ಶುಕ್ರವಾರ, ಜುಲೈ 30, 2021
25 °C
ಹೆಸ್ಕಾಂ ಅಧಿಕಾರಿಗಳ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ

‘ವರದಿಗೂ ಕೆಲಸಕ್ಕೂ ಹೊಂದಾಣಿಕೆ ಇರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸೌಭಾಗ್ಯ’ ಯೋಜನೆಯ ಫಲಾನುಭವಿಗಳ ಸಂಖ್ಯೆ ಬಗ್ಗೆ ಹೆಸ್ಕಾಂ ನೀಡಿದ ವರದಿ ಸಮರ್ಪಕವಾಗಿಲ್ಲ. ಅಧಿಕಾರಿಗಳು ಕೊಡುವ ಮಾಹಿತಿಗೂ ವರದಿಗೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

‘ಯೋಜನೆಯಡಿ ಈ ಮೊದಲು ನಮೂದಿಸಿದ ಸಂಖ್ಯೆಗೂ ಈಗ ನೀಡುತ್ತಿರುವುದಕ್ಕೂ ಬಹಳ ಅಂತರವಿದೆ. ಫಲಾನುಭವಿಗಳ ಬಗ್ಗೆ ಸಮೀಕ್ಷೆ ಮಾಡಿದ ಮಾಹಿತಿಯನ್ನು ಪದೇಪದೇ ಬದಲಿಸುವುದು ಯಾಕೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ನೀಡಿದ ಸಮಜಾಯಿಷಿಯಿಂದ ಅವರು ಸಮಾಧಾನಗೊಳ್ಳಲಿಲ್ಲ. ‘ಬಿ.ಎಸ್.ಎನ್.ಎಲ್ ಮಾದರಿಯಲ್ಲೇ ವಿದ್ಯುತ್ ವಲಯವನ್ನೂ ಸರ್ಕಾರ ಖಾಸಗೀಕರಣ ಮಾಡಿದರೆ ಅಚ್ಚರಿಯಿಲ್ಲ. ನಮಗೂ ಸಂವಿಧಾನ ಗೊತ್ತಿದೆ. ಕೆಲಸ ಮಾಡಿದರೆ ಉಳಿಯುತ್ತೀರಿ, ಇಲ್ಲದಿದ್ದರೆ ಒಂದೇ ಸಹಿಯಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸಬೇಕಾಗುತ್ತದೆ. ವರದಿ ಮತ್ತು ಕೆಲಸದಲ್ಲಿ ಸಂಯೋಜನೆ ಇರಲಿ’ ಎಂದು ಎಚ್ಚರಿಕೆ ನೀಡಿದರು. 

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದೆ. ಅಲ್ಲದೇ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಲಾಕ್‌ಡೌನ್ ಕಾರಣದಿಂದ ಹಲವರು ಮನೆಗಳಿಂದಲೇ ಕೆಲಸ ಮುಂದುವರಿಸಿದ್ದಾರೆ. ವಿದ್ಯುತ್ ಇಲ್ಲದಿದ್ದರೆ ಅವರಿಂದಲೂ ಸಾಕಷ್ಟು ದೂರುಗಳು ಬರುತ್ತವೆ. ಆದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪವೂ ಲೋಪವಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು. 

‘ಎಚ್1ಎನ್1, ಡೆಂಗಿ, ಮಲೇರಿಯಾದಂಥ ಆರೋಗ್ಯ ಸಮಸ್ಯೆಗಳು ಕರಾವಳಿಯಲ್ಲೇ ಯಾಕೆ ಹೆಚ್ಚು ದಾಖಲಾಗುತ್ತಿವೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಅನಂತಕುಮಾರ ಹೆಗಡೆ ಪ್ರಶ್ನಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ್ ರಾವ್ ಮಾತನಾಡಿ, ‘ಕರಾವಳಿಯ ತೋಟಗಳಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದ ಅಡಿಕೆ ಹಾಳೆಗಳನ್ನು ವಿಲೇವಾರಿ ಮಾಡದೇ ಬಿಡಲಾಗುತ್ತಿದೆ. ಅದರಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚುತ್ತಿವೆ. ಇದಕ್ಕಾಗಿ ತೋಟಗಳಿಗೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ’ ಎಂದರು.

‘ಸಂತ್ರಸ್ತರಿಗೇ ಕೊಡಿ’: ಕಾರವಾರ, ಅಂಕೋಲಾ, ಕುಮಟಾ ತಾಲ್ಲೂಕುಗಳಲ್ಲಿ ನೆರೆ ಪೀಡಿತರಿಗೆ ಗುಂಪು ಮನೆಗಳ ನಿರ್ಮಾಣಕ್ಕೆ ಗುರುತಿಸಿದ ಜಮೀನನ್ನು ಅದೇ ಉದ್ದೇಶಕ್ಕೆ ನೀಡಬೇಕು. ಬೇರೆ ವಸತಿ ಯೋಜನೆಗಳಡಿ ವಿಲೇವಾರಿ ಮಾಡಿದರೆ ಸರ್ಕಾರಿ ಜಮೀನು ಉಳಿಯುವುದೇ ಇಲ್ಲ ಎಂದು ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

‘ಆಯುಷ್ಮಾನ್ ಭಾರತ’ ಯೋಜನೆಯಡಿ ಚೀಟಿಗಳನ್ನು ಸಮಯಕ್ಕೆ ಸರಿಯಾಗಿ ಕೊಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಇದೇವೇಳೆ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದರು.

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ‘ಕೊರೊನಾ ಯೋಧ’ರಿಗೆ ಇದೇವೇಳೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕರಾದ ರೂಪಾಲಿ ನಾಯ್ಕ, ಸುನೀಲ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು