ಸೋಮವಾರ, ಜೂನ್ 21, 2021
30 °C

ಹಳ್ಳಿಯಲ್ಲಿ ಕ್ವಾರೆಂಟೈನ್ ಕೇಂದ್ರ ತೆರೆಯಿರಿ: ಶಾಸಕಿ ರೂಪಾಲಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಸೋಂಕಿತರ ಮನೆಗಳಲ್ಲಿ ಜನರು ಹೆಚ್ಚಿದ್ದರೆ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸಾಧ್ಯವಾಗದು. ಅದಕ್ಕಾಗಿ ಸಮುದಾಯ ಭವನ, ಸಭಾಭವನ, ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಬೇಕು’ ಎಂದು ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ, ಕಂದಾಯ, ನಗರಸಭೆ, ಪೊಲೀಸ್‌ ಅಧಿಕಾರಿಗಳೊಂದಿಗೆ ನಗರದಲ್ಲಿ ಶುಕ್ರವಾರ ಸಂಜೆ ಕೋವಿಡ್‌ 19 ನಿರ್ವಹಣೆಯ ಸಮಾಲೋಚನಾ ಸಭೆ ನಡೆಸಿ ಅವರು ಸಲಹೆ, ಸೂಚನೆಗಳನ್ನು ನೀಡಿದರು.

ನಾಲ್ಕು ಆಂಬುಲೆನ್ಸ್ ಖರೀದಿ

‘ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ನಾಲ್ಕು ಆಂಬುಲೆನ್ಸ್‌ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ ಎರಡು ತುರ್ತು ಸಂದರ್ಭದಲ್ಲಿ ಅವಶ್ಯಕವಾಗಿರುವ ಎಲ್ಲ ಸೌಲಭ್ಯಗಳನ್ನು ಹೊಂದಿರಲಿವೆ. ಮತ್ತೆರಡಲ್ಲಿ ವೆಂಟಿಲೇಟರ್, ಆಮ್ಲಜನಕ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳು ಇರಲಿವೆ. 10 ದಿನಗಳಲ್ಲಿ ಕಾರವಾರ ತಾಲ್ಲೂಕಿಗೆ ಹಾಗೂ ಅಂಕೋಲಾ ತಾಲ್ಲೂಕಿಗೆ ತಲಾ ಎರಡು ಆಂಬುಲೆನ್ಸ್‌ಗಳು ಸೇವೆಗೆ ಲಭ್ಯವಾಗಲಿವೆ’ ಎಂದು ರೂಪಾಲಿ ನಾಯ್ಕ ತಿಳಿಸಿದರು.

‘ಕೋವಿಡ್ ಸೋಂಕಿತರು ಬೇಗ ಚೇತರಿಸಿಕೊಳ್ಳಲು ಚಿಕಿತ್ಸೆಯ ಜತೆಗೆ ಪೌಷ್ಟಿಕ ಆಹಾರದ ಅವಶ್ಯಕತೆಯಿದೆ. ಹಿಂದಿನ ಬಾರಿ ಸೋಂಕಿತರಿಗೆ ತಲಾ ₹ 250 ವೆಚ್ಚದಲ್ಲಿ ಸರ್ಕಾರದ ಅನುದಾನದಿಂದ ಊಟವನ್ನು ನೀಡಲಾಗುತ್ತಿತ್ತು. ಈ ಬಾರಿಯೂ ಅಷ್ಟೇ ವೆಚ್ಚದಲ್ಲಿ, ಕ್ಯಾಲ್ಸಿಯಂ, ಪ್ರೊಟೀನ್ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ’ ಎಂದರು.

‘ಆರೋಗ್ಯ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇಬ್ಬರು ಸಿಬ್ಬಂದಿಯಿರುವ ಸಹಾಯವಾಣಿಯನ್ನು ಆರಂಭಿಸಬೇಕು. ಲಭ್ಯ ಇರುವ ವೈದ್ಯರ ಹೆಸರನ್ನು ಹೆಲ್ಪ್ ಡೆಸ್ಕ್‌ನಲ್ಲಿ ಪ್ರಕಟಿಸಬೇಕು. ಸೋಂಕಿತರು ಯಾವ ವಾರ್ಡ್‌ನಲ್ಲಿ ಇದ್ದಾರೆ ಎಂಬ ಮಾಹಿತಿಯೂ ಇರಬೇಕು. ಸೋಂಕಿತರಿಗೆ ಹಾಗೂ ಇನ್ನಿತರ ಚಿಕಿತ್ಸೆಗಳ ಮಾಹಿತಿಗಳನ್ನು ನೀಡಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಸೂಚಿಸಿದರು.

‘ಸಾರ್ವಜನಿಕರ ಅನಗತ್ಯ ಓಡಾಟವನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಲಾಕ್‌ಡೌನ್‌ ಇದೆ ಎಂದು ದೌರ್ಜನ್ಯ ಮಾಡಬಾರದು. ಅಧಿಕಾರಿಗಳೂ ಸಹ ತಮ್ಮ ಆರೋಗ್ಯದ ಕಾಳಜಿವಹಿಸಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಅನುಚಿತ ವರ್ತನೆ ಸರಿಯಲ್ಲ

ನಗರದ ಮಾರುಕಟ್ಟೆಯಲ್ಲಿ ನಗರಸಭೆ ಸಿಬ್ಬಂದಿ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಕರ್ಪ್ಯೂ ಕಾರಣಕ್ಕೆ ಬಡವರ ಮೇಲೆ, ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಬಾರದು. ಜನರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು’ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ತಹಸೀಲ್ದಾರ್ ಆರ್.ವಿ.ಕಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರದ ನಾಯಕ, ಆರ್.ಎಂ.ಒ ಡಾ.ವೆಂಕಟೇಶ್, ಡಿ.ವೈ.ಎಸ್ಪಿ ಅರವಿಂದ ಕಲಗುಜ್ಜಿ, ನಗರಸಭೆ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ, ಸಿ.ಪಿ.ಐ ಸಂತೋಷ ಶೆಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು