ಶುಕ್ರವಾರ, ಜನವರಿ 22, 2021
24 °C
ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ: ಕಾರವಾರ ಡಿಪೊದಲ್ಲೇ ನಿಂತ ಬಸ್‌ಗಳು

ಎರಡನೇ ದಿನ ಸಂಚಾರ ಸಂಪೂರ್ಣ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ನಡೆಸುತ್ತಿರುವ ಮುಷ್ಕರವು, ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ನಗರದ ಡಿಪೊದಿಂದ ಒಂದೂ ಬಸ್‌ ಸಂಚರಿಸದ ಕಾರಣ ನಿಲ್ದಾಣ ಖಾಲಿಯಾಗಿತ್ತು.

ಮುಷ್ಕರದ ಮೊದಲ ದಿನವಾದ ಶುಕ್ರವಾರ ಕಾರವಾರದಿಂದ ಕೆಲವು ಬಸ್‌ಗಳು ಸಂಚರಿಸಿದ್ದವು. ಸಿಬ್ಬಂದಿ ಬಸ್ ನಿಲ್ದಾಣದ ಆವರಣದಲ್ಲಿ ಧರಣಿ ಕುಳಿತು, ಘೋಷಣೆ ಕೂಗಿದ್ದರು. ಆದರೆ, ತಮ್ಮ ಬೇಡಿಕೆಗೆ ಬಗ್ಗೆ ಸಾರಿಗೆ ಇಲಾಖೆಯಿಂದ ಪ್ರತಿಕ್ರಿಯೆ ಸಿಗದ ಕಾರಣ ಶನಿವಾರ ಮುಷ್ಕರವನ್ನು ತೀವ್ರಗೊಳಿಸಿದರು.

ಶುಕ್ರವಾರ ಕೆಲವು ಬಸ್‌ಗಳು ಸಂಚರಿಸಿದ್ದರಿಂದ ಶನಿವಾರ ಎಲ್ಲವೂ ಸರಿ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ಹತ್ತಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಬೆಳಿಗ್ಗೆಯಿಂದಲೇ ತಾಸುಗಟ್ಟಲೆ ಕಾದು ಕುಳಿತಿದ್ದರೂ ಒಂದೂ ಬಸ್ ಬರಲಿಲ್ಲ. ಅಂಕೋಲಾದಂತಹ ಊರುಗಳಿಗೆ ಪ್ರಯಾಣಿಸುವವರು ಟೆಂಪೊಗಳತ್ತ ಹೆಜ್ಜೆ ಹಾಕಿದರು. ಆದರೆ, ದೂರದ ಊರುಗಳಿಗೆ ಹೋಗಬೇಕಾದವರು ಸುಸ್ತಾದರು.

‘ಬಸ್ ಸಿಬ್ಬಂದಿಯ ಮುಷ್ಕರದ ಮಾಹಿತಿಯಿತ್ತು. ಆದರೆ, ನಾನು ಊರಿಗೆ ತೆರಳಲೇಬೇಕಾದ ಅನಿವಾರ್ಯತೆ ಇತ್ತು. ಟೆಂಪೊದಲ್ಲಿ ಹೋದರೂ ಅಲ್ಲಿಂದ ಮುಂದೆ ಹೋಗಲು ಬಸ್‌ಗಳಿಲ್ಲದೆ ಸಮಸ್ಯೆಯಾಗಿದೆ. ಈ ಮುಷ್ಕರ ಆದಷ್ಟು ಬೇಗ ಮುಕ್ತಾಯವಾದರೆ ಅನುಕೂಲವಾಗುತ್ತದೆ’ ಎಂದು ಹಿರಿಯ ಪ್ರಯಾಣಿಕ, ಭಟ್ಕಳದ ರಾಮಚಂದ್ರ ನಾಯ್ಕ ಹೇಳಿದರು.

ಪ್ರಯಾಣಿಕರಿಗೆ ಉಪಾಹಾರ

ಕಾರವಾರದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದವರೆಗೂ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಲ್ಲಿ ಹಿರಿಯರು, ಮಕ್ಕಳು ಕೂಡ ಇದ್ದರು. ಮಧ್ಯಾಹ್ನದ ವೇಳೆ ಹಸಿವಿನಿಂದ ಕುಳಿತಿದ್ದ ಅವರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಉಪಚರಿಸಿದರು. ನಿಲ್ದಾಣದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ಉಪಾಹಾರ, ನೀರು ನೀಡಿ ಹಸಿವು ನೀಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.