ಶುಕ್ರವಾರ, ಜನವರಿ 28, 2022
25 °C
ಕಾರವಾರ: ಡಿ.24ರೊಳಗೆ ವರದಿ ಸಲ್ಲಿಸಲು ಸೂಚನೆ

ಸಿ.ಆರ್‌ಝೆಡ್ ನಿಯಮ ಉಲ್ಲಂಘನೆ ಪರಿಶೀಲನೆಗೆ ಸಮಿತಿ ರಚಿಸಲು ಎನ್‌ಜಿಟಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝೆಡ್) ನಿಯಮಗಳನ್ನು ಉಲ್ಲಂಘಿಸಿ ನಗರದ ಕಡಲತೀರಗಳಲ್ಲಿ ನಿರ್ಮಾಣ ಕಾಮಗಾರಿ ಮಾಡಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ) ಮುಂದಾಗಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಆದೇಶಿಸಿದೆ.

ನಿಯಮದ ಉಲ್ಲಂಘನೆಯಾಗಿದೆ ಎನ್ನಲಾದ ಸ್ಥಳಗಳಿಗೆ ತಂಡದ ಸದಸ್ಯರು ಭೇಟಿ ನೀಡಿ ವರದಿ ಸಿದ್ಧಪಡಿಸಬೇಕು. ಡಿ.24ರ ಒಳಗಾಗಿ ವರದಿ ಸಲ್ಲಿಸಬೇಕು ಎಂದು ನ್ಯಾಯಮಂಡಳಿಯು ಸೂಚಿಸಿದೆ. ಕರಾವಳಿ ತೀರ ಮತ್ತು ಕಾಳಿ ನದಿಯ ಸುತ್ತಮುತ್ತ ಸಿ.ಆರ್.ಝೆಡ್. ನಿಯಮಗಳನ್ನು ಉಲ್ಲಂಘಿಸಿ ಶಾಶ್ವತ ಕಾಮಗಾರಿಗಳನ್ನು ಮಾಡಲಾಗಿದೆ. ಕರಾವಳಿ ವಲಯ ನಿರ್ವಹಣಾ ಯೋಜನೆಯ (ಸಿ.ಝೆಡ್.ಎಂ.ಪಿ) ಕರಡು ಪ್ರತಿಯನ್ನು ಹಿಂಪಡೆಯಬೇಕು. ಕರಾವಳಿಯಲ್ಲಿ ಬಂದರು ಮಿತಿಯನ್ನು ವಿಸ್ತರಿಸುವ ಅಧಿಸೂಚನೆಯನ್ನು ರದ್ದು ಮಾಡಬೇಕು ಎಂದು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಕೆಯಾಗಿತ್ತು. ಕಾರವಾರದವರಾದ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ವಿದ್ಯಾಧರ ದುರ್ಗೇಕರ್ ಈ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮಂಡಳಿಯ ಪೀಠವು, ವಾಸ್ತವ ಸಂಗತಿ ತಿಳಿದುಕೊಳ್ಳಲು ಸಮಿತಿ ರಚಿಸಿದೆ. ಇದೇವೇಳೆ, ಸಿ.ಝೆಡ್.ಎಂ.ಪಿ ಕರಡು 2016ರಲ್ಲಿ ಸಿದ್ಧವಾಗಿದ್ದು, ಐದು ವರ್ಷಗಳ ನಂತರ ಅದನ್ನು ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲಾಗದು. ಅಧಿಸೂಚನೆಯನ್ನು ಅಂತಿಮಗೊಳಿಸುವಾಗ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಆಕ್ಷೇಪಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದೆ.

ಸಿ.ಆರ್.ಝೆಡ್ ನಿಯಮ ಉಲ್ಲಂಘನೆಯ ದೂರಿನ ಬಗ್ಗೆ ಪರಿಶೀಲಿಸಲು ರಚಿಸಲಾಗಿರುವ ಸಮಿತಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ, ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಅಧಿಕಾರಿಗಳಿದ್ದಾರೆ.

ಅವರು ಸಲ್ಲಿಸಲಿರುವ ವರದಿಯು ಸಾಗರಮಾಲಾ ಯೋಜನೆಯಡಿ ಕಾರವಾರ ಬಂದರಿನ ವಿಸ್ತರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

‘ನಿಯಮ ಉಲ್ಲಂಘನೆಯ ದೂರು’:

‘ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಅಹವಾಲು ಸಭೆಗಳನ್ನು ಕಾಮಗಾರಿಯ ಸ್ಥಳದಲ್ಲೇ ಮಾಡಬೇಕು ಎಂದು ನಿಯಮವಿದೆ. ಆದರೆ, ಸಿ.ಝೆಡ್.ಎಂ.ಪಿ ಬಗ್ಗೆ ಸೆ.15ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಯಿತು. ಇದನ್ನು ನಾನು ಪ್ರಶ್ನಿಸಿದ್ದೇನೆ’ ಎಂದು ಅರ್ಜಿದಾರ ವಿದ್ಯಾಧರ ದುರ್ಗೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಅಹವಾಲು ಸಭೆಗಳನ್ನು ಹಮ್ಮಿಕೊಳ್ಳುವ ಮೊದಲು ಜನರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದೂ ನಿಯಮವಿದೆ. ಆದರೆ, ಇಲ್ಲಿ ಹಾಗೆ ನಡೆದುಕೊಂಡಿಲ್ಲ. ಈ ಎಲ್ಲವನ್ನೂ ದೂರಿನಲ್ಲಿ ವಿವರಿಸಿದ್ದೇನೆ’ ಎಂದು ಹೇಳಿದರು.

‘ಸಿ.ಆರ್.ಝೆಡ್‌.ನ ಮೊದಲ ಅಧಿಸೂಚನೆಯು 1991ರಲ್ಲಿ ಬಂತು. ಅದರ ನಂತರ, ಜೀವನೋಪಾಯಕ್ಕಾಗಿ ನಿರ್ಮಿಸುವ ಸಣ್ಣ ಕಾಮಗಾರಿಗಳನ್ನು ಹೊರತುಪಡಿಸಿ ನಿರ್ಮಾಣವಾದ ಕಟ್ಟಡಗಳೆಲ್ಲವೂ ಕಾನೂನು ಬಾಹಿರವಾಗುತ್ತವೆ. ಈಗ ಅರ್ಧ ನ್ಯಾಯ ಸಿಕ್ಕಿದ್ದು, ಇನ್ನರ್ಧ ಸಿಗಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು