ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವಳಿ– ಮಂಜುಗುಣಿ ಸೇತುವೆ ಕಾಮಗಾರಿ ಬೇಗ ಮುಗಿಸಲು ಸೂಚನೆ

Last Updated 24 ಮೇ 2022, 15:46 IST
ಅಕ್ಷರ ಗಾತ್ರ

ಗೋಕರ್ಣ: ಗಂಗಾವಳಿ- ಮಂಜುಗುಣಿ ಸೇತುವೆ ಕಾಮಗಾರಿ ಪ್ರಾರಂಭವಾಗಿ 4 ವರ್ಷ ಕಳೆದಿದೆ. 2021ರ ಮಾರ್ಚ್‌ನಲ್ಲಿಯೇ ಮುಗಿಯಬೇಕಾದ ಕಾಮಗಾರಿ ಇನ್ನೂ ಮುಗಿದಿಲ್ಲ. ಮಳೆಗಾಲ ಬಂದ ಕಾರಣ ನದಿಗೆ ಅಡ್ಡವಾಗಿ ಹಾಕಿದ ಮಣ್ಣನ್ನು ತೆಗೆಯದಿದ್ದರೆ ಎಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ. ಸೇತುವೆ ಕಾಮಗಾರಿ ತ್ವರಿತಗೊಳಿಸಿ, ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಆದೇಶಿಸಿದರು.

ಸ್ಥಳೀಯರ ಆಗ್ರಹದ ಮೇರೆಗೆ ಮಂಗಳವಾರ ಗಂಗಾವಳಿಗೆ ಭೇಟಿ ನೀಡಿ ಸೇತುವೆಯ ಕಾಮಗಾರಿಯನ್ನು ಪರೀಶೀಲಿಸಿ, ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

‘ಈ ಸೇತುವೆ ಎರಡೂ ತಾಲ್ಲೂಕಿಗೆ ಸಂಬಂಧಪಡುತ್ತದೆ. ಕಾಮಗಾರಿ ಗುತ್ತಿಗೆ ಪಡೆದ ಡಿ.ಆರ್. ನಾಯಕ್ ಕಂಪನಿಯ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಇನ್ನೂ ಶೇ 50 ರಷ್ಟು ಕಾಮಗಾರಿಯೂ ಮುಗಿದಿಲ್ಲ. ಈಗಾಗಲೇ ಗುತ್ತಿಗೆದಾರರಿಗೆ ನಾನು ಶಾಸಕನಾದ ಮೇಲೆ ₹20 ಕೋಟಿಗೂ ಹೆಚ್ಚು ಹಣ ಸಂದಾಯವಾಗಿದೆ. ಇನ್ನೂ ₹8 ಕೋಟಿ ಹಣ ಕೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗಿಳಿಸದೇ ಹಣ ಕೊಡುವುದು ಹೇಗೆ? ಗುತ್ತಿಗೆದಾರರು ಕೋವಿಡ್ ನೆಪ ಹೇಳುತ್ತಿದ್ದಾರೆ. ಕೋವಿಡ್ ಮುಗಿದರೂ ಕಾಮಗಾರಿ ತ್ವರಿತಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೆ. ಲೊಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ‘ಫೆಬ್ರುವರಿಯಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಉತ್ತರಿಸಿದ್ದರು. ಆದರೆ ಗುತ್ತಿಗೆದಾರರೇ ಕಾಮಗಾರಿ ನಿಧಾನವಾಗಿ ನಡೆಸಿದರೆ ಕಾಮಗಾರಿ ಪೂರ್ಣಗೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರ ಪರವಾಗಿ ಇದ್ದ ಮಲ್ಲಿಕಾರ್ಜುನ ಪಾಟೀಲ್, ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದರು.

ಸ್ಥಳೀಯರ ಅಸಮಾಧಾನ:

ಗುಣಪಟ್ಟದ ಕಾಮಗಾರಿ ನಡೆಯುತ್ತಿಲ್ಲ. ನುರಿತ ಕೆಲಸಗಾರರ ಕೊರತೆಯಿಂದ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಇವರಲ್ಲಿ ತಜ್ಞ ಎಂಜಿನಿಯರ್‌ಗಳೂ ಇಲ್ಲ. ಸೇತುವೆಯ ಕಾರ್ಯ ನಿರ್ವಹಿಸಲು ಸ್ಥಳೀಯರು, ಗುತ್ತಿಗೆದಾರರಿಗೆ ಉಚಿತವಾಗಿ ಸ್ಥಳ ನೀಡಿದ್ದಾರೆ. ಆದರೂ ಸ್ಥಳೀಯರಿಗೆ ಗೌರವ ಕೊಡುತ್ತಿಲ್ಲ. ಮಳೆಗಾಲ ಪ್ರಾರಂಭವಾದರೆ ಎಲ್ಲರ ಮನೆ, ಹೊಲ, ಗದ್ದೆಗೆ ನೀರು ತುಂಬುತ್ತದೆ’ ಎಂದು ಸೇತುವೆ ಕಾಮಗಾರಿಯ ಬಗ್ಗೆ ಸ್ಥಳೀಯರು ಶಾಸಕರಲ್ಲಿ ಸಮಸ್ಯೆ ಹೇಳಿದರು.

ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಶ್ರೀ ಅಂಕೋಲೆಕರ್, ಸದಸ್ಯರಾದ ರಾಜೇಶ ನಾಯಕ, ಚಂದ್ರಶೇಕರ ನಾಯ್ಕ, ನಾಗರಾಜ ತಾಂಡೇಲ್, ಬಿ.ಜೆ.ಪಿ ಪ್ರಮುಖರಾದ ಮಹೇಶ ಶೆಟ್ಟಿ, ಜಗದೀಶ ಅಂಬಿಗ, ಶೀನಿವಾಸ ನಾಯಕ, ಪಿ.ಎಸ್.ಐ ರವೀಂದ್ರ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT