ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕ್ಕೆ ಸ್ಪಂದಿಸದವರು ಜನಪ್ರತಿನಿಧಿಗಳೇ ಅಲ್ಲ: ಆರ್.ವಿ.ದೇಶಪಾಂಡೆ

ನೆರೆ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ.ದೇಶಪಾಂಡೆ ಟೀಕೆ
Last Updated 1 ಆಗಸ್ಟ್ 2021, 14:15 IST
ಅಕ್ಷರ ಗಾತ್ರ

ಶಿರಸಿ: ನೆರೆ ಹಾವಳಿಯಿಂದ ಜನರು ಸಂಕಷ್ಟಕ್ಕೆ ತುತ್ತಾಗಿದ್ದು ಈ ಸಂದರ್ಭದಲ್ಲಿ ಅವರಿಗೆ ನೆರವಾಗಬೇಕಿದ್ದ ಜನಪ್ರತಿನಿಧಿಗಳು ದೂರ ಉಳಿದಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ನೆರೆಗೆ ಕೊಚ್ಚಿ ಹೋದ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆ ತೂಗುಸೇತುವೆಯನ್ನು ಭಾನುವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ನೆರೆ ಹಾನಿ ಸಮೀಕ್ಷೆಗೆ ಹದಿನೈದು ದಿನ ಕಳೆದರೂ ಅಧಿಕಾರಿಗಳು ಭೇಟಿ ನೀಡಿಲ್ಲ ಎಂಬ ದೂರುಗಳಿವೆ. ಇಂತಹ ನಿರ್ಲಕ್ಷ್ಯ ಸರಿಯಲ್ಲ. ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇದು ನಿದರ್ಶನ’ ಎಂದರು.

‘ನೆರೆಯಿಂದ ಬಾಧಿತವಾದ ಪ್ರದೇಶಗಳ ಜನರಿಗೆ ಅಗತ್ಯ ಪರಿಹಾರ ಒದಗಿಸಬೇಕು. ಹಾನಿಗೀಡಾದ ಮನೆ, ಕೃಷಿ ಜಮೀನು, ಬೆಳೆಗಳಿಗೆ ವಿಶೇಷ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘2019ರಲ್ಲಿ ಉಂಟಾಗಿದ್ದ ಪ್ರವಾಹದ ವೇಳೆ ಆಸ್ತಿ ಕಳೆದುಕೊಂಡವರಿಗೆ ಈವರೆಗೆ ಪೂರ್ಣ ಪ್ರಮಾಣದ ಪರಿಹಾರ ನೀಡಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನಗಳು ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಶಾಸಕನಾಗುವ ಆಕಾಂಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಯಾವ ಕಾಲಕ್ಕೆ ಅದನ್ನು ಹೊಂದಬೇಕು ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡಿರಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಪದೇ ಪದೇ ವ್ಯಕ್ತಪಡಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.

‘ಹಳಿಯಾಳ ಕ್ಷೇತ್ರದಲ್ಲಿ ಗೆಲುವು ಸುಲಭ ಎಂದು ಭಾವಿಸಿರಬಹುದು. ಹೀಗಾಗಿ ಸ್ಪರ್ಧಿಯಾಗಲು ಹಲವರಲ್ಲಿ ಉತ್ಸಾಹ, ಆಸೆ ಇರಬಹುದು. ಅವೆಲ್ಲ ತಪ್ಪಲ್ಲ. ಆದರೆ ಚುನಾವಣೆಗೆ ಇನ್ನೂ ಎರಡೂವರೆ ಮೂರು ವರ್ಷ ಇದೆ. ಅದು ಸರಿಯೋ ತಪ್ಪೊ ಎಂಬುದು ಹೇಳಿಕೆ ನೀಡುವವರಿಗೂ ತಿಳಿದಿದೆ’ ಎಂದರು.

‘ಜನ ಕಷ್ಟದಲ್ಲಿದ್ದಾಗ ಬಾರದೆ, ಚುನಾವಣೆ ವೇಳೆ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಬರುವವರ ಬಗ್ಗೆ ಮತದಾರರು ಎಚ್ಚರಿಕೆಯಿಂದಿರಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪರೋಕ್ಷವಾಗಿ ದೇಶಪಾಂಡೆ ಟೀಕಿಸಿದರು.

ನೆರೆಯಿಂದ ಮೃತಪಟ್ಟಿದ್ದ ಹುಸರಿ ಗ್ರಾಮದ ಗಂಗಾಧರ ಗೌಡ ಮನೆಗೆ ಭೇಟಿ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಕೆಪಿಸಿಸಿ ಶಿರಸಿ–ಸಿದ್ದಾಪುರ ಉಸ್ತುವಾರಿ ಸುಷ್ಮಾ ರಾಜಗೋಪಾಲ, ಪ್ರಮುಖರಾದ ರವೀಂದ್ರ ನಾಯ್ಕ, ನಾಗರಾಜ ನಾರ್ವೇಕರ, ದೀಪಕ ದೊಡ್ಡೂರು, ಬಸವರಾಜ ದೊಡ್ಮನಿ, ಕುಮಾರ ಜೋಶಿ, ಶ್ರೀಪಾದ ಹೆಗಡೆ, ಗೀತಾ ಭೋವಿ, ಸುಮಾ ಉಗ್ರಾಣಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT