ಮೀನು ಕೃಷಿಯಲ್ಲಿ ತಜ್ಞರ ಸಲಹೆ ಪಾಲಿಸಿ

ಕಾರವಾರ: ‘ವಿಜ್ಞಾನಿಗಳು, ತಜ್ಞರು ಹೇಳಿದ ಮಾದರಿಯಲ್ಲಿ ಯುವ ಮೀನುಗಾರರು ಯೋಜನೆ ರೂಪಿಸಿಕೊಂಡು ಪಂಜರದಲ್ಲಿ ಮೀನು ಕೃಷಿ ಮಾಡಬೇಕು. ಒಂದೇ ಪಂಜರದಲ್ಲಿ ಮೂರು ಸಾವಿರಗಳಷ್ಟು ಮರಿಗಳನ್ನು ಸಾಕಿದರೆ ಪ್ರಯೋಜನವಿಲ್ಲ’ ಎಂದು ಸಮುದ್ರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಸಹಾಯಕ ನಿರ್ದೇಶಕ ವಿಜಯಕುಮಾರ್ ಯರಗಲ್ ಹೇಳಿದರು.
ನಗರದ ಅಲಿಗದ್ದಾದಲ್ಲಿರುವ ಕೇಂದ್ರೀಯ ಸಮುದ್ರ ಅಧ್ಯಯನ ಸಂಸ್ಥೆಯಲ್ಲಿ (ಸಿಎಂಎಫ್ಆರ್‌ಐ) ಬುಧವಾರ ಹಮ್ಮಿಕೊಳ್ಳಲಾದ ‘ರಾಷ್ಟ್ರೀಯ ಮೀನು ಕೃಷಿಕರ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಿಎಂಎಫ್ಆರ್‌ಐನ ವಿಜ್ಞಾನಿಗಳು ಹೇಳುವಷ್ಟೇ ಮೀನಿನ ಮರಿಗಳನ್ನು ಪಂಜರಗಳಲ್ಲಿ ಬಿಡಬೇಕು. ಒಂದುವೇಳೆ ಕಾಯಿಲೆಯಿಂದ ಅವು ಸತ್ತರೆ ತಕ್ಷಣ ಮಾಹಿತಿ ಕೊಡಿ. ಇದನ್ನು ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುತ್ತಾರೆ. ಮೀನುಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇರುವ ಕಾರಣ ಸಂಶೋಧನೆಗೆ ತುಂಬ ಬೆಲೆಯಿದೆ’ ಎಂದು ವಿವರಿಸಿದರು.
‘ಕಾರವಾರವೂ ಸೇರಿದಂತೆ ವಿವಿಧೆಡೆ ಮೀನು ಸಾಕಲು ಮಾಡಿದ ಹೊಂಡಗಳು ಖಾಲಿ ಇರುವುದನ್ನು ಗಮನಿಸಿದ್ದೇನೆ. ಸಿಗಡಿ ಅಥವಾ ಇನ್ಯಾವುದಾದರೂ ಹೊಸ ತಳಿಯ ಮೀನುಗಳನ್ನು ಸಾಕಣೆ ಮಾಡಿ. ಈಗ ಕೋಳಿ ಮಾಂಸಕ್ಕಿಂತ ಮೀನಿನಿಂದ ತಯಾರಿಸಿದ ಖಾದ್ಯಗಳಿಗೆ ಹೆಚ್ಚು ಬೇಡಿಕೆಯಿದೆ. ಮೀನಿನಲ್ಲಿ ಇರುವಷ್ಟು ಪೌಷ್ಟಿಕಾಂಶ ಮತ್ಯಾವುದರಲ್ಲೂ ಇಲ್ಲ’ ಹೇಳಿದರು.
ಮತ್ಸ್ಯ ಮೇಳ ಆಯೋಜಿಸಿ: ‘ಮೀನುಗಾರರು ಮುಂದಿನ ವರ್ಷ ಮೀನು ಕೃಷಿಕರ ದಿನಾಚರಣೆಯ ದಿನ ಕಾರವಾರದಲ್ಲಿ ‘ಮತ್ಸ್ಯ ಮೇಳ’ ಆಯೋಜಿಸಿ. ಕುರ್ಡೆ, ಸಿಗಡಿ ಮೀನುಗಳಿಗೆ ತುಂಬ ಬೇಡಿಕೆಯಿದೆ. ಇಲ್ಲಿನ ಸಮುದ್ರ ಉತ್ಪನ್ನಗಳಿಗೆ ಮತ್ತಷ್ಟು ಮಾರುಕಟ್ಟೆ ಒದಗಿಸಿಕೊಳ್ಳಲು ಇದರಿಂದ ಅನುಕೂಲವಾಗಬಹುದು’ ಎಂದು ವಿಜಯಕುಮಾರ್ ಯರಗಲ್ ಸಲಹೆ ನೀಡಿದರು.
ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ ಶೆಟ್ಟಿ ಮಾತನಾಡಿ, ‘ಇಲಾಖೆಯಲ್ಲಿ 326 ಟ್ರಾಲ್ ದೋಣಿಗಳು ನೋಂದಣಿ ಆಗಿವೆ. 30 ಎಂ.ಎಂ ಅಳತೆಯ ಬಲೆಗಳನ್ನು ಉಚಿತವಾಗಿ ಪಡೆಯಲು ಕೇವಲ 60 ಅರ್ಜಿಗಳು ಸಲ್ಲಿಕೆಯಾಗಿವೆ. ಸೌಲಭ್ಯಗಳನ್ನು ಪಡೆದುಕೊಳ್ಳಲು ಮೀನುಗಾರರು ಯಾಕೆ ಮುಂದೆ ಬರುತ್ತಿಲ್ಲ ಎಂದು ತಿಳಿಯುತ್ತಿಲ್ಲ’ ಎಂದು ಬೇಸರಿಸಿದರು.
ಪುರಸ್ಕಾರ: ಮೀನು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಮೀನುಗಾರರನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು. ಸುಪ್ರಿಯಾ ಸಾರಂಗ, ವಿನಾಯಕ ಕನ್ನಾ ಹರಿಕಾಂತ, ಗಿರಿಜಾ ಹರಿಕಂತ್ರ, ಲಿಂಗಯ್ಯ ಮೊಗೇರ, ಭೂದೇವಿ ಹರಿಕಾಂತ, ಜಗದೀಪ, ಕೋಡಿಬೀರ ಯೂಥ್ ಕ್ಲಬ್, ಭಗತ್ ಮತ್ತು ತಂಡದವರಿಗೆ ಸ್ಮರಣಿಕೆ ಪ್ರದಾನ ಮಾಡಲಾಯಿತು.
ಸಿಎಂಎಫ್ಆರ್‌ಐನ ಕಾರವಾರ ಘಟಕದ ಮುಖ್ಯ ವಿಜ್ಞಾನಿ ಡಾ.ಜಯಶ್ರೀ ಲೋಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಜ್ಞಾನಿ ಡಾ.ಸುರೇಶಬಾಬು ಪಿ.ಪಿ ವಂದಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಮೀನುಗಾರರು ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.