರೆ, ನಂತರ ಬೆರಳೆಣಿಕೆಯಲ್ಲಿ ಬಂದು, ಕೆಲವೇ ದಿನಗಳಲ್ಲಿ ಪುನಃ ಹೋಗಿದ್ದವು. ಈ ಬಾರಿ ನೂರಾರು ಹಕ್ಕಿಗಳು ಎರಡು ಮೂರು ಗುಂಪುಗಳಲ್ಲಿ, ನಾಲ್ಕು ದಿನಗಳಿಂದ ಸ್ವಚ್ಛಂದವಾಗಿ ಹಾರಾಡುತ್ತ ಬಿಸಿಲಿಗೆ ಮೈಯೊಡ್ಡಿ ಕುಳಿತಿವೆ.

ಮೀನು, ಏಡಿ, ಸೀಗಡಿ ಮುಂತಾದ ಜಲಚರಗಳೇ ಈ ಪಕ್ಷಿಗಳ ಪ್ರಮುಖ ಆಹಾರವಾಗಿದೆ. ಬಹಳ ಚೆನ್ನಾಗಿ ಈಜುವ ಸಾಮರ್ಥ್ಯ ಹೊಂದಿದ್ದರೂ ಚುರುಕಾಗಿ ಬೇಟೆಯಾಡಲಾರವು. ಸಮುದ್ರದ ಮೇಲ್ಮೈಯಲ್ಲಿ ಬರುವ ಜೀವಿಗಳನ್ನಷ್ಟೇ ಹಿಡಿಯಬಲ್ಲವೇ ಹೊರತು ನೀರಿನ ಒಳಗೆ ಹೆಚ್ಚು ಆಳಕ್ಕೆ ಹೋಗುವುದಿಲ್ಲ. ಆದ್ದರಿಂದಲೇ ಇವುಗಳು ಮಾನವ ವಾಸವಿರುವ ಪ್ರದೇಶಗಳಿಗೆ ಹತ್ತಿರದಲ್ಲೇ ಸಮುದ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಮೀನುಗಾರರು ಬಲೆಬೀಸಿ ಹಿಡಿದ ಮೀನು, ದಡದಲ್ಲಿ ಎಸೆದ ಆಹಾರ ಪದಾರ್ಥಗಳನ್ನೂ ತಿನ್ನುತ್ತವೆ.

ಆಗೊಮ್ಮೆ ಈಗೊಮ್ಮೆ ಹೊಲಗಳಲ್ಲೂ ಸೀಗಲ್‌ಗಳು ಕಾಣಿಸಿಕೊಳ್ಳುತ್ತವೆ. ಬದುಗಳಲ್ಲಿರುವ ಕಪ್ಪೆ, ಏಡಿ, ಕಪ್ಪೆಚಿಪ್ಪುಗಳನ್ನು ಬೇಟೆಯಾಡುತ್ತವೆ. ಸೀಗಲ್‌ಗಳಲ್ಲಿ 40ಕ್ಕೂ ಹೆಚ್ಚು ಪ್ರಭೇದಗಳಿವೆ. ಕಂದುತಲೆಯ ಗಲ್ (ಲೇರಸ್ ಬ್ರುನಿಸಿಫ್ಯಾಲಸ್) ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಮೀನುಗಾರರಲ್ಲಿ ಆಶಾಭಾವ:

ಸೀಗಲ್‌ಗಳು ಮೀನುಗಳು ಹೆಚ್ಚು ಇರುವ ಪ್ರದೇಶಗಳಲ್ಲಿ, ಕಡಲತೀರಕ್ಕೆ ಹತ್ತಿರ ಇರುವಂತೆ ಹಾರಾಡುತ್ತಿರುತ್ತವೆ. ಹಾಗಾಗಿ ಈ ಪಕ್ಷಿಗಳು ಕಾಣಿಸಿಕೊಂಡರೆ ಮೀನುಗಾರಿಕೆಗೆ ಶುಭ ಲಕ್ಷಣ ಎಂದು ಮೀನುಗಾರರಲ್ಲಿ ನಂಬಿಕೆಯಿದೆ.

ಆಹಾರ ಅರಸಿಯೇ ಅವುಗಳು ವಲಸೆ ಬರುತ್ತವೆ. ಎಲ್ಲಿ ಮೀನು ಕಾಣಿಸುತ್ತದೋ, ಆಹಾರ ಸಿಗುವ ವಿಶ್ವಾಸ ಮೂಡುತ್ತದೋ ಅಲ್ಲೇ ಅವು ಹಲವು ದಿನ ಇರುತ್ತವೆ. ಹಾಗಾಗಿ ಸೀಗಲ್‌ಗಳು ಮತ್ಸ್ಯ ದಿಕ್ಸೂಚಕ ಎಂದೂ ಹೇಳಲಾಗುತ್ತದೆ ಎಂದು ಮೀನುಗಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT