ಸೋಮವಾರ, ಆಗಸ್ಟ್ 8, 2022
22 °C
ಹಬ್ಬಗಳ ಸಂದರ್ಭದಲ್ಲಿ ಹಣಕ್ಕಾಗಿ ಪ್ರಾಣಿ ಹತ್ಯೆ: ಹೆಚ್ಚು ಪ್ರಕರಣ ದಾಖಲು

ಶಿರಸಿ ಸುತ್ತ ಹೆಚ್ಚಿದ ವನ್ಯಜೀವಿ ಬೇಟೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಾಡುಪ್ರಾಣಿಗಳ ಹತ್ಯೆ ಪ್ರಕರಣ ಇತ್ತೀಚೆಗೆ ಅಧಿಕವಾಗತೊಡಗಿದೆ. ಹಬ್ಬ ಹರಿದಿನಗಳು ಸಮೀಪಿಸಿದ ವೇಳೆಯೇ ಆದಾಯ ಸಂಗ್ರಹಕ್ಕೆ ಈ ಕೃತ್ಯಗಳು ನಡೆಯುತ್ತಿದೆ ಎಂಬ ಸಂಶಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಮಲೆನಾಡು, ಅರೆಮಲೆನಾಡು ಪ್ರದೇಶವನ್ನೊಳಗೊಂಡ ಶಿರಸಿ ಅರಣ್ಯ ವಿಭಾಗದಲ್ಲಿ ಕಾಡುಕೋಣ, ಕಡವೆ, ಬರ್ಕ ಮುಂತಾದ ಪ್ರಾಣಿಗಳಿವೆ. ಈ ವಿಭಾಗದಲ್ಲಿ ಎರಡು ವರ್ಷಗಳ ಅವಧಿಯಲ್ಲಿ 243 ಅರಣ್ಯ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಇವುಗಳಲ್ಲಿ 16 ಪ್ರಕರಣಗಳು ವನ್ಯಜೀವಿ ಹತ್ಯೆಗೆ ಸಂಬಂಧಿಸಿದಿವೆ. ಎರಡು ವರ್ಷಗಳ ಅವಧಿಯಲ್ಲಿ ಕಾಡುಕೋಣ, ಮುಳ್ಳುಹಂದಿ, ಕಡವೆ, ಬರ್ಕ, ಚಿಪ್ಪುಹಂದಿಗಳ ಬೇಟೆ ನಡೆದಿದೆ.

‘ವನ್ಯ ಪ್ರಾಣಿಗಳು ಕಾಡಂಚಿನಲ್ಲಿರುವ ಗದ್ದೆ, ತೋಟಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತವೆ. ಇವುಗಳ ನಿಯಂತ್ರಣಕ್ಕಾಗಿ ಕೆಲವು ರೈತರು ಬೇಟೆಗಾರರಿಗೆ ಮಾಹಿತಿ ನೀಡುತ್ತಾರೆ. ಪ್ರಾಣಿಗಳ ಸಂಚಾರ ಮಾರ್ಗದ ಜಾಡು ಹಿಡಿದು ರಾತ್ರಿ ಹೊತ್ತು ಬೇಟೆ ನಡೆಯುತ್ತದೆ. ಇತ್ತೀಚೆಗೆ ಇದು ಅತಿಯಾಗಿದೆ’ ಎಂದು ರೈತ ಸುಧಾಕರ ನಾಯ್ಕ ಹೇಳುತ್ತಾರೆ.

‘ಬೇಟೆಗಾರರ ಮೇಲಷ್ಟೇ ಅಲ್ಲದೆ ಪ್ರಾಣಿಗಳ ಜಾಡಿನ ಕುರಿತು ಮಾಹಿತಿ ನೀಡುವವರ ಮೇಲೂ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ. ಲಾಕ್‌ಡೌನ್ ಸಮಯದಲ್ಲಿ ಕೂಡ ಕೆಲವೆಡೆ ಚಿಪ್ಪುಹಂದಿ, ಕಾನಕುರಿಗಳ ಬೇಟೆ ನಡೆದಿದ್ದು, ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಪ್ರತಿಕ್ರಿಯಿಸಿದರು.

‘ಬೇಟೆಗೆ ಆಸ್ಪದ ನೀಡದಂತೆ ಗ್ರಾಮೀಣ ಭಾಗದಲ್ಲಿ ಗಸ್ತು ಹೆಚ್ಚಿಸಿದ್ದೇವೆ. ಆದರೂ ಕೆಲವು ಪ್ರಕರಣಗಳು ನಡೆದಿವೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ.

‘ಪ್ರಾಣಿ ಬೇಟೆಯಾಡಿ ಅವುಗಳ ಅವಯವಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡಮಟ್ಟದ ಜಾಲ ಸ್ಥಳೀಯವಾಗಿಲ್ಲ. ಆದರೆ, ಮಾಂಸದ ಆಸೆಗೆ ಮತ್ತು ಬೆಳೆಗಳ ರಕ್ಷಣೆ ಕಾರಣವೊಡ್ಡಿ ಬೇಟೆಯಾಡಲಾಗುತ್ತದೆ. ಹಬ್ಬ, ಜಾತ್ರೆಗಳ ಸಮೀಪಿಸಿದ ವೇಳೆ ಇದು ಹೆಚ್ಚುತ್ತಿದೆ’ ಎಂದು ತಿಳಿಸಿದರು.

‘ಕಾಡುಪ್ರಾಣಿಗಳ ಹತ್ಯೆಗೈದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗೆ ದಾಖಲಾದ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಕಠಿಣ ಕ್ರಮವಾದಾಗ ತಪ್ಪು ಮಾಡುವವರಲ್ಲಿ ಭಯ ಹುಟ್ಟಿದಂತಾಗುತ್ತದೆ’ ಎಂದು ತಿಳಿಸಿದರು.

ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರ: ‘ಕೃಷಿ ಭೂಮಿಗೆ ಕಾಡುಪ್ರಾಣಿಗಳು ಲಗ್ಗೆ ಇಟ್ಟು ಹಾಳು ಮಾಡುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿರುವುದು ನಿಜ. ಇದನ್ನೇ ನೆಪವಾಗಿಟ್ಟು ಪ್ರಾಣಿಗಳನ್ನು ಕೊಲ್ಲುವುದು ಅಪರಾಧವಾಗುತ್ತದೆ. ಬೆಳೆ ಹಾನಿಯಾದರೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅರ್ಜಿ ಸಲ್ಲಿಸಿದರೆ ಸೂಕ್ತ ಪರಿಹಾರವನ್ನೂ ನೀಡುತ್ತೇವೆ. 2019–20ನೇ ಸಾಲಿನಲ್ಲಿ 184 ಪ್ರಕರಣಕ್ಕೆ ₹ 9.50 ಲಕ್ಷ ಹಾಗೂ 2020–21ರಲ್ಲಿ 284 ಪ್ರಕರಣಗಳಿಗೆ ₹14.49 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮಾಹಿತಿ ನೀಡಿದರು.

ಕಾಡುಪ್ರಾಣಿ ಬೇಟೆ: 2019–20

* ಅರಣ್ಯ ಕಾಯ್ದೆ ಉಲ್ಲಂಘನೆ ಪ್ರಕರಣ- 165

* ವನ್ಯಜೀವಿ ಹತ್ಯೆ ಪ್ರಕರಣ- 8

* ಬಂಧಿತರ ಸಂಖ್ಯೆ- 171

 

ಕಾಡುಪ್ರಾಣಿ ಬೇಟೆ: 2020–21

* ಅರಣ್ಯ ಕಾಯ್ದೆ ಉಲ್ಲಂಘನೆ ಪ್ರಕರಣ- 78

* ವನ್ಯಜೀವಿ ಹತ್ಯೆ ಪ್ರಕರಣ- 8

* ಬಂಧಿತರ ಸಂಖ್ಯೆ- 124

(ಮಾಹಿತಿ: ಅರಣ್ಯ ಇಲಾಖೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು